
ಹಾವೇರಿ: ‘ದೇವರು ಮನುಷ್ಯನನ್ನು ಹುಟ್ಟಿಸುವಾಗಲೇ ಸರ್ವ ರೋಗಗಳನ್ನು ಎದುರಿಸಲು ಪ್ರತಿರೋಧಕ ಶಕ್ತಿ ಕೊಟ್ಟಿರುತ್ತಾನೆ. ನಾವು ರಾಸಾಯನಿಕ-ಸಾವಯವಯೆಂಬ ಮಹಾ ಅಪಾಯಕಾರಿ ಕೃಷಿಯಿಂದ ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸಿಕೊಂಡು ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡಿ, ಬೆಳೆದ ಉತ್ಪನ್ನವನ್ನು ತಿಂದರೆ ಮಾತ್ರ ಆರೋಗ್ಯಕರ ಜೀವನ ನಡೆಸಬಹುದು. ಇದು ರೈತರಿಗೂ ಲಾಭದಾಯಕ’ ಎಂದು ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ‘ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ‘ನೈಸರ್ಗಿಕ ಕೃಷಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡಿದ್ದ ಅವರು, ನೈಸರ್ಗಿಕ ಕೃಷಿ ಮಾಡುವುದು ಹೇಗೆ? ಎಂಬುದನ್ನು ವಿವರಿಸಿದರು.
‘ಅಮೆರಿಕದಲ್ಲಿ ಹಂದಿಗಳು ತಿನ್ನದ ಕೆಟ್ಟ ಗೋಧಿಯನ್ನು ಭಾರತಕ್ಕೆ ಕಳುಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಕೃಷಿಯಲ್ಲಿ ಸ್ವಾವಲಂಬಿ ಹೊಂದಲು ಹಸಿರು ಕ್ರಾಂತಿ ಜಾರಿಗೊಳಿಸಲಾಯಿತು. ಅದಾಗಿ 50 ವರ್ಷವಾಗಿದೆ. ಎಣ್ಣೆ ಪದಾರ್ಥ, ಗೋಧಿ, ಬೇಳೆ ಕಾಳು, ಮಸಾಲೆ, ಔಷಧಿ ಕಚ್ಚಾ ವಸ್ತು ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದು ಯಾವ ಆತ್ಮನಿರ್ಭರ. ಇದೊಂದು ಶುದ್ಧ ಸುಳ್ಳು. ಏನು ಪ್ರಯೋಜನವಾಗದ ಹಸಿರು ಕ್ರಾಂತಿಗೆ ಈಗ ಪರ್ಯಾಯ ವ್ಯವಸ್ಥೆ ಬೇಕಾಗಿದೆ’ ಎಂದರು.
‘ಯೂರೋಪ, ದಕ್ಷಿಣ ಅಮೆರಿಕಾ ಹಾಗೂ ಮಧ್ಯ ಪ್ರಾಂತ್ಯಗಳಲ್ಲಿ ಮಾಂಸ ತಿಂದರಷ್ಟೇ ದೇಹಕ್ಕೆ ಪೋಷಕಾಂಶ ಸಿಗುವ ನಂಬಿಕೆಯಿದೆ. ಅಲ್ಲಿಯ ಜನರು ರಾಸು ಸಾಕುತ್ತಿದ್ದಾರೆ. ಅವುಗಳ ಆಹಾರಕ್ಕಾಗಿ, ಕಾಡುಗಳನ್ನು ಕಡಿದು ಮೆಕ್ಕೆಜೋಳ– ಸೋಯಾಬಿನ್ ಬೆಳೆಯುತ್ತಿದ್ದಾರೆ. ಈಗ ಇಥೆನಾಲ್ ತಯಾರಿ ಜೋರಾಗಿದೆ. ಮೆಕ್ಕೆಜೋಳ– ಸೋಯಾಬಿನ್ ಬೆಳೆ ಹೆಚ್ಚಾಗಿದೆ. ಅದನ್ನು ಭಾರತ ಕಡ್ಡಾಯವಾಗಿ ಖರೀದಿಸಬೇಕೆಂದು ಅಮೆರಿಕ ಒತ್ತಡ ಹೇರಿ ಬೆದರಿಸುತ್ತಿದೆ’ ಎಂದರು.
