ADVERTISEMENT

ಮಿಶ್ರ ಬೆಳೆ ಬೆಳೆದು ಲಾಭದ ಹೊಳೆ

ಪಪ್ಪಾಯಿ ಬೆಳೆಯಿಂದ ₹80 ಸಾವಿರ ಲಾಭ: ನಳನಳಿಸುವ ಹಣ್ಣಿನ ಗಿಡಗಳು

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:30 IST
Last Updated 12 ಜುಲೈ 2021, 19:30 IST
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿನ ಪಪ್ಪಾಯಿ ಬೆಳೆಯೊಂದಿಗೆ ರೈತ ಆನಂದ ಸುಬೇದಾರ
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿನ ಪಪ್ಪಾಯಿ ಬೆಳೆಯೊಂದಿಗೆ ರೈತ ಆನಂದ ಸುಬೇದಾರ   

ಶಿಗ್ಗಾವಿ: ‘ತೋಟಗಾರಿಕೆ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳುವಮೂಲಕ ಉತ್ತಮ ಫಲ ಪಡೆದು ತೋಟಗಾರಿಕೆಯಲ್ಲಿ ಪರಂಗಿ (ಪಪ್ಪಾಯಿ) ಬೆಳೆ ತೆಗೆಯುವುದರಲ್ಲಿ ಸೈ ಎನ್ನಿಸಿಕೊಂಡಿದ್ದಾರೆ’ ಪಟ್ಟಣದ ರೈತ ಆನಂದ ಸುಬೇದಾರ.

ಪಟ್ಟಣಕ್ಕೆ ಹತ್ತಿರದಲ್ಲಿರುವ ಸ್ವಂತ ಒಂದು ಎಕರೆ ಜಮೀನಿನಲ್ಲಿ ಒಂದೂವರೆ ಇಂಚು ನೀರಿದ್ದು, ನೀರಾವರಿ ಜಮೀನು ಮಾಡಿದ್ದಾರೆ. ಅದರಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದಾರೆ. ಸಾವಯವ ಗೊಬ್ಬರ ಬಿಟ್ಟು ಬೇರಾವುದೇ ಗೊಬ್ಬರ ಹಾಕಿಲ್ಲ. ಬೀಜ, ಗೊಬ್ಬರ ಹಾಗೂ ಕೂಲಿಕಾರ್ಮಿಕರಿಗೆ ಸೇರಿದಂತೆ ಸುಮಾರು ₹10 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ.

‘380 ಪಪ್ಪಾಯಿ ಸಸಿಗಳನ್ನು ನೆಡಲಾಗಿದೆ. ಈಗ ಬೆಳೆ ಉತ್ತಮ ಫಲ ಬಿಟ್ಟಿದ್ದು, ಆರಂಭದಲ್ಲಿಯೇ ಸುಮಾರು ₹70-80 ಸಾವಿರ ಲಾಭ ನೀಡಿದೆ. ಇನ್ನು ಫಲ ಸರಿಯಾಗಿ ಬಿಟ್ಟರೆ ಹೆಚ್ಚಿನ ಲಾಭ ಬರಲಿದೆ. ಮಾರುಕಟ್ಟೆಯಲ್ಲಿ ಮಾರಾಟ ಚೆನ್ನಾಗಿದೆ’ ಎಂದು ರೈತ ಆನಂದ ಸುಬೇದಾರ ಹರ್ಷ ವ್ಯಕ್ತಪಡಿಸುತ್ತಾರೆ.

ADVERTISEMENT

ಪಪ್ಪಾಯಿ ಬೆಳೆ ಜತೆಗೆ 100 ತೆಂಗು, 210 ಅಡಿಕೆ, 40 ಸಾಗವಾನಿ, 10 ಹಲಸು, 10 ಮಾವು, 20 ಪೇರಲ, 10 ನೀರಲೆ, 20 ಬಾಳೆ ಸೇರಿದಂತೆ ಹತ್ತಾರು ತೋಟಗಾರಿಕೆ ಮಿಶ್ರ ಬೆಳೆ ಬೆಳೆದಿದ್ದಾರೆ. ಇನ್ನು ಮೂರು ಎಕರೆ ಜಮೀನಿನಲ್ಲಿ ಸೋಯಾಬಿನ್, ಗೋವಿನಜೋಳ ಬೆಳೆದಿದ್ದಾರೆ.

‘ರೈತರು ಮಿಶ್ರ ಬೆಳೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಪ್ರಾಮಾಣಿಕತೆ, ಬೆಳೆದ ಬೆಳೆಗಳ ಬಗ್ಗೆ ನಂಬಿಕೆ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದಾಗ ಲಾಭ ಗಳಿಸಲು ಸಾಧ್ಯವಿದೆ’ ಎನ್ನುತ್ತಾರೆ ರೈತ ಆನಂದ.

ಪ್ರತಿ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆಯುವಾಗ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಕಟಣೆ ನೀಡಲಾಗುತ್ತಿದೆ. ಸಾಕಷ್ಟು ಬಾರಿ ಮೌಖಿಕವಾಗಿ ರೈತರಿಗೆ ಹೇಳಲಾಗುತ್ತಿದೆ. ಮಿಶ್ರ ಬೆಳೆಗಳು ಉತ್ತಮ ಫಲ ನೀಡುತ್ತವೆ. ಇನ್ನಾದರೂ ರೈತರ ಜಾಗೃತರಾಗಿ ‘ಮಿಶ್ರ ಬೆಳೆ’ ಬೆಳೆಯಬೇಕು ಎಂದು ಕೃಷಿ ಅಧಿಕಾರಿ ವಿಜಯಕುಮಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.