
ಸವಣೂರು: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿನ ಹಲವಾರು ದೂರುಗಳ ಆಧಾರದ ಮೇಲೆ ದಿಢೀರ್ ಭೇಟಿ ನೀಡಿದ ಶಾಸಕ ಯಾಸೀರ್ ಅಹ್ಮದಖಾನ ಪಠಾಣ ವೈದ್ಯಾಧಿಕಾರಿ ಡಾ.ಎಸ್.ವೈ ಹಿರೇಗೌಡ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಅಸ್ವಚ್ಛತೆ ಕಂಡು ಕೆಂಡಾಮಂಡಲವಾದ ಶಾಸಕರು, ಕೂಡಲೇ ಸ್ವಚ್ಛತೆ ಕೈಗೊಳ್ಳಲು ನೇಮಿಸಿದ ಸಿಬ್ಬಂದಿಯನ್ನು ತೆಗೆದು ಹಾಕಿ ಬೇರೆ ಸಿಬ್ಬಂದಿ ನೇಮಿಸಿ, ಸ್ವಚ್ಛತೆಗೆ ನೇಮಿಸಿದ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ, ಅವರನ್ನು ತೆಗೆದು ಬೇರೆಯವರನ್ನು ನೇಮಕ ಮಾಡಿಕೊಳ್ಳಲು ಗುತ್ತಿಗೆ ಪಡೆದ ಸಂಸ್ಥೆಗೆ ತಿಳಿಸಿ ಎಂದರು.
ಸ್ವಚ್ಛತಾ ಸಿಬ್ಬಂದಿಯನ್ನು ರಕ್ತ ತಪಾಸಣೆಗೆ ನೇಮಿಸಲಾಗುತ್ತಿದೆ. ರಕ್ತದ ಒತ್ತಡವನ್ನು ಪರೀಕ್ಷಿಸುವ ಸಾಧನ ಸಲಕರಣೆಗಳಿಲ್ಲ. ಸಿಜೇರಿಯನ್ ಮಾಡಲು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಹಲವಾರು ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾದವು.
ಒಪಿಡಿಯನ್ನು ನಿಗಧಿತ ಸಮಯಕ್ಕೆ ತೆರೆಯದೆ ರೋಗಿಗಳನ್ನು ಪರದಾಡುವಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು.
ಔಷಧ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಗಳನ್ನು ನೇಮಿಸಲಾಗುತ್ತಿದೆ. ಇಲ್ಲಿನ ವೈದ್ಯರು ಖಾಸಗಿ ಸೇವೆ ಸಲ್ಲಿಸುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಈ ಕುರಿತು ಅತಿಶೀಘ್ರದಲ್ಲಿ ಜಿಲ್ಲಾಧಿಕಾರಿ, ಸಿ.ಇ.ಒ, ಡಿ.ಎಚ್.ಒ ಅವರನ್ನು ಆಹ್ವಾನಿಸಿ ಸಭೆ ಕೈಗೊಳ್ಳುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ ಮುಲ್ಲಾ, ಪಂಚ ಗ್ಯಾರಂಟಿ ಅಧ್ಯಕ್ಷ ಸುಭಾಸ್ ಮಜ್ಜಗಿ, ಆಸ್ಪತ್ರೆ ಆರೋಗ್ಯ ರಕ್ಷಣಾ ಸಮಿತಿ ಸದಸ್ಯರಾದ ಶಿವಣ್ಣ.ವೈ, ಯಲ್ಲಪ್ಪ ಕನಕಣ್ಣನವರ, ಪ್ರಮುಖರಾದ ನಾಗಪ್ಪ ತಿಪ್ಪಕ್ಕನವರ, ಮೌಲಾಸಾಬ ಹೊಂಬರಡಿ, ಮಹೇಶ ಅಪ್ಪಣ್ಣವರ, ಮಹೇಶ ದಳವಾಯಿ, ಪೀರ ಅಹ್ಮದ ಗವಾರಿ, ಫಜಲ್ ಅಹ್ಮದಖಾನ ಪಠಾಣ, ಅಶೋಕ ಮನ್ನಂಗಿ, ರಮೇಶ ಹರಿಜನ, ನಾಗಪ್ಪ ಬಾರ್ಕಿ, ಮಲ್ಲೇಶ ಹರಿಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.