ADVERTISEMENT

ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ 17ನೇ ಚುನಾವಣೆ; 10 ಅಭ್ಯರ್ಥಿಗಳು ಕಣದಲ್ಲಿ

ಹರ್ಷವರ್ಧನ ಪಿ.ಆರ್.
Published 22 ಏಪ್ರಿಲ್ 2019, 20:00 IST
Last Updated 22 ಏಪ್ರಿಲ್ 2019, 20:00 IST
ಹಾವೇರಿಯಲ್ಲಿ ಸಜ್ಜುಗೊಂಡ ಮತಗಟ್ಟೆ -ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಹಾವೇರಿಯಲ್ಲಿ ಸಜ್ಜುಗೊಂಡ ಮತಗಟ್ಟೆ -ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ 17ನೇ ಸಂಸದರ ಆಯ್ಕೆಗೆ ಸಜ್ಜುಗೊಂಡಿದ್ದು, 17,06,981 ಮತದಾರರು 1,972 ಮತಗಟ್ಟೆಗಳಲ್ಲಿ 10 ಅಭ್ಯರ್ಥಿಗಳ ಭವಿಷ್ಯವನ್ನು ಇಂದು (ಏ.23) ಬರೆಯಲಿದ್ದಾರೆ.

ಮಾರ್ಚ್‌ 28ರಂದು ಚುನಾವಣೆಯ ಅಧಿಸೂಚನೆ ಹೊರಬಿದ್ದಿದ್ದು, ಏ.4ರಂದು ನಾಮಪತ್ರ ಸಲ್ಲಿಕೆ ಕೊನೆಗೊಂಡಿತ್ತು. 19 ಮಂದಿ ನಾಮತ್ರ ಸಲ್ಲಿಸಿದ್ದು, 10 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಮತದಾರರಿಗೆ, 10 ಅಭ್ಯರ್ಥಿಗಳು ಹಾಗೂ ನೋಟಾ ಸೇರಿದಂತೆ ಒಟ್ಟು 11 ಆಯ್ಕೆಗಳಿವೆ.

1952ರಲ್ಲಿ ಕ್ಷೇತ್ರಕ್ಕೆ ಮೊದಲ ಚುನಾವಣೆ ನಡೆದಿದ್ದು, ಆ ಬಳಿಕ (67 ವರ್ಷ) 16 ಬಾರಿ ಆಯ್ಕೆಗಳಾಗಿವೆ. (ಎಫ್.ಎಚ್. ಮೊಹಸೀನ್–5 ಬಾರಿ, ಟಿ.ಆರ್. ನೇಸ್ವಿ, ಮುಜಾಹಿದ್, ಐ.ಜಿ. ಸನದಿ, ಶಿವಕುಮಾರ ಉದಾಸಿ ತಲಾ 2 ಬಾರಿ ಹಾಗೂ ಎ.ಎ.ಅಜೀಜ್‌ ಸೇಠ್‌ , ಬಿ.ಎಂ. ಮೆಣಸಿನಕಾಯಿ, ಮಂಜುನಾಥ ಕುನ್ನೂರ ಒಂದು ಬಾರಿ ಆಯ್ಕೆಯಾಗಿದ್ದಾರೆ) ಈ ಬಾರಿ ಯಾರು ಎಂಬುದನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ. ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ADVERTISEMENT

2014ರಲ್ಲಿ ಕ್ಷೇತ್ರದಲ್ಲಿ ಶೇ 71.62 ಮತದಾನವಾಗಿತ್ತು. ಕಳೆದ ಬಾರಿಗಿಂತ ಮತದಾರರೂ ಹೆಚ್ಚಾಗಿದ್ದರೆ, ಶೇಕಡಾವಾರು ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಶ್ರಮಿಸುತ್ತಿದೆ. ಆದರೆ, 40 ಡಿಗ್ರಿ ಸೆಲ್ಸಿಯಸ್ ತಲುಪಿತ್ತಿರುವ ಬಿಸಿಲು ಹಾಗೂ ರಜಾ ದಿನಗಳು ಸವಾಲಾಗಿವೆ.

1989ರಲ್ಲಿ ದಾಖಲಾದ ಶೇ 74.01 ಮತದಾನವು ಕ್ಷೇತ್ರದಲ್ಲಿ ಈ ತನಕದ ಗರಿಷ್ಠ ಮತದಾನವಾಗಿದೆ. ಅನಂತರ ಕೇವಲ ಎರಡು ವರ್ಷದೊಳಗೆ 1991ರಲ್ಲಿ ಚುನಾವಣೆ ನಡೆದಿದ್ದು, ಶೇ 54.21 ಮತದಾನವಾಗಿತ್ತು. ಇದು ಈ ತನಕದ ಕನಿಷ್ಠವಾಗಿದೆ.

1952ರ ಮೊದಲ ಚುನಾವಣೆಯಲ್ಲಿ 3.71 ಲಕ್ಷ ಮತದಾರರಿದ್ದರೆ, ಈ ಬಾರಿ ಮತದಾರರ ಸಂಖ್ಯೆಯು 17.06 ಲಕ್ಷಕ್ಕೇರಿದೆ. 2004ರ ನಂತರ ನೋಂದಣಿಯಾದ ಸುಮಾರು 5.02 ಲಕ್ಷ ಮತದಾರರ ಪೈಕಿ ಬಹುತೇಕರು ಯುವ (35 ವರ್ಷ ಆಸುಪಾಸು) ಮತದಾರರಾಗಿದ್ದಾರೆ. ಕಳೆದ (2014) ವರ್ಷಕ್ಕಿಂತ ಈ ಬಾರಿ 84,097 ಮಹಿಳೆಯರು, 64,132 ಪುರುಷರು ಹಾಗೂ 3 ಇತರರು ಸೇರಿದಂತೆ ಒಟ್ಟು1,48,232 ಮತದಾರರು ಹೆಚ್ಚಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.