ADVERTISEMENT

ಜೀವಸೆಲೆಗೇ ವಿಷ; ಮೀನುಗಳ ಮಾರಾಣಹೋಮ

ಶಿಗ್ಗಾವಿಯ ಗಂಗೇನೂರಿನಲ್ಲಿ ಅಮಾನವೀಯ ಕೃತ್ಯ, ಬಣವೆಗೂ ಬೆಂಕಿ ಇಟ್ಟ ಕಿಡಿಗೇಡಿಗಳು

ಎಂ.ಸಿ.ಮಂಜುನಾಥ
Published 29 ಆಗಸ್ಟ್ 2019, 14:33 IST
Last Updated 29 ಆಗಸ್ಟ್ 2019, 14:33 IST
ಕೆರೆಯಲ್ಲಿ ಸತ್ತಿರುವ ಮೀನುಗಳು
ಕೆರೆಯಲ್ಲಿ ಸತ್ತಿರುವ ಮೀನುಗಳು   

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗಂಗೇನೂರು ಕೆರೆಯಲ್ಲಿದ್ದ 2 ಸಾವಿರಕ್ಕೂ ಹೆಚ್ಚು ಮೀನುಗಳು ‘ನಿಗೂಢ’ವಾಗಿ ಅಸುನೀಗಿವೆ. ಆ.17ರ ರಾತ್ರಿ ಸಮೀಪದ ಹುಲ್ಲಿನ ಬಣವೆಯೊಂದಕ್ಕೆ ಬೆಂಕಿ ಇಟ್ಟಿದ್ದ ಕಿಡಿಗೇಡಿಗಳೇ, ಕೆರೆಗೂ ವಿಷ ಸುರಿದು ಹೋಗಿರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆರೆಯ ನೀರನ್ನು ಸಂಗ್ರಹಿಸಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ‘ಕೆರೆಯಿಂದ ನೀರನ್ನು ಸಂಪೂರ್ಣ ಹೊರಗೆ ಬಿಟ್ಟಿದ್ದೇವೆ. ಮಂಗಳವಾರದೊಳಗೆ ತಜ್ಞರ ವರದಿ ಕೈಸೇರಲಿದ್ದು, ನೀರಿಗೆ ಯಾವ ವಿಷ ಅಥವಾ ಕ್ರಿಮಿನಾಶಕ ಬೆರಕೆಯಾಗಿದೆ ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರವಾಹ ಗೆದ್ದು, ಇಲ್ಲಿ ಸೋತೆ:ಫಕ್ಕೀರಪ್ಪ ನಾಗಪ್ಪ ಬಂಕಾಪುರ ಎಂಬ ರೈತ, ಮೌಲಾಸಾಬ್ ಬೆಳಗಲಿ ಎಂಬುವರ ಮನೆಯ ಹಿತ್ತಲಲ್ಲಿ ಬಣವೆ ಹಾಕಿದ್ದರು. ಆ.17ರ ರಾತ್ರಿ 1 ಗಂಟೆ ಸುಮಾರಿಗೆ ಯಾರೋ ಕಿಡಿಗೇಡಿಗಳು ಅದಕ್ಕೆ ಬೆಂಕಿ ಇಟ್ಟಿದ್ದರು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮೂರು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದರು.

ADVERTISEMENT

‘ಪ್ರವಾಹ ಬಂದ ಸಂದರ್ಭದಲ್ಲಿ ನಮ್ಮ ಮನೆಯ ಒಂದು ಬಣವೆ ಕೊಚ್ಚಿ ಹೋಯಿತು. ಹೀಗಾಗಿ, ಉಳಿದಿದ್ದ ಬಣವೆಯನ್ನು ಉಳಿಸಿಕೊಳ್ಳಲು ತಕ್ಷಣ ಅಲ್ಲಿಗೆ ಸ್ಥಳಾಂತರಿಸಿದ್ದೆ. ಆದರೆ, ಯಾರೋ ಅದನ್ನೂ ನಾಶಮಾಡಿಬಿಟ್ಟರು’ ಎನ್ನುತ್ತ ಫಕ್ಕೀರಪ್ಪ ದುಃಖತಪ್ತರಾದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಬಣವೆ ಒಡ್ಡಿದ್ದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲೇ ಕೆರೆ ಇದೆ. ಆ ನೀರನ್ನು ದಿನಬಳಕೆಗೆ ಬಳಸುತ್ತಿದ್ದ ಕಾರಣ, ಶುದ್ಧವಾಗಿರೆಲೆಂದು ಗ್ರಾಮಸ್ಥರೆಲ್ಲ ಸೇರಿ 2 ಸಾವಿರ ಮೀನುಗಳನ್ನು ತಂದು ಬಿಟ್ಟಿದ್ದೆವು. ಈಗ ಒಂದೊಂದೂ ಸುಮಾರು ಅರ್ಧ ಕೆ.ಜಿಯಷ್ಟು ಬೆಳೆದಿದ್ದವು’ ಎಂದು ವಿವರಿಸಿದರು.

