ADVERTISEMENT

‘ಲಂಚ ಪಡೆದು ಮನೆ ಹಂಚಿಕೆ’: ಶಾಸಕ ನೆಹರು ಓಲೇಕಾರ ಗಂಭೀರ ಆರೋಪ

ಪತ್ರಿಕಾಗೋಷ್ಠಿಯಲ್ಲಿ ‘ಆಡಿಯೊ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:30 IST
Last Updated 18 ಜೂನ್ 2021, 16:30 IST
ನೆಹರು ಓಲೇಕಾರ, ಶಾಸಕ 
ನೆಹರು ಓಲೇಕಾರ, ಶಾಸಕ    

ಹಾವೇರಿ: ‘ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಅವಧಿಯಲ್ಲಿ ‘ಆಶ್ರಯ ಸಮಿತಿ’ ವಸತಿ ಯೋಜನೆಯಡಿ, ಲಂಚ ಪಡೆದು ಅನರ್ಹರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಶಾಸಕ ನೆಹರು ಓಲೇಕಾರ ಗಂಭೀರ ಆರೋಪ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘1112 ಫಲಾನುಭವಿಗಳ ಆಯ್ಕೆಯಲ್ಲಿ 328 ಮಂದಿ ಮಾತ್ರ ಅರ್ಹ ಫಲಾನುಭವಿಗಳಿದ್ದು, ಉಳಿದವರು ಅನರ್ಹರಾಗಿದ್ದಾರೆ. ₹5ರಿಂದ ₹25 ಸಾವಿರದವರೆಗೆ ಲಂಚ ಪಡೆದು, ಮನೆ ಇದ್ದವರನ್ನೂ ಫಲಾನುಭವಿಗಳು ಎಂದು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

ನಮ್ಮ ಅವಧಿಯಲ್ಲಿ ಆಶ್ರಯ ಸಮಿತಿ ಮೂಲಕ ಮನೆ–ಮನೆಗೆ ಭೇಟಿ ನೀಡಿ, ಪರಿಶೀಲಿಸಿದಾಗ ಅನರ್ಹರು ಪಟ್ಟಿಯಲ್ಲಿ ಇರುವುದು ಕಂಡು ಬಂದಿದೆ. ಹೀಗಾಗಿ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಎರಡು ಮೂರು ದಿನಗಳಲ್ಲಿ ನಗರಸಭೆ ‘ನೋಟಿಸ್‌ ಬೋರ್ಡ್‌’ನಲ್ಲಿ ಹೊಸ ಫಲಾನುಭವಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ತಕರಾರು ಸಲ್ಲಿಸುವುದಕ್ಕೆ 15 ದಿನಗಳ ಕಾಲಾವಕಾಶ ನೀಡುತ್ತೇವೆ. ಅದರಲ್ಲೂ ಅನರ್ಹರಿದ್ದರೆ, ಅಂಥವರನ್ನು ಕೈಬಿಡುತ್ತೇವೆ’ ಎಂದು ಹೇಳಿದರು.

ADVERTISEMENT

ನಾವು ಆಶ್ರಯ ಮನೆಗಳನ್ನು ಮಾರಾಟ ಮಾಡಿಕೊಂಡಿಲ್ಲ. ಬಡವರಿಗೆ, ನಿರ್ಗತಿಕರಿಗೆ ಮನೆ ನೀಡಲು ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿರುವ ಶಾಸಕ ಎಂ.ಬಿ.ಪಾಟೀಲರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ. ಕಾಂಗ್ರೆಸ್‌ ನಾಯಕರು ಆರೋಪ ಮಾಡುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರು.

