ADVERTISEMENT

ಮಗನ ನಡವಳಿಕೆಯಲ್ಲಿ ಅನುಮಾನವಿರಲಿಲ್ಲ: ಮಾಜಿ ಸಚಿವ ರುದ್ರಪ್ಪ ಲಮಾಣಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 14:35 IST
Last Updated 9 ನವೆಂಬರ್ 2020, 14:35 IST
ರುದ್ರಪ್ಪ ಲಮಾಣಿ, ಮಾಜಿ ಸಚಿವ 
ರುದ್ರಪ್ಪ ಲಮಾಣಿ, ಮಾಜಿ ಸಚಿವ    

ಹಾವೇರಿ: ‘ನನ್ನ ಮಗ ಜಾಣನಿದ್ದ. ಒಳ್ಳೆಯ ಸ್ವಭಾವದವನಾಗಿದ್ದ. ಅವನ ನಡವಳಿಕೆಯಲ್ಲಿ ಯಾವತ್ತೂ ಅನುಮಾನ ಬಂದಿರಲಿಲ್ಲ’ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಮಗನನ್ನು ಸಮರ್ಥಿಸಿಕೊಂಡರು.

ಡ್ರಗ್ಸ್‌ ಪ್ರಕರಣದಲ್ಲಿ ದರ್ಶನ್‌ ಆರ್‌.ಲಮಾಣಿ ಬಂಧನವಾಗಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಸೋಮವಾರ ಮಾತನಾಡಿ, ‘ಮಗನ ಬಿ.ಎ. ಅಂತಿಮ ವರ್ಷದ ಫಲಿತಾಂಶ ಈಚೆಗೆ ಪ್ರಕಟವಾಗಿದೆ. ಒಳ್ಳೆಯ ಅಂಕಗಳನ್ನು ತೆಗೆದಿದ್ದಾನೆ. ಎಲ್‌.ಎಲ್‌.ಬಿ. ಕೋರ್ಸ್‌ಗೆ ಪ್ರವೇಶಾತಿ ಪಡೆಯುವ ಬಗ್ಗೆ ಮೊನ್ನೆ ನನ್ನೊಂದಿಗೆ ಚರ್ಚಿಸಿದ್ದ.ರಾಣೆಬೆನ್ನೂರಿನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದ. ಆಗಾಗ್ಗೆ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿ ಬರುತ್ತಿದ್ದ. ನಾವು ಹೆಚ್ಚಾಗಿ ಹಾವೇರಿಯಲ್ಲಿ ಇರುತ್ತಿದ್ದೆವು. ಹೀಗಾಗಿ ಆತನ ಬಗ್ಗೆ ಹೆಚ್ಚು ವಿಷಯ ಗೊತ್ತಿಲ್ಲ’ ಎಂದರು.

‘ಬೆಂಗಳೂರಿಗೆ ಪಾರ್ಸಲ್‌ ಬಂದಿತ್ತಂತೆ. ಪಾರ್ಸಲ್‌ ತೆಗೆದುಕೊಂಡು ಬರಲು ಹೋದ ಸಂದರ್ಭ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತ ನನ್ನ ಮಗ ಸೇರಿದಂತೆ ಹಲವರ ಹೆಸರುಗಳನ್ನು ಹೇಳಿದ್ದಾನೆ. ಹೀಗಾಗಿ ಪೊಲೀಸರು ನನ್ನ ಮಗನನ್ನು ಬಂಧಿಸಿದ್ದಾರೆ. ಆತ ಸ್ನೇಹಿತರೊಂದಿಗೆ ಗೋವಾಕ್ಕೆ ಹೋಗಿದ್ದ. ಅವನ ಬಂಧನದ ಬಗ್ಗೆ ಟಿ.ವಿ. ನೋಡಿ ವಿಷಯ ಗೊತ್ತಾಯಿತು’ ಎಂದರು.

ADVERTISEMENT

‘ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ತನಿಖೆ ನಡೆದರೆ ಸತ್ಯ ಹೊರಬರುತ್ತದೆ.ಇದುವರೆಗೆ ನನ್ನನ್ನು ಪೊಲೀಸರು ಸಂಪರ್ಕ ಮಾಡಿಲ್ಲ. ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.