ADVERTISEMENT

ನೊಳಂಬೋತ್ಸವ ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 14:42 IST
Last Updated 7 ಅಕ್ಟೋಬರ್ 2022, 14:42 IST
ಪಾಳ್ಯದ ಜಯರಾಜ
ಪಾಳ್ಯದ ಜಯರಾಜ   

ಹಾವೇರಿ: ಜಾಗತಿಕ ನೊಳಂಬ ಒಕ್ಕೂಟದ ವತಿಯಿಂದ ‘ನೊಳಂಬೋತ್ಸವ-2022’ ಅನ್ನು ಈ ವರ್ಷ ಏಲಕ್ಕಿ ನಾಡು-ನೊಳಂಬರ ಬೀಡು ಎಂಬ ಹೆಸರು ಪಡೆದಿರುವ ಹಾವೇರಿ ನಗರದಲ್ಲಿ ಅ.9ರಂದು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ನೊಳಂಬೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಾಳ್ಯದ ಜಯರಾಜ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೊಳಂಬೋತ್ಸವದ ನಿಮಿತ್ತ ಅ.8 ಹಾಗೂ 9ರಂದು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅ.8ರಂದು ಹಾವೇರಿ ಸಮೀಪದ ಹೊಸಳ್ಳಿಯಲ್ಲಿ ಶರಣವನ ಹಾಗೂ ಉಚಿತ ವಿದ್ಯಾರ್ಥಿನಿಲಯ ಉದ್ಘಾಟನೆ, ಸಾಮೂಹಿಕ ವಿವಾಹ, ನವ ದಂಪತಿಗಳಿಗೆ ಪರಮ ಪೂಜ್ಯರಿಂದ ಆಶೀರ್ವಚನ, ಉದ್ಯೋಗ ಮೇಳ, ವಧು-ವರರ ಅನ್ವೇಷಣ ಮೇಳ, ಉಚಿತ ಕಾನೂನು ಸಲಹೆ ಶಿಬಿರ, ಉದ್ಯಮಿದಾರರಾಗಲು ಉದ್ಯಮಶೀಲತಾ ತಿಳಿವಳಿಕೆ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಶಿಬಿರ ನಡೆಯಲಿದೆ ಎಂದರು.

ADVERTISEMENT

ಅ. 9ರ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಹಾವೇರಿ ನಗರದ ಮುಖ್ಯ ರಾಜಬೀದಿಗಳಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2ಕ್ಕೆ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಧಾರ್ಮಿಕ ಸಭೆ ಹಾಗೂ ನೊಳಂಬ ಸಮಾಜದ ವಿವಿಧ ರಂಗಗಳಲ್ಲಿ ಉನ್ನತಿಗಾಗಿ ಸೇವೆ ಸಲ್ಲಿಸಿದ ಬಂಧು-ಬಾಂಧವರಿಗೆ ‘ನೊಳಂಬ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ, ನಾಡಿಗೆ ವಿಶಿಷ್ಟ ಕೊಡುವೆ ನೀಡಿದವರಿಗೆ ‘ನೊಳಂಬ ಶ್ರೇಷ್ಠ’ ಪ್ರಶಸ್ತಿ, ಯುವ ಪ್ರತಿಭೆಗಳಿಗೆ ‘ನೊಳಂಬ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮದ ನೇತೃತ್ವವನ್ನು ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಗವಿಮಠದ ಚಂದ್ರಶೇಖರ ಸ್ವಾಮೀಜಿ, ಕೇದಿಗೆಮಠದ ಜಯಚಂದ್ರಶೇಖರ ಸ್ವಾಮೀಜಿ, ಗುರುಕುಲಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಗೋಡೆಕೆರೆ ಸಂಸ್ಥಾನದ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ, ಯಳನಾಡು ಮಠದ ಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವರು. ಜಾಗತಿಕ ನೊಳಂಬ ಒಕ್ಕೂಟದ ಅಧ್ಯಕ್ಷ ನ್ಯಾ. ಸಿದ್ದಪ್ಪ ಕೆಂಪಗೌಡರ ವಹಿಸುವರು. ಅತಿಥಿಗಳಾಗಿ ಸಚಿವರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಾಗತಿಕ ನೊಳಂಬ ಒಕ್ಕೂಟದ ಅಧ್ಯಕ್ಷ ನ್ಯಾ.ಸಿದ್ದಪ್ಪ ಕೆಂಪಗೌಡರ, ಜಿಲ್ಲಾ ನೊಳಂಬ ಸಮಿತಿ ಅಧ್ಯಕ್ಷ ಎಸ್.ಕೆ. ಮೆಣಸಿನಹಾಳ, ನೊಳಂಬ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ದೊಡ್ಡಮನಿ, ಸಮಾಜದ ಪ್ರಮುಖರಾದ ಬಸವರಾಜ ಹಳ್ಳೂರ, ಸಿದ್ದರಾಮಗೌಡ ಬೆಂಗಳೂರು, ವಿ.ಎಂ. ನಾಡಗೌಡ್ರ, ಬಿ.ಎಂ. ಕಾಡಪ್ಪನವರ, ಚಂದ್ರು ಕರೆಮ್ಮನವರ, ಸಿ.ಬಿ. ಮಧ್ಯಾಹ್ನದ, ವಿರೇಶ ಗಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.