ಶಿಗ್ಗಾವಿ: ತಾಲ್ಲೂಕಿನಾದ್ಯಂತ ಸುಮಾರು 15 ದಿನಗಳಿಂದ ಸತತ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಮನೆಗಳು ಬಿದ್ದು, ಜಮೀನಿನಲ್ಲಿ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ತಾಲ್ಲೂಕಿನಲ್ಲಿ ಸುಮಾರು 70ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆ ಬಿದ್ದು ಹಾನಿಯಾದ ಗ್ರಾಮಗಳಿಗೆ ಕಂದಾಯ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಅಂದಲಗಿ, ಹಿರೇಬೆಂಡಿಗೇರಿ, ನೀರಲಗಿ, ಅಡವಿಸೋಮಾಪುರ, ಹೋತನಹಳ್ಳಿ, ಕುನ್ನೂರ, ಬಸವನಾಳ , ಕಾಮನಹಳ್ಳಿ , ಪಾಣಿಗಟ್ಟಿ, ತಿಮ್ಮಾಪುರ, ಮಡ್ಲಿ, ಮುಳಕೇರಿ, ಶಿಗ್ಗಾವಿ, ಇಬ್ರಾಹಿಂಪುರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳು ಸೇರಿ ಸುಮಾರು 70ಕ್ಕೂ ಹೆಚ್ಚು ಮನೆಗಳು ಬಿದ್ದು ವರದಿಯಾಗಿದೆ.
ಮನೆ ಬಿದ್ದು ಹಾನಿಯಾದ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆರೆದಿಲ್ಲ. ಮಳೆ ಹೀಗೆ ಮುಂದುವರೆದರೆ ತಕ್ಷಣ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು. ಸುಮಾರು 10 ಕುಟುಂಬಗಳು ತೀವ್ರ ಹಾನಿ ಅನುಭವಿಸಿದ್ದು, ಅವರ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದೆ. ಜಮೀನಿನಲ್ಲಿ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು ವರದಿಯಾಗಿದೆ. ಆದರೆ ಮಳೆ ನಿಂತ ತಕ್ಷಣ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಅದರ ಹಾನಿ ಕುರಿತು ನಂತರ ಸರ್ಕಾರಕ್ಕೆ ವರದಿ ನೀಡುವುದಾಗಿ ತಹಶೀಲ್ದಾರ್ ಸಂತೋಷ ಹಿರೇಮಠ ತಿಳಿಸಿದರು.
ಅತಿವೃಷ್ಠಿ, ಅನಾವೃಷ್ಠಿಗೆ ಸಿಲುಕಿದ ರೈತ ಸಮೂಹ ಕಳೆದ ನಾಲ್ಕು ವರ್ಷಗಳಿಂದ ಹಾನಿ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ಗ್ಯಾರಂಟಿಗಳನ್ನು ಬದಿಗಿಟ್ಟು ನಾಡಿನ ಜನತೆಗೆ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ರೈತರಾದ ದೇವೇಂದ್ರಪ್ಪ ಹಳವಳ್ಳಿ, ಬಸಲಿಂಗಪ್ಪ ಮಲ್ಲೂರ, ಮಾಲತೇಶ ಸಕ್ರಿ, ಮಂಜು ಸವೂರ ಸೇರಿದಂತೆ ಹಲವು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.