ADVERTISEMENT

ಹೂತಿಟ್ಟ ಮಹಿಳೆಯ ಶವ ತೆಗೆದು ಪಂಚನಾಮೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:14 IST
Last Updated 6 ನವೆಂಬರ್ 2020, 15:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಣೆಬೆನ್ನೂರು: ನಗರದ ಗೌಳಿಗಲ್ಲಿಯ ಸೋನಿಯಾ ನಿರಂಜನ ಗೌಳಿ (20) ಎಂಬುವರ ಆತ್ಮಹತ್ಯೆ ಪ್ರಕರಣದಲ್ಲಿ ಸಂಶಯದ ದೂರು ಆಧರಿಸಿ ಪೊಲೀಸರು, ಹೂತಿಟ್ಟ ಶವವನ್ನು ಹೊರತೆಗೆದು ಪಂಚನಾಮೆ ನಡೆಸಿದರು.

2020 ಜುಲೈ 15 ರಂದು ಸೋನಿಯಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಚೆಗೆ ಇದು ಆತ್ಮಹತ್ಯೆಯಲ್ಲ, ಸೋನಿಯಾ ಸಾವಿನ ಬಗ್ಗೆ ಸಂಶಯವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮೃತಳ ತಾಯಿ ದೂರು ಸಲ್ಲಿಸಿದ್ದರು.

ಡಿವೈಎಸ್‌ಪಿ ಟಿ.ವಿ.ಸುರೇಶ ಅವರು ತನಿಖೆ ಕೈಗೊಂಡು ಮೃತಳ ಪತಿ ನಿರಂಜನ ಗೌಳಿಯನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಿದ್ದಾರೆ. ಶುಕ್ರವಾರ (ನ.6) ತಹಶೀಲ್ದಾರ್‌ ಬಸನಗೌಡ ಕೋಟೂರ ನೇತೃತ್ವದಲ್ಲಿ ದೇವರಗುಡ್ಡ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ಮಹಿಳೆಯ ಶವ ಹೊರ ತೆಗೆದು ಪಂಚನಾಮೆ ನಡೆಸಿದರು.

ADVERTISEMENT

ಹಿನ್ನೆಲೆ: ನಗರದ ಗೌಳಿ ಗಲ್ಲಿಯ ನಿರಂಜನ ಎಂಬಾತನಿಗೆ 2019 ಏಪ್ರಿಲ್‌ 15 ರಂದು ಸೋನಿಯಾಳನ್ನು ಮದುವೆ ಮಾಡಿಕೊಡಲಾಗಿತ್ತು. 4 ತೊಲೆ ಬಂಗಾರ, ಒಂದು ಕೆ.ಜಿ ಬೆಳ್ಳಿ ವರದಕ್ಷಿಣೆ ನೀಡಲಾಗಿತ್ತು. ಒಂದು ವರ್ಷದ ಬಳಿಕ ನಿರಂಜನ ಕುಟುಂಬದವರು ಸೋನಿಯಾಗೆ ನಿರಂತರ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಸೋನಿಯಾ ಶವ ಸಂಸ್ಕಾರದ ವೇಳೆ ಆಕೆಗೆ ಕೊರೊನಾ ಇತ್ತು. ಸಂಬಂಧಿಕರಿಗೆ ತಿಳಿಸುವುದು ಬೇಡ ಎಂದು ಹಾಲೇಶಪ್ಪ ಗೌಳಿ ಮತ್ತು ಪರಮೇಶಪ್ಪ ಗೌಳಿ ಬೆದರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸೋನಿಯಾ ಪತಿ ನಿರಂಜನ, ಆತನ ಸಂಬಂಧಿಕರಾದ ಮಧು, ಮೇಘನಾ, ಗಗನ ಹಾಲೇಶಪ್ಪ ಗೌಳಿ, ಮಾಲತೇಶ, ಹಾಲೇಶಪ್ಪ ಗೌಳಿ, ಪರಮೇಶ ಗೌಳಿ ವಿರುದ್ಧ ದೂರು ದಾಖಲಿಸಲಾಗಿತ್ತು. ಪಿಎಸ್‌ಐ ಪ್ರಭು ಕೆಳಗಿನಮನಿ ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.