ADVERTISEMENT

ಹಾನಗಲ್‌: ಮಿಶ್ರ ಕೃಷಿ; ರೈತನಿಗೆ ಖುಷಿ

ಮಾವಿನ ತೋಟದಲ್ಲಿ ಶುಂಠಿ ಮತ್ತು ತರಕಾರಿ; ತೋಟದ ಸುತ್ತ ತೇಗದ ಗಿಡ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:30 IST
Last Updated 10 ಫೆಬ್ರುವರಿ 2020, 19:30 IST
ಮಾವಿನ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಶುಂಠಿ ಬೆಳೆ
ಮಾವಿನ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಶುಂಠಿ ಬೆಳೆ   

ತಿಳವಳ್ಳಿ: ಹಾನಗಲ್‌ತಾಲ್ಲೂಕಿನ ಹುಲಗಡ್ಡಿ ಗ್ರಾಮದ ಪಂಚಪ್ಪ ಮಲ್ಲೇಶಪ್ಪ ತಲ್ಲೂರ ಅವರು ತಮ್ಮ ಮಾವಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಶುಂಠಿ ಮತ್ತು ತರಕಾರಿ ಬೆಳೆದು ಯಶಸ್ವಿಯಾಗಿದ್ದಾರೆ.

ಮೂಲತಃ ಕೃಷಿಯನ್ನೇ ನಂಬಿಕೊಂಡು ಬಂದ ಇವರು ಪಿತ್ರಾರ್ಜಿತವಾಗಿ ಬಂದ 5 ಎಕರೆ 20 ಗುಂಟೆ ಜಮೀನಿನಲ್ಲಿ 6 ಕೊಳವೆ ಬಾವಿಗಳನ್ನು ಕೊರೆಸಿದರು. ಆದರೆ 6 ಕೊಳವೆ ಬಾವಿಗಳಲ್ಲಿ 4 ಕೊಳವೆ ಬಾವಿಗಳು ನೀರು ಸಿಗಲಿಲ್ಲ. ಎರಡರಲ್ಲಿ ಮಾತ್ರ ಸಣ್ಣ ಪ್ರಮಾಣದ ನೀರು ಸಿಕ್ಕಿತು. ಈ ಎರಡು ಬೋರವೆಲ್‌ಗಳ ಸಹಾಯದಿಂದ 3 ಎಕರೆ ಪ್ರದೇಶಕ್ಕೆ ಅಡಿಕೆ ಮತ್ತು ಬಾಳೆಯನ್ನು, 2 ಎಕರೆ 20 ಗುಂಟೆ ಪ್ರದೇಶದಲ್ಲಿ ಮಾವು, ಚಿಕ್ಕು ಗಿಡಗಳನ್ನು ಹಚ್ಚಲಾಗಿದೆ.

ಮಾವು ಮತ್ತು ಚಿಕ್ಕು ಗಿಡಗಳ ಮಧ್ಯೆ ಶುಂಠಿ, ಮೆಣಸು ಹಾಗೂ ತರಕಾರಿಯನ್ನು ಬೆಳೆಯಲಾಗಿದೆ. ಮೆಣಸು ಹಾಗೂ ತರಕಾರಿಯನ್ನು ಶುಂಠಿ ಬೆಳೆ ನಡುವೆ ಬೆಳೆಯುವುದರಿಂದ ಹೆಚ್ಚು ಖರ್ಚು ಬರುವುದಿಲ್ಲ. ಶುಂಠಿಗೆ ಹಾಕಿದ ನೀರು, ಗೊಬ್ಬರವೇ ಸಾಕಾಗುತ್ತದೆ. ಮೆಣಸಿನ ಸಸಿ ಹಚ್ಚಿದಾಗ ಮುರುಟು ರೋಗ ಬಾಧೆಗಾಗಿ ಔಷಧ ಸಿಂಪಡಿಸಿದ್ದನ್ನು ಬಿಟ್ಟರೆ ಬೇರೆನೂ ಖರ್ಚು ಮಾಡಿಲ್ಲ. ಹೀಗಾಗಿ ₹ 50 ಸಾವಿರ ಲಾಭ ಗಳಿಸಿದ್ದೇನೆ ಎನ್ನುತ್ತಾರೆ ಪಂಚಪ್ಪ ತಲ್ಲೂರ.