ಆಡಿಯೊ ಬಿಡುಗಡೆ:

ಫಲಾನುಭವಿಯೊಬ್ಬ ಮತ್ತು ವಾರ್ಡ್‌ ಸದಸ್ಯನ ನಡುವೆ ನಡೆದ ಸಂಭಾಷಣೆಯ ಆಡಿಯೊ ತುಣುಕನ್ನು ಶಾಸಕರು ಬಿಡುಗಡೆ ಮಾಡಿದರು. ಅದರಲ್ಲಿ ಫಲಾನುಭವಿ ‘ಮನೆ ಕೊಡಿಸಿ ಇಲ್ಲವೇ ನನ್ನ ಹಣ ವಾಪಸ್‌ ನೀಡಿ’ ಎಂದು ಕೇಳಿದ್ದಾನೆ. ಅದಕ್ಕೆ ವಾರ್ಡ್‌ ಸದಸ್ಯ ಉತ್ತರಿಸಿ, ಪಟ್ಟಿ ರದ್ದಾಗಿಲ್ಲ, ನಾವು ತಡೆಯಾಜ್ಞೆ ತಂದಿದ್ದೇವೆ. ರದ್ದಾದರೆ ಹಣ ವಾಪಸ್‌ ಕೊಡುತ್ತೇವೆ. ₹25 ಸಾವಿರ ಕೊಟ್ಟವರೇ ಸುಮ್ಮಿನಿದ್ದಾರೆ, ₹5 ಸಾವಿರ ಕೊಟ್ಟವ ನೀನು ಗದ್ದಲ ಎಬ್ಬಿಸಿದರೆ ಹೇಗೆ’ ಎಂಬ ಮಾತುಕತೆ ಆಡಿಯೊದಲ್ಲಿದೆ.

ರಾಜಕಾಲುವೆ ಒತ್ತುವರಿ:

ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ರುದ್ರಪ್ಪ ಲಮಾಣಿ ಮನೆ ಕಟ್ಟಿಕೊಂಡಿದ್ದಾರೆ. ಇದರಿಂದ ಬಸವಣ್ಣನ ಕೆರೆಗೆ ಹೋಗುವ ನೀರು ನಗರದೊಳಗೆ ನುಗ್ಗುತ್ತಿದೆ. ಈ ಹಿಂದೆ ವ್ಯಕ್ತಿಯೊಬ್ಬ ಮಳೆ ನೀರಿನಲ್ಲಿ ತೇಲಿಕೊಂಡು ಬಂದು, ಕಾಲುವೆಗೆ ಸಿಲುಕಿ ಅಸುನೀಗಿದ್ದಾನೆ. ಇಷ್ಟಾದರೂ ಸ್ಥಳ ಪರಿಶೀಲನೆ ಮಾಡದೆ, ಕಾಂಗ್ರೆಸ್‌ ನಾಯಕರ ಮಾತು ಕೇಳಿ ಒತ್ತುವರಿ ತೆರವಿಗೆ ‘ತಡೆಯಾಜ್ಞೆ’ ನೀಡಿರುವ ಬೆಳಗಾವಿ ಪ್ರಾದೇಶಿಕ ಅಧಿಕಾರಿ ಆದಿತ್ಯಾ ಅಮ್ಲಾನ್‌ ಬಿಸ್ವಾಸ್‌ ‘ಕಾಂಗ್ರೆಸ್‌ ಏಜೆಂಟ್‌’ ರೀತಿ ವರ್ತಿಸುತ್ತಿದ್ದಾರೆ ಎಂದು ಜರಿದರು.

ಪತ್ರಿಕಾಗೋಷ್ಠಿಯಲ್ಲಿ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರಾದ ಜಗದೀಶ ಮಲಗೌಡ, ಗಿರೀಶ ತುಪ್ಪದ, ಶಿವರಾಜ್‌ ಮತ್ತೀಹಳ್ಳಿ, ರತ್ನ ಭೀಮಕ್ಕನವರ್‌, ಬಾಬುಸಾಬ್‌ ಮೋಮಿನ್‌ಗಾರ್‌, ಲಲಿತಾ ಗುಂಡೇನಹಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.