
ಸವಣೂರು: ಶಿಕ್ಷಕನ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ರಾಜ್ಯದಾದ್ಯಂತ ಸುದ್ದಿಯಾಗಿ 22 ಜನರ ಮೇಲೆ ಪ್ರಕರಣ ದಾಖಲಾದರೂ ಕೂಡಾ ಇದುವರೆಗೂ ಒಬ್ಬ ವ್ಯಕ್ತಿಯನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ ಎಂದು ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಅಮರಾಪೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಟ್ಟಣದ ಕೆಂಡದಸ್ವಾಮಿಮಠದ ಸಭಾ ಭವನದಲ್ಲಿ ಭಾನುವಾರ ತಾಲ್ಲೂಕು ಕುರುಬ ಸಮಾಜದ ವತಿಯಿಂದ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕ್ಷಕ ಮಕ್ಕಳ ಮೇಲೆ ದುಷ್ಕ್ರತ್ಯ ಎಸಗಿದ್ದರೆ ಗಲ್ಲು ಶಿಕ್ಷೆ ನೀಡಲಿ. ಆದರೆ ಕಾನೂನು ಚೌಕಟ್ಟು ಮೀರಿ ಚಪ್ಪಲಿ ಹಾರ ಹಾಕಿ, ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿ ಶಿಕ್ಷೆ ನೀಡಲಿ. ಆದರೆ ತಾಲ್ಲೂಕು ದಂಡಾಧಿಕಾರಿ, ಶಿಕ್ಷಣ ಇಲಾಖೆ ಅಧಿಕಾರಿ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೋಮು ಗಲಭೆಗೆ ಪ್ರಚೋದನೆ ನೀಡಿದಂತೆ ಆಗುತ್ತದೆ. ಒಂದು ವಾರದೊಳಗೆ ಹಲ್ಲೆ ಮಾಡಿದವರನ್ನು ಬಂಧನ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಕೋಮುದಳ್ಳುರಿಗೆ ಪ್ರಚೋದನೆ ನೀಡಿ ಸಾಮಾಜಿಕ ಶಾಂತಿ ಕದಡುವ ಸಂದೇಶಗಳನ್ನು ಹರಿ ಬಿಡುತ್ತಿರುವ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಂಗಾಧರ ಬಾಣದ ಮಾತನಾಡಿ, ಶಿಕ್ಷಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರೆ ನೀಡಿರುವ ಸವಣೂರು ಬಂದ್ ಯಶಸ್ವಿಯಾಗಲು ಪಕ್ಷಾತೀತ, ಜಾತ್ಯತೀತವಾಗಿ ಸಹಕಾರ ನೀಡಬೇಕು. ಬೆಳಿಗ್ಗೆ 10ಕ್ಕೆ ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ನಿಂಗಪ್ಪ ಹಳವಳ್ಳಿ, ಹೊನ್ನಪ್ಪ ಕೊಳ್ಳವರ, ಶಿವಾನಂದ ಕರಿಗಾರ, ಬಸವಂತಪ್ಪ ಬಂಕಾಪುರ, ಶ್ರೀಕಾಂತ ಅಜ್ಜಣ್ಣವರ, ಮಂಜುನಾಥ ಉಪ್ಪಿನ, ನಿಂಗಪ್ಪ ಜಡಿ, ರವಿ ಆಲದಕಟ್ಟಿ, ಮಹದೇವಪ್ಪ ಮಲ್ಲೂರ, ಸಿದ್ದಪ್ಪ ಡೊಳ್ಳಿನ, ಮಂಜು ಸರಸೂರಿ, ಗುಡ್ಡಪ್ಪ ತಿಮ್ಮಾಪೂರ, ನೀಲಪ್ಪ ದೇವಗಿರಿ, ಗುರುನಾಥ ಕಳಲಕೊಂಡ, ಮಹೇಶ ಜಡಿ, ಮಂಜು ಪಾಟೀಲ, ಮಾಂತೇಶ ಆಲದಕಟ್ಟಿ, ನಿಂಗರಾಜ ಆಲದಕಟ್ಟಿ, ಪರಶುರಾಮ ಕುರಿ, ನಾಗಪ್ಪ ಗ್ವಾಡಿ ಸೇರಿದಂತೆ ಕುರುಬ ಸಮಾಜ ಬಾಂಧವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.