‘ಬಣವೆ ಸುಟ್ಟು ಹೋದ ಬೇಸರದಲ್ಲೇ, ನಾನು ಹಾಗೂ ಸ್ನೇಹಿತರು ಆ ರಾತ್ರಿ ಅಲ್ಲೇ ಕೂತಿದ್ದೆವು. ನಸುಕಿನ ವೇಳೆ 4 ಗಂಟೆ ಸುಮಾರಿಗೆ ಎಲ್ಲ ಮೀನುಗಳೂ ಒಂದೇ ಸಲ ವಿಲ–ವಿಲ ಒದ್ದಾಡಲಾರಂಭಿಸಿದವು. ಆ ಸದ್ದು ಕೇಳಿ ತಕ್ಷಣ ಕೆರೆ ಸಮೀಪ ಓಡಿದ್ದೆವು. ಏನಾಗುತ್ತಿದೆ ಎಂಬುದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ.’

‘ಬೆಳಗಾಗುವಷ್ಟರಲ್ಲಿ ಅಷ್ಟೂ ಮೀನುಗಳು ಸತ್ತು ತೇಲುತ್ತಿದ್ದೆವು. ಅಲ್ಲೇ ಕ್ರಿಮಿನಾಶಕದ ಬಾಟಲಿಗಳೂ ಬಿದ್ದಿದ್ದವು. ಈ ಕೆರೆಯನ್ನು ನಾನೇ ಮುತುವರ್ಜಿ ವಹಿಸಿ ಅಭಿವೃದ್ಧಿಪಡಿಸಿದ್ದರಿಂದ, ನನ್ನ ಎದುರಾಳಿಗಳೇ ಬಣವೆಯ ಜೊತೆಗೆ ಕೆರೆಯನ್ನೂ ನಾಶ ಮಾಡಿರಬಹುದು. ಹೀಗಾಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಿಗ್ಗಾವಿ ಠಾಣೆಗೆ ದೂರು ಕೊಟ್ಟಿದ್ದೇನೆ’ ಎಂದು ಫಕ್ಕೀರಪ್ಪ ಹೇಳಿದರು.

ಕೀಟನಾಶಕವೂ ಆಗಿರಬಹುದು:‘ಕೆರೆಯ ಸುತ್ತಲೂ ಗೋವಿನ ಜೋಳದ ಹೊಲಗಳಿವೆ. ರೈತರು ತಿಂಗಳ ಹಿಂದೆ ಬೆಳೆಗೆ ಕೀಟನಾಶಕ ಸಿಂಪಡಿಸಿದ್ದರು. ಪ್ರವಾಹದ ಸಂದರ್ಭದಲ್ಲಿ ಹೊಲದೊಳಗೆ ನುಗ್ಗಿದ್ದ ನೀರು, ಕೀಟನಾಶಕದೊಂದಿಗೆ ಹರಿದು ಬಂದು ಈ ಕೆರೆಯನ್ನೂ ಸೇರಿರಬಹುದು. ಇಂತಹ ಹಲವು ಸಾಧ್ಯತೆಗಳಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಫಕ್ಕೀರಪ್ಪ ಅವರ ವಿರೋಧಿಗಳನ್ನೂ ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಶಿಗ್ಗಾವಿ ಪೊಲೀಸರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಬೇರೆ ನೀರಿಗೂ ಬದುಕಲಿಲ್ಲ:‘ಸುಮಾರು ಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆ, ಬೇಸಿಗೆಯಲ್ಲೂ ಬತ್ತುತ್ತಿರಲಿಲ್ಲ. ಹೀಗಾಗಿ, ಇದು ಗ್ರಾಮಸ್ಥರ ಪಾಲಿಗೆ ಜೀವಸೆಲೆಯಾಗಿತ್ತು. ಬೆಳಿಗ್ಗೆ ಕೆರೆಯಲ್ಲಿ ಒದ್ದಾಡುತ್ತಿದ್ದ ಕೆಲ ಮೀನುಗಳನ್ನು ಹಿಡಿದು, ಶುದ್ಧ ನೀರಿನಲ್ಲಿ ಹಾಕಿ ಉಳಿಸಿಕೊಳ್ಳಲು ಯತ್ನಿಸಿದೆವು. ಆದರೆ, ಪ್ರಯೋಜನವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ಮೌಲಾಸಾಬ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.