ಹಾನಗಲ್: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮೊದಲೇ ಹದಗೆಟ್ಟಿದ್ದ ರಸ್ತೆಗಳು ನಿರಂತರ ಮಳೆಗೆ ಕೆಸರು ಗದ್ದೆಯಂತಾಗಿವೆ. ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕುಂಟನಹೊಸಳ್ಳಿ ರಸ್ತೆಗೆ ಹೊಂದಿಕೊಂಡು ಗ್ಯಾಸ್ ಗುಡೌನ್ ಹತ್ತಿರ ಗಂಗಾ ನಗರದ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಬೈಕ್, ಕಾರು ಓಡಾಟ ದುಸ್ತರವಾಗಿದೆ. ನಡೆದುಕೊಂಡು ಹೋಗಲು ಇಲ್ಲಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
‘ಸುಮಾರು 10 ವರ್ಷದಿಂದ ಈ ಭಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದೇವೆ. ನಿರಂತರವಾಗಿ ಪುರಸಭೆಗೆ ತೆರಿಗೆ ಭರಿಸಿದ್ದೇವೆ. ಆದರೆ ನಮಗೆ ಮೂಲ ಸೌಲಭ್ಯಗಳಾದ ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆಯಾಗಿಲ್ಲ. ಅನೇಕ ಬಾರಿ ಪುರಸಭೆಗೆ ಇಲ್ಲಿನ ಸ್ಥಿತಿ ಸರಿಪಡಿಸಲು ಒತ್ತಾಯಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ಶಿವಲಿಂಗೇಶ ಬೈಲಣ್ಣನವರ, ಷಣ್ಮುಖಪ್ಪ ಕಮಾಟಿ, ಶಿವಪ್ಪ ಕರಿನಾಗಣ್ಣಣವರ, ಸುರೇಶಗೌಡ ಪಾಟೀಲ, ರಾಮಲಿಂಗೇಶ ಪ್ಯಾಟಿ, ರೇವಣೆಪ್ಪ ಬೈಲಣ್ಣನವರ, ಬಸವರಾಜ ಕುಂದೂರ ತಿಳಿಸಿದ್ದಾರೆ.
ರೋಶನಿ ಪ್ರೌಢಶಾಲೆ ಹಿಂಭಾಗದ ಕುವೆಂಪು ನಗರ 10 ವರ್ಷದಿಂದ ಅಭಿವೃದ್ಧಿ ಕಂಡಿಲ್ಲ. ಓಡಾಟದ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದುಕೊಂಡು ಫಜೀತಿಗೆ ಒಳಗಾಗಿರುವ ಇಲ್ಲಿನ ನಿವಾಸಿಗಳು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಬೆಸತ್ತಿದ್ದಾರೆ.
‘ಕುಡಿಯುವ ನೀರಿನ ಸಂಪರ್ಕವಿಲ್ಲ, ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಈಗ ಮಳೆಗಾಲದಲ್ಲಿ ವಾಹನಗಳ ಸಂಚಾರವಿರಲಿ, ಶಾಲಾ ವಿದ್ಯಾರ್ಥಿಗಳ ಓಡಾಟವೂ ಸಾಧ್ಯವಾಗದ ಸ್ಥಿತಿ ಇಲ್ಲಿದೆ’ ಎಂದು ನಿವಾಸಿಗಳು ಅಸಮಾಧಾನ ತೋಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಈ ಭಾಗದ ನಿವಾಸಿಗಳು ಶಾಸಕ ಶ್ರೀನಿವಾಸ ಮಾನೆ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಅಶೋಕ ದಾಸರ, ಸುಭಾಸ ಹೇರೂರ, ಎಸ್.ಎಸ್.ದಾಮೋದರ, ಸಂತೋಷ ದೊಡ್ಡಮನಿ, ಭಾಗ್ಯಶ್ರೀ ದೊಡ್ಡಮನಿ, ಸೌಮ್ಯ ಕೆರೆಪ್ಯಾಟಿ, ಅನಿತಾ ನಾಯಕಸುಜಾತಾ ಸುಲಾಖೆ, ಮಂಗಳ ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.