ADVERTISEMENT

ಮೈಲಾರ ಮಹಾದೇವ ನಾಣ್ಯ ಮುದ್ರಣಕ್ಕೆ ನಿರ್ಧಾರ

ಆರ್ಥಿಕ ಇಲಾಖೆಗೆ ಮನವಿ ಸಲ್ಲಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 15:24 IST
Last Updated 7 ಡಿಸೆಂಬರ್ 2022, 15:24 IST
ಮೈಲಾರ ಮಹಾದೇವಪ್ಪ 
ಮೈಲಾರ ಮಹಾದೇವಪ್ಪ    

ಹಾವೇರಿ: ಸ್ವಾತಂತ್ರ್ಯ ಯೋಧ ಹುತಾತ್ಮ ಮೈಲಾರ ಮಹಾದೇವ ಅವರ ನಾಣ್ಯ ಮುದ್ರಣಕ್ಕೆ ರಾಜ್ಯ ಆರ್ಥಿಕ ಇಲಾಖೆಗೆ ಜಿಲ್ಲಾಡಳಿತದಿಂದ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಸಹಮತ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟೀಯ ಸ್ಮಾರಕ ಟ್ರಸ್ಟ್ ಸಭೆಯಲ್ಲಿ ಸದಸ್ಯರು ಮೈಲಾರ ಮಹಾದೇಪ್ಪ ಅವರ ನಾಣ್ಯ ಮುದ್ರಣಕ್ಕೆ ಕೇಂದ್ರ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕಾಗಿದೆ. ರಾಜ್ಯ ಆರ್ಥಿಕ ಇಲಾಖೆಗೆ ಈ ಕುರಿತಂತೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಕೊರಡೂರ ಗ್ರಾಮದ ಸೇವಾಶ್ರಮದಲ್ಲಿ ಶಿಲ್ಪ ಕಲಾಕೃತಿಗಳನ್ನು ನಿರ್ಮಿಸುವ ಕುರಿತಂತೆ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದರು.

ADVERTISEMENT

ಹಾವೇರಿಯಲ್ಲಿರುವ ವೀರಸೌಧದ ಆವರಣದಲ್ಲಿ ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ. ಈ ಅನುದಾನವನ್ನು ಮರಳಿ ಪಡೆಯುವ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಹುತಾತ್ಮ ವೀರಸೌಧದ ತಡೆಗೋಡೆ ನಿರ್ಮಾಣ, ಬೆಂಗಳೂರಿನ ರಾಜಾಜಿನಗರದಲ್ಲಿರುವ ನವರಂಗ ವೃತ್ತದ ಹತ್ತಿರದ ಮೈಲಾರ ಮಹಾದೇವ ಪಾರ್ಕ್‌ನಲ್ಲಿ ಮೈಲಾರ ಮಹಾದೇವ ಅವರ ಮೂರ್ತಿ ಸ್ಥಾಪನೆ ಹಾಗೂ ಅವರ ಸಂಕ್ಷಿಪ್ತ ಮಾಹಿತಿ ಪ್ರಕಟಣೆಗೆ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಪತ್ರ ಬರೆಯಲು ನಿರ್ಧರಿಸಲಾಯಿತು.

ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಮೈಲಾರ ಮಹಾದೇವಪ್ಪ ಅವರ ಭಾವಚಿತ್ರ ಹಾಗೂ ಸಂಕ್ಷಿಪ್ತ ಮಾಹಿತಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಅಳವಡಿಸಲು ರೈಲ್ವೆ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಮೈಲಾರ ಮಹಾದೇವರ ಕುರಿತಂತೆ ವಿಚಾರ ಸಂಕಿರಣ ಹಾಗೂ ಕಿರುಪುಸ್ತಕ ಮುದ್ರಿಸಲು ಅನುಮೋದಿಸಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಕಟ್ಟಿ, ಟ್ರಸ್ಟ್ ಸದಸ್ಯರಾದ ಸತೀಶ ಕುಲಕರ್ಣಿ, ತಿಪ್ಪನಗೌಡ್ರ , ಮಹದೇವ, ಪರಮೇಶ್ವರಪ್ಪ ಇತರ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.