ADVERTISEMENT

ಹಾವೇರಿ | ಮಾಯವಾದ ಸಗಣಿ ಕಣ: ಒಕ್ಕಲು ಕಣವಾದ ರಸ್ತೆಗಳು

ಸಂತೋಷ ಜಿಗಳಿಕೊಪ್ಪ
Published 15 ಅಕ್ಟೋಬರ್ 2025, 4:41 IST
Last Updated 15 ಅಕ್ಟೋಬರ್ 2025, 4:41 IST
<div class="paragraphs"><p>ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಬಳಿ ತಡಸ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ರೈತರು ಒಣಗಲು ಹಾಕಿರುವ ಕೃಷಿ ಉತ್ಪನ್ನ</p></div>

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಬಳಿ ತಡಸ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ರೈತರು ಒಣಗಲು ಹಾಕಿರುವ ಕೃಷಿ ಉತ್ಪನ್ನ

   

ಹಾವೇರಿ: ಆಧುನಿಕತೆ ಬೆಳೆದಂತೆ ಕೃಷಿ ಪದ್ಧತಿ ಬದಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಒಕ್ಕಲು ಕೆಲಸಕ್ಕಾಗಿ ಸಿದ್ಧಪಡಿಸುತ್ತಿದ್ದ ಸಗಣಿ ಕಣಗಳೂ ಮಾಯವಾಗುತ್ತಿವೆ. ಸಗಣಿ ಕಣದಿಂದ ವಿಮುಕ್ತರಾಗುತ್ತಿರುವ ಬಹುತೇಕ ರೈತರು, ರಸ್ತೆಗಳು ಹಾಗೂ ಕಾಂಕ್ರಿಟ್ ಜಾಗವನ್ನೇ ಕಣವನ್ನಾಗಿ ಮಾಡಿಕೊಂಡು ಒಕ್ಕಲು ಮುಂದುವರಿಸಿದ್ದಾರೆ. ಇಂಥ ರಸ್ತೆ–ಕಾಂಕ್ರಿಟ್‌ ಸ್ಥಳಗಳಿಂದ ರೈತರ ಜೀವಕ್ಕೆ ಕುತ್ತು ಬರುವ ಆತಂಕ ಹೆಚ್ಚಾಗುತ್ತಿದೆ.

ಹಾವೇರಿ ಜಿಲ್ಲೆಯ ಬಹುತೇಕರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಒಕ್ಕಲು ಮಾಡಲು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಗಣಿ ಕಣಗಳ ನಿರ್ಮಾಣಕ್ಕೆ ಹಲವು ತೊಂದರೆಗಳು ಇರುವುದರಿಂದ, ರಸ್ತೆಗಳನ್ನೇ ಅವಲಂಬಿಸುತ್ತಿದ್ದಾರೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಹಲವು ಬೆಳೆ ಬೆಳೆದಿರುವ ರೈತರು, ಅವುಗಳ ಕಟಾವು ಮಾಡಿ ರಸ್ತೆಯಲ್ಲಿ ರಾಶಿ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳು, ರಾಜ್ಯ ಹೆದ್ದಾರಿಯ ಅರ್ಧ ಭಾಗ, ಖಾಲಿ ನಿವೇಶನಗಳು, ಮೈದಾನ ಹಾಗೂ ಕಾಂಕ್ರೀಟ್‌ ಸ್ಥಳಗಳಲ್ಲಿ ಕೃಷಿ ಉತ್ಪನ್ನಗಳ ರಾಶಿ ಕಂಡುಬರುತ್ತಿದೆ. ಇಂಥ ಸ್ಥಳಗಳಲ್ಲಿ ರೈತರು, ಹಗಲು–ರಾತ್ರಿ ಬೆಳೆಗಳಿಗೆ ಕಾವಲು ಕಾಯುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ಜೀವಕ್ಕೆ ಅಪಾಯ ಉಂಟಾಗುವ ಆತಂಕವೂ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಗೋವಿನಜೋಳ, ಸೋಯಾಬಿನ್, ಶೇಂಗಾ, ಹೆಸರು, ತೊಗರಿ ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆದಿದ್ದು, ಫಸಲು ಕೈಗೆ ಬಂದಿದೆ. ಬೆಳೆಯನ್ನು ಎಲ್ಲಿ ಒಣಗಿಸಬೇಕೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಕೆಲವರು ಮಾತ್ರ ಸಗಣಿ ಕಣ ಹಾಕಿ, ಒಕ್ಕಲು ಮಾಡುತ್ತಿದ್ದಾರೆ. ಉಳಿದವರು, ರಾಷ್ಟ್ರೀಯ– ರಾಜ್ಯ ಹಾಗೂ ಇತರೆ ರಸ್ತೆಗಳನ್ನೇ ಕಣವನ್ನಾಗಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಣ್ಣ ಹಿಡುವಳಿ ರೈತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಾನುವಾರು ಸಾಕಾಣಿಕೆಯೂ ಕಡಿಮೆಯಾಗುತ್ತಿದೆ. ಅಗತ್ಯಕ್ಕೆ ತಕ್ಕಷ್ಟು ಸಗಣಿ ಲಭ್ಯವಾಗುತ್ತಿಲ್ಲ. ಹೀಗಾಗಿ, ಸಗಣಿ ಕಣ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸಗಣಿ ಕಣ ನಿರ್ಮಿಸಲು ಹೆಚ್ಚು ಸಮಯ ಬೇಕು. ಖರ್ಚು ಸಹ ಜಾಸ್ತಿ. ಇದೇ ಕಾರಣಕ್ಕೆ ರೈತರು, ಸಗಣಿ ಕಣ ನಿರ್ಮಿಸಲು ಮನಸ್ಸು ಮಾಡುತ್ತಿಲ್ಲ. ಡಾಂಬರ್ ಹಾಗೂ ಕಾಂಕ್ರಿಟ್ ಇರುವ ಜಾಗವನ್ನೇ ಕಣ ಮಾಡಿಕೊಂಡು, ಬೆಳೆಗಳನ್ನು ಒಕ್ಕಲು ಮಾಡಿ ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ.

ನೂರಾರು ವಾಹನಗಳು ಓಡಾಡುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಾಯ ಹೆಚ್ಚು. ನಿರಂತರ ವಾಹನಗಳು ಸಂಚರಿಸುವ ಜಾಗದಲ್ಲಿ ಬೆಳೆಗಳನ್ನು ರಾಶಿ ಹಾಕಿಕೊಂಡು ಕಾಯುವ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸ್ಥಿತಿಯಲ್ಲಿಯೇ ರೈತರು ಬೆಳೆಗಳನ್ನು ಕಾಯುತ್ತಿದ್ದಾರೆ.

ಹಾವೇರಿ, ರಾಣೆಬೆನ್ನೂರು ಹಾಗೂ ಶಿಗ್ಗಾವಿ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಒಕ್ಕಲು ಹಾಕಿದ್ದಾರೆ. ರಾತ್ರಿ ಸಮಯದಲ್ಲಿ ವಾಹನಗಳ ಚಾಲಕರು ಸ್ವಲ್ಪ‍ ಎಚ್ಚರ ತಪ್ಪಿದರೂ ರೈತರ ಮೇಲೆಯೇ ಚಕ್ರಗಳು ಹರಿಯುವ ಭಯ ಸದಾ ಕಾಡುತ್ತಿದೆ.

‘ರೈತಾಪಿ ಕುಟುಂಬದವರು ಹೆಚ್ಚಿರುವ ಹಾವೇರಿ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಕಾಂಕ್ರಿಟ್ ಕಣ ನಿರ್ಮಿಸಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆ ಈಡೇರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ, ರೈತರು ಅನಿವಾರ್ಯವಾಗಿ ಪದೇ ಪದೇ ರಸ್ತೆಗೆ ಬರುತ್ತಿದ್ದಾರೆ.

‘ನನ್ನದು ಒಂದೂವರೆ ಎಕರೆ ಜಮೀನಿದ್ದು, ಗೋವಿನ ಜೋಳ ಬೆಳೆದಿದ್ದೇನೆ. ಜಮೀನಿನಲ್ಲಿ ಸಗಣಿ ಕಣ ಮಾಡಲು ಖರ್ಚು ಹೆಚ್ಚಾಗುತ್ತದೆ. ಅದೇ ಕಾರಣಕ್ಕೆ ಗೋವಿನ ಜೋಳವನ್ನು ಯಂತ್ರಕ್ಕೆ ಹಾಕಿಸಿದ್ದೇನೆ. ಸರ್ವೀಸ್ ರಸ್ತೆಯಲ್ಲಿ ರಾಶಿ ಹಾಕಿ ಒಣಗಿಸುತ್ತಿದ್ದೇನೆ’ ಎಂದು ಮೊಟೆಬೆನ್ನೂರಿನ ರೈತ ಚಂದ್ರಪ್ಪ ಹೇಳಿದರು.

