ADVERTISEMENT

ಹೊಸ ಕೊಳವೆಬಾವಿ ಕೊರೆಸಲು ಶಾಸಕ ಬಸವರಾಜ ಶಿವಣ್ಣನವರ ಸೂಚನೆ

ಕುಡಿಯುವ ನೀರು ಪೂರೈಸುವ ಪಂಪ್‌ಸೆಟ್‌ಗಳಿಗೆ ಮೀಟರ್‌ ಬೇಡ: ಶಾಸಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 6:58 IST
Last Updated 25 ಜನವರಿ 2024, 6:58 IST
ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧ ಸಭಾ ಭವನದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.
ಬ್ಯಾಡಗಿ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧ ಸಭಾ ಭವನದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.   

ಬ್ಯಾಡಗಿ: ತಾಲ್ಲೂಕಿನಾದ್ಯಂತ ಫೆಬ್ರುವರಿ ಅಂತ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದಾಗಿದ್ದು, ಪ್ರಸ್ತುತ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸಲು ಮುಂದಾಗಿರುವ ರೈತರ ಕೊಳವೆ ಬಾವಿಗಳಿಗೆ ಹೆಸ್ಕಾಂ ಅಧಿಕಾರಿಗಳು ಮೀಟರ್‌ ಅಳವಡಿಸಬಾರದು ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ ನೀಡಿದರು.

ಬುಧವಾರ ಪಟ್ಟಣದ ಸುವರ್ಣಸೌಧ ಸಭಾ ಭವನದಲ್ಲಿ ಜರುಗಿದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಎಇಇ ಸುರೇಶ ಬೇಡರ ಅವರು ಶಾಸಕರ ಗಮನಕ್ಕೆ ತಂದಾಗ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮುಂಗಾರು ಕೈಕೊಟ್ಟಿದ್ದು ಕೆರೆಗಳು ಖಾಲಿಯಾಗಿವೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ರೈತರು ನೀರು ಕೊಡುವುದೇ ಒಂದು ಪುಣ್ಯದ ಕೆಲಸವಾಗಿದೆ. ಅದಕ್ಕೆ ಮೀಟರ್‌ ಅಳವಡಿಸುವ ಸಾಹಸಕ್ಕೆ ಕೈಹಾಕಬಾರದು ಎಂದರು.

ADVERTISEMENT

ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಹೊಸ ಕೊಳವೆಬಾವಿ ಕೊರೆಸುವ ಅಥವಾ ಇದ್ದ ಕೊಳವೆ ಬಾವಿಗಳಿಗೆ ರಿಡ್ರಿಲ್ಲಿಂಗ್‌ಗೆ ಅನುದಾನ ಒದಗಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ದ್ವಂದ್ವ ನಿಲುವು ಹೊಂದಿದ್ದಾರೆ. ಕೂಡಲೇ  ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಸಂಪೂರ್ಣ ಚಿತ್ರಣವನ್ನು ಒದಗಿಸುವಂತೆ ಸೂಚಿಸಿದರು.

ರಾಣೆಬೆನ್ನೂರ ತಾಲ್ಲೂಕಿನ ಮುದೇನೂರು ರೈಸಿಂಗ ಲೈನ್ ನಿಂದ 7.1ಎಂಎಲ್‌ಡಿ ಕಚ್ಚಾ ನೀರು ಪೂರೈಕೆಯಾಗುತ್ತಿದೆ. ಆದರೆ ಕದರಮಂಡಲಗಿ, ಅಸುಂಡಿ, ಹೂಲಿಹಳ್ಳಿ ಗ್ರಾಮಗಳಲ್ಲಿ ನೀರು ಅನಾವಶ್ಯಕವಾಗಿ ಪೋಲಾಗುತ್ತಿದ್ದು, ಬ್ಯಾಡಗಿ ಪಟ್ಟಣ ತಲುಪುವ ವೇಳೆಗೆ 3.5 ಎಂಎಲ್‌ಡಿ ಇಳಿಕೆಯಾಗುತ್ತದೆ. ಇದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಕಷ್ಟವಾಗಿದೆ. ಮೂರು ಗ್ರಾಮಗಳಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿಕೊಂಡು ಅವರು ಬಳಸುವಂತಹ ನೀರಿನ ಕರವನ್ನು ಪುರಸಭೆಗೆ ತುಂಬುವಂತೆ ಸೂಚಿಸಿವಂತೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ ಸಭೆಯ ಗಮನಕ್ಕೆ ತಂದರು.

ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಣೆಬೆನ್ನೂರ, ಹಾವೇರಿ, ಬ್ಯಾಡಗಿ ತಾಲ್ಲೂಕಿನ ಗ್ರಾಮಗಳಲ್ಲಿ ಜಂಗಲ್ ಕಟ್ಟಿಂಗ್ ನಡೆಯದೆ ಇರುವುದರಿಂದ ಗುಣಮಟ್ಟದ ಕೊರತೆ ಎದುರಿಸುವ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಅವುಗಳನ್ನೂ ಮುಚ್ಚಲು ಪಿಡಬ್ಲೂಡಿ ಉಪ ವಿಭಾಗದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಡಿಪಿ ಸಭೆಗೆ ಗೈರಾಗುವ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ಕ್ರಮ ಶಿಸ್ತು ಕ್ರಮ ಕೈಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಹೇಳಿದ ಶಾಸಕ ಶಿವಣ್ಣನವರ ಕಾಗಿನೆಲೆ ಕನಕ ಉದ್ಯಾನದ ಅಸುಪಾಸಿನಲ್ಲಿ ಸಸಿ ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ನಾಮ ನಿರ್ದೇಶಿತ ಸದಸ್ಯರಾದ ಪರಮೇಶಗೌಡ ತೆವರಿ, ನಾಗನಗೌಡ ಪಾಟೀಲ, ಇಒ ಕೆ.ಎಂ.ಮಲ್ಲಿಕಾರ್ಜುನ, ತಹಶೀಲ್ದಾರ ಫಿರೋಜ್‌ಷಾ ಸೋಮನಕಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.