ADVERTISEMENT

ನರೇಗಾ | ₹ 669.92 ಕೋಟಿ ದುರ್ಬಳಕೆ: ಸತ್ತವರ ಹೆಸರಿನಲ್ಲಿ ₹ 2.89 ಕೋಟಿ ಪಾವತಿ

ಸಂತೋಷ ಜಿಗಳಿಕೊಪ್ಪ
Published 23 ಫೆಬ್ರುವರಿ 2025, 0:26 IST
Last Updated 23 ಫೆಬ್ರುವರಿ 2025, 0:26 IST
<div class="paragraphs"><p>ನರೇಗಾ ಯೋಜನೆ (ಪ್ರಾತಿನಿಧಿಕ ಚಿತ್ರ)</p></div>

ನರೇಗಾ ಯೋಜನೆ (ಪ್ರಾತಿನಿಧಿಕ ಚಿತ್ರ)

   

ಹಾವೇರಿ: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ರಾಜ್ಯದಲ್ಲಿ ಒಂದೇ ವರ್ಷದಲ್ಲಿ ₹ 669.92 ಕೋಟಿ ದುರ್ಬಳಕೆ ಆಗಿರುವುದು ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಿಂದ ಪತ್ತೆಯಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೃತಪಟ್ಟವರ ಹೆಸರಿನಲ್ಲಿ ₹2.89 ಕೋಟಿ ಕೂಲಿ ಪಾವತಿ ಮಾಡಲಾಗಿದ್ದು, ಇಂಥ 6,050 ಪ್ರಕರಣಗಳ ವಿವರವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಲೆಕ್ಕ ಪರಿಶೋಧನೆಗಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸಿ, ಲೆಕ್ಕಗಳ ತಪಾಸಣೆ ನಡೆಸುತ್ತಿದ್ದಾರೆ.

ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳಲ್ಲಿ 2022–23ನೇ ಸಾಲಿನ ಲೆಕ್ಕ ಪರಿಶೀಲನೆ ನಡೆಸಿದ್ದ ಪರಿಶೋಧಕರು, ₹ 669.92 ಕೋಟಿ ದುರುಪಯೋಗ ಆಗಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿದ್ದಾರೆ.

‘ಕಾಮಗಾರಿ ಮಾಡದೇ ಕೂಲಿ ಹಣ ಪಾವತಿ ಮಾಡಲಾಗಿದೆ. ಯೋಜನೆಗೆ ಮೀಸಲಿಟ್ಟ ಹಣವನ್ನು ಮೀರಿ ಹೆಚ್ಚುವರಿ ಹಣ ಪಾವತಿಸಲಾಗಿದೆ. ಬೇರೆ ಯೋಜನೆಗಳಿಗೆ ನರೇಗಾ ಹಣ ನೀಡಲಾಗಿದೆ. ಸತ್ತವರ ಹೆಸರಿನಲ್ಲೂ ಕೂಲಿ ನೀಡಲಾಗಿದೆ. ವಿವಿಧ ದೋಷಗಳು ಕಂಡುಬಂದರೂ ಕೂಲಿ ಪಾವತಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಜೊತೆಗೆ, ಹಲವು ಕಾಮಗಾರಿಗಳಿಗೆ ಕಡದವನ್ನು ಒದಗಿಸದೇ ಲೋಪ ಎಸಗಲಾಗಿದೆ. ನಾಮಫಲಕ ಅಳವಡಿಸದೇ ತೆರಿಗೆ ಕಡಿತಗೊಳಿಸದೇ ಬಾಬ್ತು ಜಮೆ ಮಾಡಲಾಗಿದೆ’ ಎಂದು ವರದಿ ಉಲ್ಲೇಖಿಸಿದೆ.

ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸ ಒದಗಿಸುವ ಉದ್ದೇಶದಿಂದ 2013–14ನೇ ಸಾಲಿನಿಂದ ಮನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಕಾಮಗಾರಿಗೆ ತಕ್ಕಂತೆ ಲೆಕ್ಕದ ದಾಖಲೆಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾಮಗಾರಿಗೆ ಸಂಬಂಧಪಟ್ಟ ದಾಖಲೆಗಳು ಲಭ್ಯವಿಲ್ಲದಿದ್ದರಿಂದ, ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ವರದಿ ಉಲ್ಲೇಖಿಸಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) 2024ರ ಅಕ್ಟೋಬರ್ 10ರಂದು ಪತ್ರ ಬರೆದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತ, ‘ದುರುಪಯೋಗ ಆಗಿರುವ ಹಣವನ್ನು ವಸೂಲಿ ಮಾಡಲು ಕ್ರಮ ಜರುಗಿಸಿ’ ಎಂದು ಸೂಚಿಸಿದ್ದಾರೆ. ಪತ್ರ ಬರೆದು ನಾಲ್ಕು ತಿಂಗಳಾದರೂ ಹಣ ವಸೂಲಾತಿಗೆ ಸಿಇಒಗಳು ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪಿಡಿಒ, ಅಧ್ಯಕ್ಷ ಹೊಣೆ: ’ಸಾಮಾಜಿಕ ಲೆಕ್ಕ ಪರಿಶೋಧನೆ ದಿನಾಂಕವನ್ನು ನೋಟಿಸ್ ಮೂಲಕ ಗ್ರಾಮ ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳಿಗೆ ತಿಳಿಸಲಾಗಿತ್ತು. ಆದರೆ, ನಿಗದಿತ ದಿನದಂದು ಯಾವುದೇ ದಾಖಲೆಗಳನನ್ನು ಒದಗಿಸದೇ ಲೆಕ್ಕ ಪರಿಶೋಧನೆಗೆ ಅಡ್ಡಿಪಡಿಸಲಾಗಿದೆ’ ಎಂದು ವರದಿ ಉಲ್ಲೇಖಿಸಿದೆ.

‘ಕಡತಗಳನ್ನು ಒದಗಿಸಲು ವಿಫಲರಾಗಿದ್ದಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೊಣೆಗಾರರಾಗಿದ್ದು, ಅವರೇ ಆರ್ಥಿಕ ಅವ್ಯವಹಾರಕ್ಕೆ ಕಾರಣರಾಗಿದ್ದಾರೆ’ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ವಸೂಲಾತಿ ಕೋಶ ನಿಷ್ಕ್ರಿಯ: ಮನರೇಗಾ ಯೋಜನೆಯಡಿ ದುರುಪಯೋಗವಾದ ಹಣವನ್ನು ವಸೂಲಿ ಮಾಡಲು ಜಿಲ್ಲಾ ಮಟ್ಟದಲ್ಲಿ ವಸೂಲಾತಿ ಕೋಶ ರಚಿಸಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಕೋಶ ನಿಷ್ಕ್ರಿಯಗೊಂಡಿದೆ. ಆಯಾ ಜಿಲ್ಲಾ ಪಂಚಾಯಿತಿ ಸಿಇಒಗಳ ನಿರ್ಲಕ್ಷ್ಯದಿಂದಾಗಿ, ಹಣ ವಸೂಲಿ ಪ್ರಕ್ರಿಯೆ ವಿಳಂಬವಾಗುತ್ತಿದೆ.

ವಸೂಲಾತಿ ಕೋಶಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ವೈ.ಡಿ. ಕುನ್ನಿಬಾವಿ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿರುವ ಹಾವೇರಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ, ‘ವಸೂಲಾತಿ ಕೋಶ ರಚಿಸಲು ಬೇಕಾದ ಸದಸ್ಯರಾದ ಜಿಲ್ಲಾ ಯೋಜನಾಧಿಕಾರಿ ಹುದ್ದೆ ಕಚೇರಿಯಲ್ಲಿಲ್ಲ. ಲೆಕ್ಕಾಧಿಕಾರಿ–2 ಹುದ್ದೆ ಸಹ ಖಾಲಿ ಇದೆ. ಹೀಗಾಗಿ, ವಸೂಲಾತಿ ಕೋಶ ಕಾರ್ಯನಿರ್ವಹಿಸಲು ತೊಂದರೆಯಾಗಿದೆ’ ಎಂದಿದ್ದಾರೆ.

₹4,500 ಕೋಟಿ ಅವ್ಯವಹಾರ ?

ಮನರೇಗಾ ಯೋಜನೆಯಡಿ 2013–14ನೇ ಸಾಲಿನಿಂದ 2022–23ನೇ ಸಾಲಿನವರೆಗೆ ಕೈಗೊಂಡಿರುವ ಕಾಮಗಾರಿಗಳ ಕೂಲಿ ಮೊತ್ತದಲ್ಲಿ ಸುಮಾರು ₹4,500 ಕೋಟಿ ಮೊತ್ತಕ್ಕೆ ಯಾವುದೇ ದಾಖಲೆ ಸಲ್ಲಿಕೆಯಾಗಿಲ್ಲ. ಈ ಮೊತ್ತವನ್ನು ಆಕ್ಷೇಪಣಾ ಮೊತ್ತವೆಂದು ಘೋಷಿಸಲಾಗಿದ್ದು, ಇದಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಹಲವು ಬಾರಿ ಸೂಚಿಸಲಾಗಿದೆ. ಆದರೆ, ಅಧಿಕಾರಿಗಳು ಯಾವುದೇ ದಾಖಲೆ ಸಲ್ಲಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.