ADVERTISEMENT

ನರೇಗಾ ಕೂಲಿಯನ್ನು ₹500ಕ್ಕೆ ಹೆಚ್ಚಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 13:19 IST
Last Updated 2 ಮೇ 2024, 13:19 IST
ರಾಣೆಬೆನ್ನೂರಿನಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿದ್ಧರಾಜು ಮಾತನಾಡಿದರು 
ರಾಣೆಬೆನ್ನೂರಿನಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿದ್ಧರಾಜು ಮಾತನಾಡಿದರು    

ರಾಣೆಬೆನ್ನೂರು: ಕಾರ್ಮಿಕರಿಗೆ ಗೌರವ ಸಲ್ಲಿಸುವುದಕ್ಕಾಗಿ ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿದ್ಧರಾಜು ಹೇಳಿದರು. 

ನಗರದ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಪಂಚಾಯತಿ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ
ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಮೊದಲು ದೇಶದಲ್ಲಿ ಬಂಡವಾಳ ಶಾಹಿಗಳು ಕಾರ್ಮಿಕರನ್ನು ದಿನಕ್ಕೆ 15 ಗಂಟೆಯವರೆಗೂ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದರು. ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇರುತ್ತಿರಲಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ಸಂಘಟನೆಗಳು ಹುಟ್ಟಿಕೊಂಡವು. ವನಸಿರಿ ಸಂಸ್ಥೆಯು ಕಾರ್ಮಿಕರ ಏಳ್ಗೆಗಾಗಿ ಶ್ರಮಿಸುತ್ತಿದೆ’ ಎಂದು ಹೇಳಿದರು.

ADVERTISEMENT

ವನಸಿರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಮಾತನಾಡಿ, ‘10 ಸಾವಿರ ಕಾರ್ಮಿಕರ ಸಂಘಟನೆಯ ಮೂಲಕ ಇಂದು ಜಿಲ್ಲೆಯಲ್ಲಿ ವಲಸೆ ತಡೆಗಟ್ಟಿ ಕೂಲಿ ಕಾರ್ಮಿಕರ ಜೀವನ ಸುಧಾರಣೆಗಾಗಿ ಆರೋಗ್ಯ, ಶಿಕ್ಷಣ ಮತ್ತು ಕೆಲಸದ ಹಕ್ಕಿನ ಮೂಲಕ ವಲಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ’ ಎಂದರು.

‘ನರೇಗಾದಲ್ಲಿ 100 ರಿಂದ 200 ದಿನಗಳಿಗೆ ಉದ್ಯೋಗ ಒದಗಿಸಬೇಕು. ಕೂಲಿಯನ್ನು ₹ 500ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ, ನೆರವು ಇದ್ದಲ್ಲಿ ಉತ್ತಮ ಸಾಧನೆ ಮಾಡಬಹುದು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರುಡಿಕಟ್ಟಿ ಮಾತನಾಡಿ, ‘ಕಾರ್ಮಿಕರಿಗೆ ಕಾನೂನು ಪರಿಜ್ಞಾನ ಅವಶ್ಯವಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಸಂಘಟಿತರಾಗಿ ಹೋರಾಡಬೇಕು. ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿಯಲ್ಲಿ ಕಾರ್ಮಿಕರಿಗೆ 100 ದಿನ ಕಡ್ಡಾಯ ಕೆಲಸ ಪಡೆಯಲು ಅವಕಾಶವಿದೆ ಅದನ್ನು ಸದುಪಯೋಗಪಡೆದುಕೊಳ್ಳಬೇಕು’ ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಸಂಯೋಜಕ ಡಿ.ವಿ. ಅಂಗೂರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಭಾಗವಹಿಸಿ ಮತದಾನ ಮಾಡಲು ಪ್ರತಿಜ್ಞಾವಿಧಿ ಬೋಧಿಸಿದರು.

ವಕೀಲರ ಸಂಘದ ಎಚ್.ಎಸ್. ಸಿದ್ದಪ್ಪನವರ, ಹನುಮಂತಪ್ಪ ಮಣ್ಣಮ್ಮನವರ, ಜಿ.ಪಿ. ನಧಾಪ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.