‘ಸಣ್ಣ ರೈತರು ಬೆಳೆ ಒಕ್ಕಲು ಮಾಡಲು ಹೆಚ್ಚಿನ ಹಣ ಖರ್ಚಾಗುತ್ತಿದೆ. ಸರ್ಕಾರವೇ ಕಣಗಳನ್ನು ನಿರ್ಮಿಸಿಕೊಡಬೇಕು. ಅಂದಾಗ ಮಾತ್ರ ನಾವು ರಸ್ತೆಗೆ ಬರುವುದು ತಪ್ಪುತ್ತದೆ’ ಎಂದು ತಿಳಿಸಿದರು.

ಶಿಗ್ಗಾವಿಯ ರೈತ ಹನುಮಂತಪ್ಪ, ‘ಸಾಲ ಮಾಡಿ ಬೆಳೆ ಬೆಳೆದಿದ್ದೇನೆ. ಬೆಳೆಯನ್ನು ಬೇಗನೇ ಮಾರಿ ಸಾಲ ವಾಪಸು ನೀಡಬೇಕು. ಇಲ್ಲದಿದ್ದರೆ, ಬಡ್ಡಿ ಹೆಚ್ಚಾಗುತ್ತದೆ. ಸಗಣಿ ಕಣ ಮಾಡುವಷ್ಟು ಸಮಯವಿಲ್ಲ. ಹೀಗಾಗಿ, ಹೆದ್ದಾರಿಗೆ ಬಂದು ಬೆಳೆ ಒಣಗಿಸುತ್ತಿದ್ದೇನೆ. ಬಿಸಿಲು ಚೆನ್ನಾಗಿದ್ದರೆ, ಒಂದೆರಡು ದಿನಗಳಲ್ಲಿ ಬೆಳೆ ಒಣಗುತ್ತದೆ’ ಎಂದು ಹೇಳಿದರು.

ಹಗಲು– ರಾತ್ರಿ ಕಾವಲು

ಹೆದ್ದಾರಿಗಳಲ್ಲಿ ಒಣಗಲು ಹಾಕಿರುವ ಕೃಷಿ ಉತ್ಪನ್ನಗಳ ರಾಶಿಗಳನ್ನು ಕಾಯಲು ರೈತರು ಹಗಲು–ರಾತ್ರಿ ಕಾವಲು ಕಾಯುತ್ತಿದ್ದಾರೆ. ಕಳ್ಳರ ಕಾಟವೂ ಇರುವುದರಿಂದ ಹೆಚ್ಚು ನಿಗಾ ವಹಿಸುತ್ತಿದ್ದಾರೆ. ರಾಶಿಗಳ ಪಕ್ಕದಲ್ಲೇ ರೈತರು ಮಲಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿ ಓಡಾಡಿದರೆ ರೈತರ ಪ್ರಾಣಕ್ಕೆ ಕುತ್ತುಬರುವ ಆತಂಕವಿದೆ. ರಸ್ತೆಗಳಲ್ಲಿ ಹಾಕಿರುವ ರಾಶಿಗಳ ಬಳಿ ಆಗಾಗ ಸಣ್ಣ–ಪುಟ್ಟ ಅಪಘಾತಗಳು ನಡೆಯುತ್ತಿದ್ದು ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೊಡ್ಡ ಅಪಘಾತವಾಗುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಸಗಣಿ ಕಣಗಳಿಂದ ರೈತರು ವಿಮಕ್ತರಾಗುತ್ತಿದ್ದು ಕೃಷಿ ಉತ್ಪನ್ನ ಒಣಗಿಸಲು ಪರದಾಡುತ್ತಿದ್ದಾರೆ. ಒಕ್ಕಲು ಕೆಲಸಕ್ಕಾಗಿ ಪ್ರತಿ ಗ್ರಾಮದಲ್ಲಿ ಕಾಂಕ್ರಿಟ್ ಕಣ ಮಾಡಲು ಸರ್ಕಾರ ಮುಂದಾಗಬೇಕು
- ಭುವನೇಶ್ವರ ಶಿಡ್ಲಾಪೂರ, ರೈತ ಮುಖಂಡ
ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಕೃಷಿ ಉತ್ಪನ್ನ ಸ್ವಚ್ಛಗೊಳಿಸುತ್ತಿರುವ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.