ADVERTISEMENT

ಹಾನಗಲ್ | ಹೆಸ್ಕಾಂ ಬೇಜವಾಬ್ದಾರಿ: ನೀರು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:42 IST
Last Updated 9 ಸೆಪ್ಟೆಂಬರ್ 2024, 15:42 IST
ಹಾನಗಲ್ ಪುರಸಭೆಯಲ್ಲಿ ಸದಸ್ಯರ ಸಾಮಾನ್ಯ ಸಭೆ ನಡೆಯಿತು
ಹಾನಗಲ್ ಪುರಸಭೆಯಲ್ಲಿ ಸದಸ್ಯರ ಸಾಮಾನ್ಯ ಸಭೆ ನಡೆಯಿತು   

ಹಾನಗಲ್: ಹೆಸ್ಕಾಂ ಬೇಜವಾಬ್ದಾರಿ ಕಾರಣಕ್ಕಾಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪುರಸಭೆ ಸದಸ್ಯರು ಹೆಸ್ಕಾಂ ಹಾನಗಲ್‌ ಎಇಇ ಆನಂದ ಅವರ ಮೇಲೆ ಹರಿಹಾಯ್ದರು.

ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಆನಿಕೆರೆಯ ನೀರು ಶುದ್ಧೀಕರಣಗೊಳ್ಳುವ ಘಟಕಕ್ಕಾಗಿ ವಿದ್ಯುತ್‌ ವ್ಯತ್ಯಯ ಆಗಬಾರದು ಎಂಬ ಉದ್ದೇಶದಿಂದ ಪುರಸಭೆ ಹಣ ವ್ಯಯಿಸಿ ಪ್ರತ್ಯೇಕ ವಿದ್ಯುತ್‌ ಮಾರ್ಗ ರಚಿಸಿಕೊಂಡಿದೆ. ಆದರೆ ಈ ಮಾರ್ಗಕ್ಕೆ ಇತ್ತೀಚೆಗೆ ಒತ್ತಡ ಹೆಚ್ಚಾಗಿದ್ದು, ಆಗಾಗ ವಿದ್ಯುತ್‌ ಕಡಿತಗೊಳ್ಳುತ್ತದೆ. ಇದರಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿದೆ ಎಂದು ಸದಸ್ಯರಾದ ಪರಶುರಾಮ ಖಂಡೂನವರ, ವಿರುಪಾಕ್ಷಪ್ಪ ಕಡಬಗೇರಿ ಆರೋಪಿಸಿದರು.

ADVERTISEMENT

ಇದಕ್ಕೆ ಸ್ಪಷ್ಟನೆ ನೀಡಿದ ಹೆಸ್ಕಾಂ ಎಇಇ ಆನಂದ, ಬೇಸಿಗೆಯಲ್ಲಿ ಈ ಮಾರ್ಗದಲ್ಲಿ ಹಲವು ಸಂಪರ್ಕಗಳ ಒತ್ತಡ ಹೆಚ್ಚಿರುತ್ತದೆ. ಮಳೆಗಾಲದ ಆರಂಭದಲ್ಲಿ ವಿದ್ಯುತ್‌ ಮಾರ್ಗಗಳು ಅಲ್ಲಲ್ಲಿ ದುರಸ್ತಿ ಸಹಜ ಎಂದರು.

ಇದಕ್ಕೆ ಒಪ್ಪದ ಸದಸ್ಯ ಸೈಯ್ಯದ್‌ಪಾಷಾ ಪೀರಜಾದೆ, ಕುಡಿಯುವ ನೀರಿಗೆ ನಮ್ಮಲ್ಲಿ ಕೊರತೆ ಇಲ್ಲ. ಆನಿಕೆರೆ ಭರ್ತಿಯಾಗಿದೆ. ನೀರು ಪೂರೈಕೆಯ ವ್ಯವಸ್ಥೆಗೆ ವಿದ್ಯುತ್‌ ವ್ಯತ್ಯಯ ಸಮಸ್ಯೆಯಾಗುತ್ತಿದೆ. ಶುದ್ಧೀಕರಣ ಘಟಕದ ಮಾರ್ಗಕ್ಕೆ ಯಾವುದೇ ಒತ್ತಡ ಬರದಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ತಿಂಗಳೊಳಗಾಗಿ ಸಮಸ್ಯೆ ಸರಿಪಡಿಸುವುದಾಗಿ ಎಇಇ ಆನಂದ ಹೇಳಿದರು.

ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ಇತ್ಯರ್ಥಕ್ಕೆ ಪುರಸಭೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತೇವೆ. ಪಾದಚಾರಿ ಮಾರ್ಗದ ಅಂಗಡಿಗಳ ತೆರವಿಗೆ ಪುರಸಭೆ ಸಹಕಾರ ಅಗತ್ಯ ಎಂದು ಪಿಎಸ್‌ಐ ಸಂಪತ್‌ಕುಮಾರ ಆನಿಕಿವಿ ಹೇಳಿದರು.

ಮುಖ್ಯ ರಸ್ತೆಯಲ್ಲಿ ತಗ್ಗು, ಗುಂಡಿಗಳು ಸೃಷ್ಟಿಯಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸದಸ್ಯ ಮಹೇಶ ಪವಾಡಿ ಸಭೆಯ ಗಮನಕ್ಕೆ ತಂದರು. ರಸ್ತೆ ದುರಸ್ತಿಗೆ ಮುಂದಾಗುವುದಾಗಿ ಪಿಡಬ್ಲುಡಿ ಎಂಜಿನಿಯರ್‌ ಮಾಲತೇಶ ಅಕ್ಕೂರ ಹೇಳಿದರು.

ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ಜಗದೀಶ ವೈ.ಕೆ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.