ADVERTISEMENT

ಈ ತನಕ ಕಾವೇರದ ಪ್ರಚಾರ: 18ರ ಬಳಿಕ ‘ಹೈ ವೋಲ್ಟೇಜ್‌’

ಅಬ್ಬರಿಸದ ವಾಗ್ದಾಳಿ, ಗದ್ದಲ

ಹರ್ಷವರ್ಧನ ಪಿ.ಆರ್.
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST
ಹಾವೇರಿ ತಾಲ್ಲೂಕಿನ ನಾಗನೂರಿನಲ್ಲಿ ಎಲ್‌ಇಡಿ ಪರದೆ ಮೂಲಕ ಪ್ರಚಾರ –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಹಾವೇರಿ ತಾಲ್ಲೂಕಿನ ನಾಗನೂರಿನಲ್ಲಿ ಎಲ್‌ಇಡಿ ಪರದೆ ಮೂಲಕ ಪ್ರಚಾರ –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ:ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಬಳಿಕವೂ ತಣ್ಣಗಿರುವ ಹಾವೇರಿ ಲೋಕಸಭಾ ಕ್ಷೇತ್ರದ ಪ್ರಚಾರವು ಗುರುವಾರದಿಂದ ಕಾವೇರಲಿದೆ. ಏ.18ರಂದು ರಾಜ್ಯದ ದಕ್ಷಿಣದ ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಳ್ಳಲಿದ್ದು, ನಾಯಕರ ದಂಡೇ ಇತ್ತ ದೌಡಾಯಿಸಲಿದೆ. ಪ್ರಚಾರದ ವೇಗಕ್ಕೆ ‘ಹೈ ವೋಲ್ಟೇಜ್’ ಹರಿಯಲಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯು ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಏ.18ರಂದು ಮತದಾನ ನಡೆಯಲಿದೆ. ಆ ಬಳಿಕ ಪ್ರಮುಖ ನಾಯಕರೆಲ್ಲ ಈ ಭಾಗದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ. ಈಗಾಗಲೇ ನಾಯಕರ ಪ್ರವಾಸಗಳೂ ನಿಗದಿಯಾಗುತ್ತಿವೆ. ಇದರಿಂದಾಗಿ ಏ.18ರಿಂದ 22ರ ತನಕ ಕ್ಷೇತ್ರದಲ್ಲಿ ಚುನಾವಣೆ ಕಾವೇರಲಿದೆ.

ಹಾವೇರಿ ಕ್ಷೇತ್ರದಲ್ಲಿ ಮಾ.28ರಂದು ಅಧಿಸೂಚನೆ ಪ್ರಕಟಿಸಿದ್ದು, ಏ.8ರಂದು ಕಣದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಉಳಿದಿದ್ದರು. ಅಧಿಸೂಚನೆಯ ಪೂರ್ವದಲ್ಲಿ ಮಾ.9ರಂದು ರಾಹುಲ್ ಗಾಂಧಿ ಬಹಿರಂಗ ಸಮಾವೇಶ ನಡೆದಿತ್ತು. ಆ ಬಳಿಕ ಏ.3ರಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಏ. 4ರಂದು ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಂದಿದ್ದರು.

ADVERTISEMENT

ಅನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಚಾರಕ್ಕೆ ಅಧಿಕೃತ ಚಾಲನೆ ದೊರೆತಿತ್ತು. ಆದರೆ, ರಾಜ್ಯಮಟ್ಟದ ಪ್ರಮುಖ ನಾಯಕರು ಅಥವಾ ಭಾರಿ ರ್‍ಯಾಲಿಗಳು ನಡೆದಿರಲಿಲ್ಲ. ಸ್ಥಳೀಯ ನಾಯಕರೇ ಪ್ರಚಾರದ ನೇತೃತ್ವ ವಹಿಸಿದ್ದರು. ಪ್ರಚಾರವೂ ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿತ್ತು.

ಕಾಡಿದ ಬಿಸಿಲು–ಮಳೆ:
ಈ ಬಾರಿ ಗರಿಷ್ಠ ತಾಪಮಾನವು 41 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇದರಿಂದಾಗಿ ವಿವಿಧ ಪಕ್ಷಗಳು ಮಧ್ಯಾಹ್ನ 11ರಿಂದ ಸಂಜೆಯ 5 ರ ತನಕ ಪ್ರಚಾರಕ್ಕೆ ವಿಶ್ರಾಂತಿ ನೀಡುತ್ತಿದ್ದವು. ಅಲ್ಲದೇ, ಸಂಜೆಯ ವೇಳೆ ಗುಡುಗು– ಸಿಡಿಲು ಸಹಿತ ಮಳೆಯು ಹಿನ್ನಡೆ ನೀಡಿತ್ತು.

ಏ.16ರಂದು ದಕ್ಷಿಣದ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಒಬ್ಬೊಬ್ಬರೇ ನಾಯಕರು ಇತ್ತ ದೌಡಾಯಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಆರ್. ವಿ. ಸುದರ್ಶನ್ , ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಂದಿದ್ದಾರೆ. ಏ.19ರಿಂದ ಚಿತ್ರನಟಿ ಶ್ರುತಿ ಹಾಗೂ ಪ್ರಮುಖರ ಕಾರ್ಯಕ್ರಮ ನಿಗದಿಯಾಗಿದೆ. ಕಾಂಗ್ರೆಸ್ ಪ್ರಮುಖರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

‘ಇಲ್ಲಿ ಏ.23ರಂದು ಮತದಾನ ನಡೆಯಲಿದ್ದು, ಏ.22ರ ತನಕದ ಪ್ರತಿ ಕ್ಷಣ ಕ್ಷಣವೂ ಮುಖ್ಯವಾಗಿದೆ. ನಾಲ್ಕು ದಿನ ಪ್ರಚಾರದ ಅಬ್ಬರ ಜೋರಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ಸಂಜೀವಕುಮಾರ್ ನೀರಲಗಿ ತಿಳಿಸಿದರು.

ಸಿದ್ಧತೆ:

ಏ.18ರ ಬಳಿಕ ಪ್ರಚಾರದ ಅಬ್ಬರ ಹೆಚ್ಚುವ ಮಾಹಿತಿ ಇದೆ. ಈ ಬಗ್ಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಚೆಕ್‌ಪೋಸ್ಟ್ ಮತ್ತಿತರೆಡೆಗೆ ನಿಯೋಜಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ನೀಡಲಾಗುವುದು ಎಂದು ಆಯೋಗ ತಿಳಿಸಿದೆ ಎಂದು ಎಸ್ಪಿ ಕೆ. ಪರಶುರಾಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.