ADVERTISEMENT

ಸೋಂಕು ತಡೆಗೆ ಸಹಕಾರ ನೀಡಿ

ಬಡವರಿಗೆ ದಿನಸಿ ಕಿಟ್‌ ವಿತರಣೆ: ಸಚಿವ ಆರ್. ಶಂಕರ್ ಮನವಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 2:45 IST
Last Updated 18 ಮೇ 2021, 2:45 IST
ರಾಣೆಬೆನ್ನೂರಿನ ಗುಡಿಸಲುವಾಸಿಗಳಿಗೆ ಸಚಿವ ಆರ್. ಶಂಕರ್ ಅವರು ಸೋಮವಾರ ದಿನಸಿ ಕಿಟ್ ವಿತರಿಸಿದರು
ರಾಣೆಬೆನ್ನೂರಿನ ಗುಡಿಸಲುವಾಸಿಗಳಿಗೆ ಸಚಿವ ಆರ್. ಶಂಕರ್ ಅವರು ಸೋಮವಾರ ದಿನಸಿ ಕಿಟ್ ವಿತರಿಸಿದರು   

ರಾಣೆಬೆನ್ನೂರು: ತಾಲ್ಲೂಕಿನ ಜನತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರು. ಅವರ ಆಶೀರ್ವಾದದಿಂದ ಈ ವರೆಗೆ ಮೂರು ಬಾರಿ ಸಚಿವನಾಗಿದ್ದೇನೆ. ಲಾಕ್‌ಡೌನ್ ಸಂದರ್ಭದಲ್ಲಿ ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇನೆ ಎಂದು ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ ಹೇಳಿದರು.

ಇಲ್ಲಿನ ಬಿರೇಶ್ವರನಗರದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಮರಣದ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ ಜನತೆಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಸರ್ಕಾರ ನಿಯಂತ್ರಣಕ್ಕೆ ಮುಂದಾಗಿದ್ದು, ಜನತೆ ಬೆಂಬಲ ನೀಡಬೇಕು. ಮೇಡ್ಲೇರಿಯಲ್ಲಿ ಸ್ವಯಂ ಘೋಷಿತ ಬಂದ್‌ ಮಾಡಿದ್ದಕ್ಕೆ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪ್ರತಿಯೊಬ್ಬರೂ ಮನೆಯಲ್ಲಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಆಸ್ಪತ್ರೆಯಲ್ಲಿ ಇನ್ನೂ 25 ಹಾಸಿಗೆ ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ
ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಔಷಧ ಕೂಡ ಸಾಕಷ್ಟು ಪ್ರಮಾಣದಲ್ಲಿ ಇದೆ. ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಲಾಗುತ್ತಿದೆ ಎಂದರು.

ADVERTISEMENT

ಕೋವಿಡ್‌ ರೋಗಿಗಳು ಆಂಬುಲೆನ್ಸ್‌ ಸಿಗದೆ ತೊಂದರೆ ಅನುಭವಿಸಬಾರದು ಎಂದು ಮೂರು ಆಂಬುಲೆನ್ಸ್ ಖರೀದಿಸಲು ನಿರ್ಧರಿಸಲಾಗಿದೆ ಎಂದರು.

ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನ ಪ್ರತಿಯೊಬ್ಬ ಬಡವರ ಮನೆಗೆ ತೆರಳಿ 5 ಕೆಜಿ ಅಕ್ಕಿ, 1ಕೆ.ಜಿ ಸಕ್ಕರಿ ಮತ್ತು ಟೀ ಪುಡಿಯ ಪೊಟ್ಟಣ ನೀಡಲಾಗುತ್ತಿದೆ. ಕಿಟ್‌ ಪಡೆಯುವಾಗ ಶಿಸ್ತಿನಿಂದ ಪಡೆದುಕೊಳ್ಳಬೇಕು, ಮುಗಿ ಬೀಳಬಾರದು. ಗುಂಪು ಗುಂಪಾಗಿ ಸೇರಬಾರದು ಎಂದು ಮನವಿ ಮಾಡಿದರು.

ಯಾದಗಿರಿ ಜಿಲ್ಲೆಯಲ್ಲಿ 695 ಕೋವಿಡ್‌ ಪ್ರಕರಣಗಳು ಇದ್ದವು. ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದರಿಂದ ಪ್ರಕರಣಗಳ ಸಂಖ್ಯೆ 233 ಕ್ಕೆ ಇಳಿದಿದೆ ಎಂದರು. ರಾಜು ಅಡಿವೆಪ್ಪನವರ, ಕುಬೇರಪ್ಪ ಕೊಂಡಜ್ಜಿ ಹಾಗೂ ನಗರಸಭೆ ಸದಸ್ಯ ಹಬೀಬ ಕಂಬಳಿ, ಮಾಳಪ್ಪ ಪೂಜಾರ, ಸೌದಾಗರ, ಪೊಲೀಸಗೌಡ್‌ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.