ರಾಣೆಬೆನ್ನೂರು: ವಯಸ್ಸು ಅಗಿದೆ ಎನ್ನುವುದು ದೇಹಕ್ಕೆ ಅಷ್ಟೇ ಹೊರತು, ದುಡಿದು ತಿನ್ನುವ ಛಲ ದಿಟ್ಟತನ ಇದ್ದರೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. ದುಡಿತವೇ ದುಡ್ಡಿನ ತಾಯಿ, ದುಡಿದು ತಿನ್ನಬೇಕು ಎಂಬುವುದಕ್ಕೆ ತಾಲ್ಲೂಕಿನ ಉಕ್ಕುಂದ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವಯೋ ವೃದ್ಧ ಕೂಲಿ ಕಾರ್ಮಿಕ ನೀಲಪ್ಪ ಮಾಚಪ್ಪ ಕಾನಬಸಣ್ಣನವರ ಅವರು ನರೇಗಾ ಯೋಜನೆಯಡಿ ಉತ್ತಮ ಬದುಕು ಕಟ್ಟಿಕೊಂಡ ಯಶೋಗಾಥೆ ಇದು.
ಕಾರ್ಮಿಕ ನೀಲಪ್ಪ ಅವರಿಗೆ ಯಾವುದೇ ಕೃಷಿ ಜಮೀನು ಇಲ್ಲ. ರಟ್ಟೆಯ ಮೇಲೆ ಆತನ ಬುದುಕು ಕಟ್ಟಿಕೊಳ್ಳಬೇಕಾಗಿದೆ. ಇಳಿವಯಸ್ಸಿನಲ್ಲೂ ನೀಲಪ್ಪ ಅವರು ಗುದ್ದಲಿ ಹಿಡಿದು ಮಣ್ಣು ಅಗೆವುದು ಯುವಕರನ್ನು ನಾಚಿಸುವಂತಿದೆ. ಆಧುನಿತೆಯಿಂದಾಗಿ ಕೈ ಕಾಲು ನೆಟ್ಟಗಿರುವ ಇಂದಿನ ಯುವಕರು ದುಡಿದು ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಂತಹ ವಾತಾವರಣದಲ್ಲಿ 65ರ ವಯೋಮಾನದ ನೀಲಪ್ಪ ಅವರು ಕೂಲಿ ಕೆಲಸ ಮಾಡಲು ಯಾವುದೇ ಶಕ್ತಿ ಕುಂದಿಲ್ಲ. ಈಗ ನರೇಗಾ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವುದು ವೃದ್ಧರ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದ್ದಾರೆ.
ಉಕ್ಕುಂದ ಗ್ರಾಮದಲ್ಲಿ ವೃದ್ಧ ನೀಲಪ್ಪ ಅವರನ್ನು ರೈತರ ಜಮೀನು ಕೆಲಸಕ್ಕೆ ಬರುತ್ತೇನೆ ಎಂದರೂ ವಯಸ್ಸಾಗಿದೆ ಕೆಲಸಕ್ಕೆ ಬರುವುದು ಬೇಡ ಎಂದು ಅನುಕಂಪ ತೋರಿಸುತ್ತಿದ್ದರು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಯಸ್ಸು ಆಗಿದೆ, ನಿನಗೆ ಜಮೀನಿನಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿ ವಾಪಸ್ಸು ಕಳಿಸುತ್ತಿದ್ದರು. ಇದರಿಂದ ಬೇಸತ್ತು ದಿನಾಲು ಗಿಡ ಮರಗಳನ್ನು ಕಡೆದು ಕಟ್ಟಿಗೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಕೊಡಿಸಲು ತೊಂದರೆಯಾಗಿತ್ತು.
ನೀಲಪ್ಪ ಅವರು ಕೂಲಿ ನಾಲಿ ಮಾಡುತ್ತ ತನಗಿರುವ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದು, ಸಾಲ ಸೂಲ ಮಾಡಿ ನಾಲ್ಕು ಜನರ ಮದುವೆ ಕೂಡ ಮಾಡಿದ್ದಾರೆ. ಮಗ ಕೂಡ ನರೇಗಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲು ರೈತರ ಹೊಲದಲ್ಲಿ ಕೂಲಿ ನಾಲಿ ಮಾಡುತ್ತಿದ್ದರು.
- ಪ್ರತಿ ವರ್ಷ ₹ 15 ರಿಂದ 16 ಸಾವಿರ ನರೇಗಾ ಕೂಲಿ ಹಣ ಖಾತೆಗೆ ಜಮಾ ಆಗಿದೆ. ಇದರೊಂದಿಗೆ ಸಾಮಾಜಿಕ ಭದ್ರತಾ ಯೋಜನೆ ಅಡಿ ವೃದ್ಧಾಪ್ಯ ವೇತನ ಬರುತ್ತಿದ್ದು ಪರಾವಲಂಬನೆ ತಪ್ಪಿದೆ
ನೀಲಪ್ಪ ಕಾನಬಸಣ್ಣನವರ ಕೂಲಿಕಾರ್ಮಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.