ADVERTISEMENT

ಹಾವೇರಿ | ಬಸ್‌ನಲ್ಲಿ ನಮಾಜ್: ತನಿಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 23:22 IST
Last Updated 30 ಏಪ್ರಿಲ್ 2025, 23:22 IST
   

ಹಾವೇರಿ: ಹಾನಗಲ್‌ನಿಂದ ವಿಶಾಲಗಡ್‌ಕ್ಕೆ ಹೋಗುವ ಬಸ್ಸಿನ ಸೀಟಿನಲ್ಲಿಯೇ ಚಾಲಕ ನಯಾಜ್ ಮುಲ್ಲಾ ಅವರು ನಮಾಜ್ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಭದ್ರತಾ ವಿಭಾಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ.

‘ಹಾನಗಲ್ ಡಿಪೊದಲ್ಲಿ ಕೆಲಸ ಮಾಡುತ್ತಿರುವ ಚಾಲಕ ನಯಾಜ್, ಬಸ್ಸಿನ ಸೀಟಿನಲ್ಲಿ ನಮಾಜ್ ಮಾಡಿರುವ ಸಂಗತಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭದ್ರತಾ ವಿಭಾಗದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ವರದಿ ನೀಡಿದ ಬಳಿಕ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ವಾಕರಸಾಸಂ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರ್ಗಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿರುವುದು ಆಕ್ಷೇಪಾರ್ಹ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಸಿಬ್ಬಂದಿ ವಿರುದ್ಧ ಶಿಸ್ತಿನ‌ ಕ್ರಮ ಜರುಗಿಸಲು ಸೂಚಿಸಲಾಗಿದೆ.
ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

ಪ್ರಯಾಣಿಕನಿಂದ ವಿಡಿಯೊ ಚಿತ್ರೀಕರಣ: ‘ಚಾಲಕ ನಯಾಜ್, ಹಾನಗಲ್‌ನಿಂದ ವಿಶಾಲಗಡಕ್ಕೆ ಹೋಗುವ ಬಸ್‌ನಲ್ಲಿ (ಕೆಎ–27, ಎಫ್‌–0914) ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅಪಘಾತ ರಹಿತ ಗಣನೀಯ ಸೇವೆಗಾಗಿ ನಯಾಜ್ ಅವರಿಗೆ ಚಿನ್ನದ ಪದಕವೂ ಲಭಿಸಿದೆ’ ಎಂದು ವಾಕರಸಾಸಂ ಮೂಲಗಳು ಹೇಳಿವೆ.

ADVERTISEMENT

‘ಇತ್ತೀಚೆಗೆ ವಿಶಾಲಗಡಕ್ಕೆ ಹೊರಟಿದ್ದ ಚಾಲಕ, ನಮಾಜ್ ಸಮಯದಲ್ಲಿ ಮಾರ್ಗಮಧ್ಯೆಯೇ ಬಸ್ ನಿಲ್ಲಿಸಿದ್ದರು. ಚಾಲಕನ ಹಿಂಬದಿಯ ಸೀಟಿನಲ್ಲಿದ್ದ ಪ್ರಯಾಣಿಕರನ್ನು ಎಬ್ಬಿಸಿ ಬೇರೆಡೆ ಕಳುಹಿಸಿದ್ದರು. ನಂತರ, ಅದೇ ಸೀಟಿನಲ್ಲಿ ಕುಳಿತು ನಮಾಜ್ ಮಾಡಿದ್ದರು. ಇದೇ ದೃಶ್ಯವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಣ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ’ ಎಂದು ತಿಳಿಸಿದೆ.

ಸರ್ಕಾರಿ ಸಾರಿಗೆ ಬಸ್‌ನಲ್ಲಿ ಚಾಲಕ ನಮಾಜ್ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಚಾಲಕ ಈಗ ನಮಾಜ್ ಮಾಡಿದ್ದಾರೆ. ಮತ್ತೊಬ್ಬರು ಹೋಮ–ಹವನ ಮಾಡುತ್ತಾರೆ. ಸರ್ವಜನಾಂಗದ
ವರು ಬಳಸುವ ಸಾರಿಗೆ ಬಸ್‌ನಲ್ಲಿ ಇಂಥ ಆಚರಣೆಗೆ ಕಡಿವಾಣ ಹಾಕಬೇಕು’ ಎಂದು ಹಲವರು ಆಗ್ರಹಿಸಿದ್ದಾರೆ. ವಿಡಿಯೊ ಪೋಸ್ಟ್ ಮಾಡಿರುವ ಬಿಜೆಪಿ ಜಿಲ್ಲಾ  ಘಟಕ ‘ಈ ಚಾಲಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.