ADVERTISEMENT

ಡಿಕೆಶಿ–ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ: ಸಚಿವ ಎಸ್‌.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 13:07 IST
Last Updated 15 ಜುಲೈ 2020, 13:07 IST
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್   

ಹಾವೇರಿ:ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ನೂರಕ್ಕೆ ನೂರರಷ್ಟು ಹೊಂದಾಣಿಕೆ ಇಲ್ಲ. ಆದರೆ, ಬಿಜೆಪಿ ಸಚಿವರಲ್ಲಿ ಯಾವುದೇ ವೈಮನಸ್ಯ ಇಲ್ಲ. ಎಲ್ಲರೂ ಒಟ್ಟಾಗಿದ್ದು, ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಬ್ಯಾಡಗಿ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ವಿರೋಧ ಪಕ್ಷದವರ ಆರೋಪದಲ್ಲಿ ಹುರುಳಿಲ್ಲ. ‘ಲೆಕ್ಕ ಕೊಡಿ’ ಎಂದು ವಿರೋಧ ಪಕ್ಷದವರು ಕೇಳುತ್ತಿದ್ದಾರೆ. ‘ಲೆಕ್ಕ ತೆಗೆದುಕೊಳ್ಳಿ’ ಅಂತ ನಾವೂ ಹೇಳುತ್ತಿದ್ದೇವಲ್ಲ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅಧಿಕಾರಿಗಳ ಸಭೆ ನಡೆಸಿ ಲೆಕ್ಕ ತೆಗೆದುಕೊಳ್ಳಬಹುದು. ಆದರೆ, ಅವರಿಗೆ ಆರೋಪದಲ್ಲಿ ಇರುವ ಆಸಕ್ತಿ, ಲೆಕ್ಕ ನೋಡುವುದರಲ್ಲಿ ಇಲ್ಲ.ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ₹2,300 ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸುತ್ತಾರೆ. ಆದರೆ, ಸರ್ಕಾರ 4 ತಿಂಗಳಲ್ಲಿ ಖರ್ಚು ಮಾಡಿರುವುದೇ ₹560 ಕೋಟಿ ಎಂದು ಹೇಳಿದರು.

ADVERTISEMENT

ರಾಜೀನಾಮೆ ಕೊಟ್ಟು, ಬಿಜೆಪಿ ಸೇರ್ಪಡೆಯಾದವರಿಗೆ ಸಚಿವ ಸ್ಥಾನ ಕೊಡುವುದು ಮತ್ತು ಸಚಿವ ಸ್ಥಾನದಿಂದ ಕಳೆಗಿಳಿಸುವುದು ಮುಖ್ಯಮಂತ್ರಿಯವರ ಪರಮಾಧಿಕಾರ. ಎಲ್ಲರಿಗೂ ನ್ಯಾಯ ಕೊಡುವ ಕೆಲಸವನ್ನು ಸಿ.ಎಂ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.