ADVERTISEMENT

ಜೀವ ಬಿಟ್ಟೇವು, ಭೂಮಿ ಬಿಡಲ್ಲ: ಮಲ್ಲಿಕಾರ್ಜುನ ಬಳ್ಳಾರಿ

ಕೈಗಾರಿಕಾ ಕಾರಿಡಾರ್‌ ಯೋಜನೆಗೆ ವಿರೋಧ: ಡಿ.12ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 14:21 IST
Last Updated 2 ಡಿಸೆಂಬರ್ 2022, 14:21 IST
ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ
ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ   

ಹಾವೇರಿ: ಕೃಷಿ ಜಮೀನನ್ನು ಕೈಗಾರಿಕಾ ಕಾರಿಡಾರ್‌ ಯೋಜನೆಗೆ ರಾಜ್ಯ ಸರ್ಕಾರ ಆದೇಶಿಸಿದ ಅಧಿಸೂಚನೆ ವಿರೋಧಿಸಿ ಹಾಗೂ ತುಂಬಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಒತ್ತಾಯಿಸಿ ಡಿ.12ರಂದುಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಹತ್ತಿರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕಾರಿಡಾರ್ ನೆಪದಲ್ಲಿ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು, ಅಳಲಗೇರಿ ಹಾಗೂ ಅರಬಗೊಂಡ ಗ್ರಾಮಗಳ ಸುಮಾರು 1017 ಎಕರೆ ಫಲವತ್ತಾದ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲು ಮುಂದಾಗಿದ್ದು, ಕೆಐಡಿಬಿ ಈಗಾಗಲೇ ರೈತರಿಗೆ ನೋಟಿಸ್ ನೀಡಿದೆ. ಇದನ್ನು ವಿರೋಧಿಸಿ 360 ರೈತರು ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದರು.

ರೈತರ ಮೇಲೆ ದಬ್ಬಾಳಿಕೆ:ಸೌಜನ್ಯಕ್ಕಾದರೂ ಸರ್ಕಾರ ರೈತರನ್ನು ಕೇಳಬೇಕಿತ್ತು. ಅದನ್ನು ಬಿಟ್ಟು ರೈತರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಭೂಮಿ ಕಿತ್ತುಕೊಳ್ಳುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಯಾವುದೇ ಕಾರಣಕ್ಕೂ ರೈತರು ಫಲವತ್ತಾದ ಭೂಮಿ ನೀಡಲು ಸಿದ್ಧರಿಲ್ಲ, ಜೀವ ಬಿಟ್ಟೇವು ಹೊರತು ಭೂಮಿ ಬಿಡಲ್ಲ. ಅಲ್ಲದೇ ಈ ಭಾಗದ ರೈತರ ಜಮೀನು ಬಿಟ್ಟು ಬೇರೆ ಭಾಗದ ಯಾವುದೇ ರೈತರ ಜಮೀನು ಗುರುತಿಸಿದರೂ ಸಹ ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ADVERTISEMENT

ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಗೆ ಮಂಜೂರಾಗಿರುವ ಕೈಗಾರಿಕೆ ಸ್ಥಾಪನೆ ಮಾಡಬೇಕೆಂದಿದ್ದರೆ, ಛತ್ರದ ಬಳಿಯ 643 ಎಕರೆ ಸರ್ಕಾರಿ ಜಮೀನು ಇದ್ದು, ಅಲ್ಲಿ ಕೈಗಾರಿಕೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ರೈತರ ಫಲವತ್ತಾದ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದು ಖಂಡನೀಯ. ಪ್ರತಿಭಟನೆಯ ಒಳಗಾಗಿ ಸರ್ಕಾರ ಎಚ್ಚೆತ್ತುಕೊಂಡು ರೈತರ ಭೂಮಿ ವಶಕ್ಕೆ ಪಡೆಯುವುದಿಲ್ಲ ಎಂದು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಡಿ.12ರಿಂದ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು. ಈ ಹೋರಾಟಕ್ಕೆ ಅನೇಕ ಮಠಾಧೀಶರು ಬೆಂಬಲ ನೀಡಲು ಮುಂದಾಗಿದ್ದು, ಈಗಾಗಲೇ ಕನಕಗುರು ಪೀಠದ ನಿರಂಜನಾನಂದಪುರಿ ಶ್ರೀಗಳು ಬೆಂಬಲ ನೀಡಿದ್ದಾರೆ ಎಂದರು.

ತುಂಗಾ ಮೇಲ್ದಂಡೆ ಕಾಲುವೆಗೆ ಜಮೀನು ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ರೈತರ ಬೆಳೆ ಸಾಲ, ಕೃಷಿ ಸಾಲ ಮನ್ನಾ ಮಾಡಬೇಕು ಸೇರಿದಂತೆ ಸುಮಾರು 12 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.12ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಸುಮಾರು 3 ಸಾವಿರಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಮುಖರಾದ ಶಿವಬಸಪ್ಪ ಭೋವಿ, ಸುರೇಶ ಚಲವಾದಿ, ಕಿರಣಕುಮಾರ ಗಡಿಗೋಳ, ಮರಿಗೌಡ ಪಾಟೀಲ, ರಾಜು ಮುತ್ತಗಿ, ಫೈಯಾಸ್‍ಸಾಬ್ ದೊಡ್ಡಗುಬ್ಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.