ADVERTISEMENT

ಮಾಜಿ ಶಾಸಕ ಕೆ.ಬಿ.ಕೋಳಿವಾಡ ಜನ್ಮದಿನದ ಅಂಗವಾಗಿ ಉದ್ಯೋಗ ಮೇಳ ನ. 15ರಂದು

ಮಾಜಿ ಶಾಸಕ ಕೆ.ಬಿ.ಕೋಳಿವಾಡ ಜನ್ಮದಿನದ ಅಂಗವಾಗಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:46 IST
Last Updated 24 ಅಕ್ಟೋಬರ್ 2025, 4:46 IST
ಪ್ರಕಾಶ ಕೋಳಿವಾಡ 
ಪ್ರಕಾಶ ಕೋಳಿವಾಡ    

ರಾಣೆಬೆನ್ನೂರು: ‘ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಕೆ.ಬಿ. ಕೋಳಿವಾಡ ಜನ್ಮದಿನ ಅಂಗವಾಗಿ ನವೆಂಬರ್ 15ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿಯ ವಾಗೀಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಸೇರಿದಂತೆ ವಿವಿಧ ಕಡೆಯ 60ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಯುವಜನತೆ ಮೇಳದ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಮೇಡ್ಲೇರಿ ರಸ್ತೆಯಲ್ಲಿರುವ ಉರ್ದು ಶಾಲೆಯ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಮೇಳ ಜರುಗಲಿದೆ. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕ–ಸ್ನಾತಕೋತ್ತರ ಪದವಿವರೆಗಿನ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು’ ಎಂದರು.

ADVERTISEMENT

‘ಮಕ್ಕಳ ಕಲಿಕೆ ಗುಣಮಟ್ಟ ಸುಧಾರಣೆ ಹಾಗೂ ಬೋಧನಾ ಕ್ರಮಗಳ ಅಭಿವೃದ್ಧಿಗಾಗಿ ಪಿಕೆಕೆ ಸಂಸ್ಥೆಯಿಂದ ರೋಬೋಟ್ ಟೀಚರ್ ಕಾರ್ಯಕ್ರಮ ಅನಾವರಣ ಮಾಡಲಾಗುತ್ತಿದೆ’ ಎಂದರು.

‘ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಸಾಗಿಸಲು ‘ಶ್ರದ್ಧಾಂಜಲಿ ವಾಹನ’ ನೀಡಲಾಗುತ್ತಿದೆ. ಕಾಕೋಳ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ʻಕೃಷಿ ಶಕ್ತಿʼ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಅತೀ ಕಡಿಮೆ ದರದಲ್ಲಿ ಸಣ್ಣ ರೈತರಿಗೆ ಗೊಬ್ಬರ, ಬೀಜ, ಡ್ರೋನ್‌, ಟ್ರ್ಯಾಕ್ಟರ್‌ ಸೇರಿದಂತೆ ಕೃಷಿ ಸಲಕರಣೆಗಳನ್ನು ನೀಡುವ ಉದ್ದೇಶವಿದೆ’ ಎಂದರು.

‘ಜಾಗದ ನೋಟಿಸ್‌ ವಿಚಾರವಾಗಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ನನ್ನ ಹಾಗೂ ನನ್ನ ತಂದೆ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಅವರ ಮಾತುಗಳು ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತೋರಿಸುತ್ತದೆ’ ಎಂದರು.

ಅ. 28ರಂದು ಸಾಮಾನ್ಯ ಸಭೆ

‘ನಗರದ ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಕೆಲಸ ಮಾಡಬೇಕು. ಇತ್ತೀಚೆಗೆ ನಿಗದಿಪಡಿಸಿದ್ದ ಸಾಮಾನ್ಯ ಸಭೆ ಕೋರಂ ಇಲ್ಲದಿದ್ದರಿಂದ ನಡೆದಿಲ್ಲ. ಅ. 28ರಂದು ಪುನಃ ಸಭೆ ಕರೆಯಲಾಗಿದೆ. ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಸದಸ್ಯರಲ್ಲೂ ಕೋರುತ್ತೇನೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.