ಹಾವೇರಿ: ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ, ವಿಭಿನ್ನವಾಗಿ ಹಾವೇರಿ ನಗರದಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ‘ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂದಿನ ಸಮ್ಮೇಳನದ ಆತಿಥ್ಯವನ್ನು ಹಾವೇರಿ ಜಿಲ್ಲೆಗೆ ವಹಿಸಲು ತೀರ್ಮಾನ ಕೈಗೊಂಡ ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲ ಪದಾಧಿಕಾರಿಗಳು ಮತ್ತು ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಅವರು ಕೂಡ ಪತ್ರ ನೀಡಿ ಸಹಕಾರ ನೀಡಿದ್ದಕ್ಕೆ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
86ನೇ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರನ್ನು ಸೇರಿಸಲು ಕ್ರಮ ಕೈಗೊಳ್ಳುತ್ತೇವೆ. ಸಚಿವರು, ಶಾಸಕರು, ಎಲ್ಲ ಸಂಘ–ಸಂಸ್ಥೆ ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮ್ಮೇಳನದ ರೂಪುರೇಷೆ ತೀರ್ಮಾನಿಸುತ್ತೇವೆ. ನಾವೆಲ್ಲರೂ ಒಂದುಗೂಡಿ ಸಮ್ಮೇಳನದ ಯಶಸ್ಸಿಗೆ ಕಂಕಣಬದ್ಧರಾಗೋಣ ಎಂದು ಹೇಳಿದರು.
ಆಡಳಿತಾಧಿಕಾರಿ ನೇಮಕ
ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕಿಮ್ಸ್ ನೇತ್ರ ತಜ್ಞ ಉದಯ ಮುಳಗುಂದ ಅವರನ್ನು ಆಡಳಿತಾಧಿಕಾರಿಯನ್ನಾಗಿ ಸರ್ಕಾರ ಹೊಸದಾಗಿ ನೇಮಿಸಿದೆ ಎಂದರು. ಸ್ಥಳದ ಬಗ್ಗೆ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆ ಪ್ರಕ್ರಿಯೆ ನಡೆದಿದೆ. ಜಂಟಿ ನಿರ್ದೇಶಕರ ಜತೆ ಮಾತನಾಡಿ, ಮುಂದಿನ ವರ್ಷ ಬರುವ ಆಶಯವಿದೆ ಎಂದರು. ಸರ್ಕಾರಿ ವಸತಿಯುತ ಪದವಿ ಕಾಲೇಜು ಸ್ಥಾಪನೆಗೆ ಕಳ್ಳಿಹಾಳದ ಸಮೀಪ 9 ಎಕರೆ 30 ಗುಂಟೆ ಸರ್ಕಾರಿ ಜಾಗ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
24x7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ ಓಡಿ ಹೋಗಿದ್ದಾನೆ. ಯೋಜನೆ ಅನುಷ್ಠಾನ ಸಂಬಂಧ ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು, ಕ್ರಮ ಕೈಗೊಳ್ಳುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.