ADVERTISEMENT

ಈ ತೋಟ ಮಾಡಿ 6 ವರ್ಷಗಳಾಗಿದ್ದು, ಅತಿ ಕಡಿಮೆ ನೀರಿನಲ್ಲಿ 5.20 ಎಕರೆ ಪ್ರದೇಶದಲ್ಲಿ 80 ಮಾವಿನ ಗಿಡಗಳು, 50 ಚಿಕ್ಕು ಗಿಡಗಳು, 60 ತೆಂಗಿನ ಗಿಡಗಳು ಹಾಗೂ ತೋಟದ ಸುತ್ತಲು 150 ತೇಗದ ಗಿಡಗಳಿವೆ. ಅಲ್ಲದೇ ಮಾವಿನ ತೋಟದ ಮಧ್ಯೆ ಶುಂಠಿ ಮೆಣಸು, ಹಿರೇಕಾಯಿ, ಅವರೆಕಾಯಿಯನ್ನು ಬೆಳೆಯಲಾಗಿದೆ. 2 ಹಾಲು ಕೋಡುವ ಹಸುಗಳಿವೆ. ಹೈನಿಗೆ ಬೇಕಾದ ಹೈಬ್ರಿಡ್ ಹುಲ್ಲನ್ನು ಇವರ ತೋಟದಲ್ಲೇ ಬೆಳೆಸುತ್ತಾರೆ.

ಅಡಿಕೆ, ಚಿಕ್ಕು ಗಿಡಗಳಿಗೆ ವರ್ಷಕ್ಕೆ ಒಮ್ಮೆ ರಾಸಾಯನಿಕ ಹಾಗೂ ಸಗಣಿ ಗೊಬ್ಬರವನ್ನು ಹಾಕುತ್ತೇವೆ. ಹಾಗೂ ಗಿಡಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ನೀರನ್ನು ಹಾಯಿಸಲಾಗುತ್ತಿದೆ. ಇದರಿಂದ ಅಡಿಕೆ ಬೆಳೆಯಿಂದ ₹ 2 ಲಕ್ಷ, ಮಾವು ಹಾಗೂ ಚಿಕ್ಕು ಬೆಳೆಯಿಂದ ₹ 1 ಲಕ್ಷ ಲಾಭ ಗಳಿಸಿದ್ದೇವೆ. ಶುಂಠಿ ಬೆಳೆಯಿಂದ ಸುಮಾರು ₹ 5 ಲಕ್ಷ ಲಾಭ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಪಂಚಪ್ಪ ಅವರ ಪತ್ನಿ ಗಿರಿಜಮ್ಮ

‘ಬೆಲೆ ಕುಸಿತ, ಹವಮಾನದ ವೈಪರೀತ್ಯ, ರೋಗಗಳಿಂದ ನಷ್ಟಕ್ಕೆ ಒಳಗಾದ ರೈತರು ಮಿಶ್ರ ಕೃಷಿಯಿಂದ ನಷ್ಟ ಸರಿದೂಗಿಸಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಮಿಶ್ರ ಬೆಳೆಗೆ ಸರಿಯಾದ ಪ್ರೋತ್ಸಾಹ ನೀಡಿದಲ್ಲಿ ನಮ್ಮ ದೇಶದ ರೈತ ನೆಮ್ಮದಿ ಜೀವನ ಸಾಗಿಸುವುದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ ರೈತ ಪಂಚಪ್ಪ ತಲ್ಲೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.