ADVERTISEMENT

‌ರಟ್ಟೀಹಳ್ಳಿ: ಪೂರ್ಣಗೊಳ್ಳದ ರಾಣೆಬೆನ್ನೂರು ಬೈಂದೂರ ಮಾರ್ಗದ ರಾಷ್ಟ್ರೀಯ ಹೆದ್ದಾರಿ

ಪ್ರಯಾಣಿಕರಿಗೆ ಸಂಕಷ್ಟ; ಶೀಘ್ರ ಕ್ರಮ ವಹಿಸಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 3:15 IST
Last Updated 10 ಅಕ್ಟೋಬರ್ 2025, 3:15 IST
ರಟ್ಟೀಹಳ್ಳಿ ತಾಲ್ಲೂಕಿನ ಮದಗ-ಮಾಸೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅ‍‍ಪೂರ್ಣಗೊಂಡಿದೆ 
ರಟ್ಟೀಹಳ್ಳಿ ತಾಲ್ಲೂಕಿನ ಮದಗ-ಮಾಸೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅ‍‍ಪೂರ್ಣಗೊಂಡಿದೆ    

ರಟ್ಟೀಹಳ್ಳಿ: ರಟ್ಟೀಹಳ್ಳಿ, ಶಿಕಾರಿಪುರ ತಾಲ್ಲೂಕು ಗಡಿ ಅಂಚಿನಲ್ಲಿರುವ ಮಗದ ಮಾಸೂರು ಬಳಿ 410 ಮೀಟರ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯು ಅಪೂರ್ಣಗೊಂಡಿದ್ದು, ನಿತ್ಯ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

₹193 ಕೋಟಿ ವೆಚ್ಚದಲ್ಲಿ ರಾಣೆಬೆನ್ನೂರನಿಂದ ಬೈಂದೂರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 766 ಸಿ  ಬಹುತೇಕ ಪೂರ್ಣಗೊಂಡಿದ್ದು, ಮದಗ ಮಾಸೂರು ಬಳಿ ಮಾತ್ರ ಸಮಸ್ಯೆಯಾಗಿದೆ. ಪಕ್ಕದ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.

ಈ ಭಾಗದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು, ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಪ್ರವಾಸಿ ತಾಣವಾದ ಮದಗ ಮಾಸೂರಿಗೆ ಬರುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ADVERTISEMENT

ಖಂಡೇಬಾಗೂರ ಬಳಿ ಇರುವ ತುಂಗಾ ಮೇಲ್ದಂಡೆ ಯೋಜನೆಯ ಮೇಲ್ಸೇತುವೆ ಕೆಳಗೆ ನಿರಂತರವಾಗಿ ಕಾಲುವೆ ನೀರು ಬಸಿದು, ರಾಷ್ಟ್ರೀ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಹಲವು ಬಾರಿ ತುಂಗಾ ಮೇಲ್ದಂಡೆ ಯೋಜನೆ ಕಚೇರಿಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹಿರೇಮೊರಬ–ಖಂಡೇಬಾಗೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮದಗ-ಮಾಸೂರು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಎರಡು ವರ್ಷದಿಂದ ಸ್ಥಗಿತಗೊಂಡಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸುರಕ್ಷಿತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಕೋಡಮಗ್ಗಿ ಗ್ರಾಮ ಪಂಚಾಯ್ತಿ ಸದಸ್ಯ ಯಡವಂತ ಯಡಗೋಡಿ.

‘ರಟ್ಟೀಹಳ್ಳಿ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 766 ಸಿ ನಿರ್ಮಾಣಗೊಂಡ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದೆ. ವಿವಿಧೆಡೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಸೂಚನಾ ಫಲಕ ಹಾಗೂ ರಸ್ತೆಯುಬ್ಬು ನಿರ್ಮಸಲು ಕ್ರಮಕೈಗೊಳ್ಳಬೇಕು. ಭಗತಸಿಂಗ್ ವೃತ್ತದ ಬಳಿ ಬಸ್ ತಂಗುದಾಣ ನಿರ್ಮಿಸಬೇಕು’ ಎಂದು ರುದ್ರಗೌಡ ಪಾಟೀಲ ಆಗ್ರಹಿಸಿದರು.

ರಟ್ಟೀಹಳ್ಳಿ ತಾಲ್ಲೂಕು ಕೋಡಮಗ್ಗಿ ಗ್ರಾಮದ ಮದಗ-ಮಾಸೂರು ಬಳಿ ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡ ಕಾರಣ ಕಾಮಗಾರಿ ಸ್ಥಗಿತಗೊಂಡು ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದು.

ಮದಗ-ಮಾಸೂರು ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಗೆ ನನ್ನ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿದ್ದು ಸೂಕ್ತ ಪರಿಹಾರ ಹಣ ನೀಡಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಬೇಕು

–ಭೀಮಪ್ಪ ಯಲವದಹಳ್ಳಿ ಕೋಡಮಗ್ಗಿ ಗ್ರಾಮದ ರೈತ

ಶೀಘ್ರದಲ್ಲೇ ಕ್ರಮ ವಹಿಸಲಾಗುವುದು

‘ಸದ್ಯದ ರಸ್ತೆ ವಿಸ್ತರಣೆ ಮಾಡಲು ಸಾಧ್ಯವಾಗದ ಕಾರಣ ಪಕ್ಕದ ಜಮೀನು ಭೂಸ್ವಾಧೀನ ಪ್ರಕ್ರಿಯೆ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯಲ್ಲೇ ಉಳಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ರಟ್ಟೀಹಳ್ಳಿ ಪಟ್ಟಣದ ಭಗತಸಿಂಗ್ ವೃತ್ತದ ಬಳಿ ಸೂಚನಾ ಫಲಕಗಳು ಸೇರಿದಂತೆ ರಂಬಲ್‌ ಸ್ಟ್ರಿಪ್‌ ಹಾಕಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಭರತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.