‘ಹಸಿರು ಕ್ರಾಂತಿಗೂ ಮುನ್ನ ಬಿಳಿ ಅಕ್ಕಿ, ಗೋಧಿಯನ್ನೇ ನಾವು ನೋಡಿರಲಿಲ್ಲ. ಈಗ ಅದನ್ನೇ ಜನರು ಹೆಚ್ಚಾಗಿ ತಿನ್ನುತ್ತಿದ್ದಾರೆ. ಸಿರಿಧಾನ್ಯ, ಜೋಳ, ಗಾಣದ ಎಣ್ಣೆ, ಅಗಸೆ–ಕುಸುಬೆ ಎಣ್ಣೆ ತಿನ್ನುವುದನ್ನೇ ಮರೆತಿದ್ದಾರೆ. ತೊಗರಿ ಸೇರಿ ಬೇಳೆ ಕಾಳುಗಳನ್ನೂ ತಿನ್ನುತ್ತಿಲ್ಲ. ಹೀಗಾಗಿಯೇ ಕ್ಯಾನ್ಸರ್, ಮಧುಮೇಹ, ಹೃದಯ ಕಾಯಿಲೆ ಬರುತ್ತಿದೆ. ದೇಶದ ಜನರ ಆರೋಗ್ಯ ಹದಗೆಡಿಸುವ ವ್ಯವಸ್ಥಿತ ಷಡ್ಯಂತ್ರವಿದು’ ಎಂದು ಎಚ್ಚರಿಕೆ ನೀಡಿದರು.
‘ಭಾರತದಲ್ಲಿ 6 ಲಕ್ಷ ಹಳ್ಳಿಗಳಿವೆ. ಹಳ್ಳಿಯ ರೈತರು ಬೀಜ, ಕೃಷಿ ಯಂತ್ರ ಹಾಗೂ ಇತರೆ ಉತ್ಪನ್ನ ಖರೀದಿಸಿ, ವರ್ಷಕ್ಕೆ ₹32 ಲಕ್ಷ ಕೋಟಿ ಹೊರಗಿನರಿಗೆ ಕೊಡುತ್ತಿದ್ದಾರೆ. ಗ್ರಾಮದಲ್ಲಿರುವ ರೈತರೇ, ತಮ್ಮ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಂಡರೆ ಗ್ರಾಮದಿಂದ ಹೊರಗೆ ಹೋಗುವ ಹಣ ಬಂದ್ ಆಗುತ್ತದೆ. ನಗರದ ಹಣ ಗ್ರಾಮಕ್ಕೆ ಬರುತ್ತದೆ. ಗ್ರಾಮವೂ ಅಭಿವೃದ್ಧಿಯಾಗಿ, ಆತ್ಮನಿರ್ಭರ ಸಾಧ್ಯವಾಗುತ್ತದೆ. ಅಂಥ ನೈಸರ್ಗಿಕ ಕೃಷಿಯನ್ನೇ ನಾನು ಮಾಡುತ್ತಿದ್ದೇನೆ’ ಎಂದರು.
‘ಎರೆಹುಳುಗಳೇ ನನ್ನ ಟ್ರ್ಯಾಕ್ಟರ್, ವಾತಾವರಣದ ನೀರೇ ಆಧಾರ, ಜವಾರಿ ಬೀಜಗಳೇ ಅಸ್ತ್ರವಾಗಿವೆ. ಕೃಷಿ ಬೆಳೆಗೆ ಯಾವುದೇ ಹುಳು ಬಂದರೂ, ಅದನ್ನು ತಿನ್ನುವ ಮತ್ತೊಂದು ಹುಳುವನ್ನು ದೇವರು ಸೃಷ್ಟಿಸಿದ್ದಾನೆ. ಎಲ್ಲದಕ್ಕೂ ನಿಸರ್ಗದಲ್ಲಿಯೇ ಪರಿಹಾರವಿದೆ. ಅದನ್ನು ನಾವು ಪತ್ತೆ ಮಾಡಿ ಕೃಷಿ ಮಾಡಬೇಕು. ವಿಷಮುಕ್ತ ಆಹಾರವೆಂದು ಹೇಳಿಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಬೇಕು. ದುಡ್ಡಿರುವ ಜನ ನಮ್ಮಲ್ಲಿದ್ದಾರೆ. ಆರೋಗ್ಯದ ಬಗ್ಗೆ ಅವರಲ್ಲ ಕಾಳಜಿ ಮೂಡಿಸಿದರೆ, ನೈಸರ್ಗಿಕ ಕೃಷಿಯ ಬೆಳೆಗೂ ಬೇಡಿಕೆ ಬರುತ್ತದೆ. ರೈತರ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ’ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಮುಖಂಡರಾದ ರಮೇಶ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.
ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನೈಸರ್ಗಿಕ ಕೃಷಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡಿದ್ದ ರೈತರು
₹100 ಶುಲ್ಕ: ವಾಪಸು ಹೋದ ರೈತರು
ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದರು. ₹ 100 ಪ್ರವೇಶ ದರವಿರುವ ಬಗ್ಗೆ ಸಂಘದ ಸದಸ್ಯರಿಗೆ ಮಾತ್ರ ತಿಳಿಸಲಾಗಿತ್ತು. ಹೊರಗಡೆಯಿಂದ ಬಂದ ರೈತರಿಗೆ ಶುಲ್ಕದ ವಿಷಯ ಗೊತ್ತಿರಲಿಲ್ಲ. ಸ್ಥಳಕ್ಕೆ ಬಂದ ರೈತರಿಗೆ ಶುಲ್ಕ ಕೇಳಿದಾಗ ಬಹುತೇಕರು ವಾಪಸು ಹೋದರು. ‘ಪತ್ರಿಕೆಯಲ್ಲಿ ಸುದ್ದಿ ನೋಡಿ ಬಸ್‌ಗಷ್ಟೇ ದುಡ್ಡು ಇಟ್ಟುಕೊಂಡು ಬಂದಿದ್ದೆ. ಆದರೆ ಇಲ್ಲಿ ₹100 ಶುಲ್ಕವೆಂದರು. ಮೊದಲೇ ಹೇಳಿದರೆ ಹಣ ತರಬಹುದಿತ್ತು. ಈಗ ವಾಪಸು ಹೊರಟಿದ್ದೇನೆ’ ಎಂದು ಶಿಗ್ಗಾವಿ ರೈತರೊಬ್ಬರು ಹೇಳಿದರು.
‘ಬೆಲೆ ನಿಗದಿ ಅಧಿಕಾರ ಸರ್ಕಾರಕ್ಕಿಲ್ಲ’
‘ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳಿಗೆ ಬೆಲೆ ನಿಗದಿ ಮಾಡುವಂತೆ ರೈತ ಸಂಘಗಳು ಹೋರಾಟ ಮಾಡುತ್ತಿವೆ. ಆದರೆ ಸರ್ಕಾರ ಬೆಲೆ ನಿಗದಿ ಮಾಡುತ್ತಿಲ್ಲ. ಏಕೆಂದರೆ ಬೆಲೆ ನಿಗದಿ ಕಾನೂನು ಮಾಡುವ ಅಧಿಕಾರ ಸರ್ಕಾರಗಳಿಗಿಲ್ಲ’ ಎಂದು ಸುಭಾಷ್ ಪಾಳೇಕರ್ ವಾಸ್ತವ ಬಿಚ್ಚಿಟ್ಟರು. ‘ಅಂತರರಾಷ್ಟ್ರೀಯ ವ್ಯಾಪಾರ ಮೇಲ್ವಿಚಾರಣೆ ಮಾಡುವ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ‘ರೈತರ ಬೆಳೆಗೆ ನಿರ್ದಿಷ್ಟ ಬೆಲೆ ನಿಗದಿ ಮಾಡದೇ ತೆರೆದ ಮಾರುಕಟ್ಟೆಗೆ ಬಿಡಬೇಕು. ದರದ ವಿಚಾರವಾಗಿ ಯಾವುದೇ ಕಾನೂನು ಮಾಡಬಾರದು’ ಎಂದು ಒಪ್ಪಂದ ಮಾಡಿಕೊಂಡಿದೆ. ಈ ಸತ್ಯವನ್ನು ರೈತರು ಅರಿತುಕೊಳ್ಳಬೇಕು. ಒಂದೇ ಬೆಳೆಗೆ ಜೋತು ಬೀಳದೇ ನೈಸರ್ಗಿಕ ಕೃಷಿ ಪದ್ಧತಿಯಿಂದ ಬೇರೆ ಬೆಳೆಗಳನ್ನು ಬೆಳೆಯಬೇಕು’ ಎಂದರು.
ಕಾಡಿನಲ್ಲಿರುವ ಗಿಡಗಳು ಎಂಥ ವಾತಾವರಣವಿದ್ದರೂ ಹಣ್ಣು ಕೊಡುತ್ತವೆ. ಆದರೆ ರೈತರ ಬೆಳೆ ಹಾಳಾಗುತ್ತಿದೆ. ಮಣ್ಣಿನಲ್ಲಿ ಎಲ್ಲ ಪೋಷಾಕಾಂಶಗಳಿವೆ. ಅದನ್ನು ಗುರುತಿಸಿ ನೈಸರ್ಗಿಕ ಕೃಷಿ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕುವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ರೈತರ ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ಮಣ್ಣನ್ನು ಸರಿ ಮಾಡಿ ಆದಾಯ ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆಯಬೇಕು. ಹಾವೇರಿ ಸಾಲ ಮುಕ್ತವಾಗಬೇಕುಚುಕ್ಕಿ ನಂಜುಂಡಸ್ವಾಮಿ, ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯೆ