ADVERTISEMENT

ಹಾವೇರಿ: ಹೆಗ್ಗೇರಿ ಕೆರೆಯಲ್ಲಿ ಅಣಕು ಕಾರ್ಯಾಚರಣೆ

ವಿಪತ್ತು ನಿರ್ವಹಣೆ ಕುರಿತು ಜನರಿಗೆ ಜಾಗೃತಿ: ಎನ್‌ಡಿಆರ್‌ಎಫ್‌ ತಂಡದಿಂದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 12:34 IST
Last Updated 21 ಫೆಬ್ರುವರಿ 2022, 12:34 IST
ಅಣಕು ಪ್ರದರ್ಶನದ ಪೂರ್ವ ಸಿದ್ಧತೆ ಕುರಿತು ಎನ್.ಡಿ.ಆರ್.ಎಫ್ ಬೆಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಅವರು ಸೋಮವಾರ ಸಭೆ ನಡೆಸಿದರು 
ಅಣಕು ಪ್ರದರ್ಶನದ ಪೂರ್ವ ಸಿದ್ಧತೆ ಕುರಿತು ಎನ್.ಡಿ.ಆರ್.ಎಫ್ ಬೆಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಅವರು ಸೋಮವಾರ ಸಭೆ ನಡೆಸಿದರು    

ಹಾವೇರಿ: ಅತಿವೃಷ್ಟಿ, ಪ್ರವಾಹದಂತಹ ವಿಪತ್ತು ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ (ಎನ್.ಡಿ.ಆರ್.ಎಫ್) ತಂಡದಿಂದ ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಫೆ.22ರಂದು ಬೆಳಿಗ್ಗೆ 11 ಗಂಟೆಗೆ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದುಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಅಣಕು ಪ್ರದರ್ಶನದ ಪೂರ್ವ ಸಿದ್ಧತೆ ಕುರಿತಂತೆ ಎನ್.ಡಿ.ಆರ್.ಎಫ್ ಬೆಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ಕೈಗೊಳ್ಳಬಹುದಾದ ಕಾರ್ಯಾಚರಣೆ ಕುರಿತಂತೆ ಪ್ರಾಯೋಗಿಕ ಪ್ರದರ್ಶನವನ್ನು ಎನ್.ಡಿ.ಆರ್.ಎಫ್. ತಂಡದ ಹಿರಿಯ ಅಧಿಕಾರಿಗಳು ನೀಡಲಿದ್ದಾರೆ ಎಂದು ಹೇಳಿದರು.

ಎನ್.ಡಿ.ಆರ್.ಎಫ್.ನ ವಿಜಯವಾಡ ಕೇಂದ್ರದ ಬೆಂಗಳೂರು ಶಾಖೆಯಿಂದ 10ನೇ ಬೆಟಾಲಿಯನ್‍ನ ಸಮನ್ವಯಾಧಿಕಾರಿ ಕಮಾಂಡೆಂಟ್ ಎಸ್.ಸೆಂಥಿಲ್‍ಕುಮಾರ ನೇತೃತ್ವದ 18 ಜನರ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ವಿಪತ್ತು ನಿರ್ವಹಣಾ ಸಮಿತಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳ ಸಹಯೋಗದಲ್ಲಿ 45 ನಿಮಿಷಗಳ ಕಾಲ ವಿಪತ್ತು ನಿರ್ವಹಣಾ ಉಪಕರಣಗಳೊಂದಿಗೆ ಪ್ರಾಯೋಗಿಕ ಕಾರ್ಯಾಚರಣೆ ನಡೆಸಿ ಅರಿವು ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಎನ್.ಡಿ.ಆರ್.ಎಫ್.ನ ಕಮಾಂಡೆಂಟ್ ಸೆಂಥಿಲ್‍ಕುಮಾರ ಮಾತನಾಡಿ, ವಿಪತ್ತು ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲ ಹಳ್ಳಿಗಳಲ್ಲೂ ವಿಪತ್ತು ನಿರ್ವಹಣೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಎನ್.ಡಿ.ಆರ್.ಎಫ್‍ನಿಂದ ಆಯೋಜಿಸಲಾಗಿದೆ. ವಿಜಯವಾಡಾ ಪ್ರಾದೇಶಿಕ ವಿಭಾಗಕ್ಕೆ ಒಳಪಡುವ ಬೆಂಗಳೂರು ಎನ್.ಡಿ.ಆರ್.ಎಫ್. ಘಟಕದ ತಂಡದಿಂದ ವಿವಿಧ ಜಿಲ್ಲೆಗಳಲ್ಲಿ ವಿಪತ್ತು ಎದಿರುವ ಕುರಿತಂತೆ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಪದೇ ಪದೇ ಪ್ರವಾಹದಂತಹ ವಿಪತ್ತು ಎದುರಿಸುವ ಹಾವೇರಿ ಜಿಲ್ಲೆಯಲ್ಲಿ ನದಿ, ಕೆರೆ, ಕಾಲುವೆಗಳಲ್ಲಿ ಮುಳಗಡೆಯಾಗುವ ಜೀವಗಳ ರಕ್ಷಣೆ ಕಾರ್ಯಾಚರಣೆ ಕುರಿತಂತೆ ಅಣಕು ಪ್ರದರ್ಶನವನ್ನು ಸ್ಥಳೀಯ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಎನ್.ಸಿ.ಸಿ., ಎನ್.ಎಸ್.ಎಸ್. ಸೇರಿದಂತೆ ವಿವಿಧ ಇಲಾಖೆ ಹಾಗೂ ಸ್ವಯಂ ಸೇವಾ ಸಂಘಟಕರೊಂದಿಗೆ ವಿಪತ್ತು ಕಾರ್ಯಾಚರಣೆ, ಸಂಪರ್ಕ ಸಾಧನೆ, ಜೀವಕ ರಕ್ಷಕ ಬಳಕೆ ಸೇರಿದಂತೆ ತುರ್ತು ಸ್ಪಂದನೆ ಹಾಗೂ ಕಾರ್ಯಾಚರಣೆ ಕುರಿತಂತೆ ಪ್ರಮಾಣಿಕೃತ ವಿಪತ್ತು ನಿರ್ವಹಣಾ ಮಾರ್ಗಸೂಚಿ ಅನುಸರಿಸಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಅಗ್ನಿಶಾಮಕದಳ ಕಮಾಂಡೆಂಟ್ ಸೋಮಶೇಖರ ಅಗಡಿ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ತಾಲ್ಲೂಕು ಪಂಚಾಯಿತಿ ಇಒ ಬಸವರಾಜಪ್ಪ, ಎನ್.ಡಿ.ಆರ್.ಎಫ್.ನ ಜಿಡಿಎಂಒ ಡಾ.ಟಿ.ಜಯಂಥ ರೆಡ್ಡಿ, ಪ್ರವೀಣಕುಮಾರ ಉಪಾದ್ಯಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.