ADVERTISEMENT

ಕೇಂದ್ರ ತಂಡದಿಂದ ನರೇಗಾ ಕಾಮಗಾರಿ ವೀಕ್ಷಣೆ

ಫಲಾನುಭವಿಗಳ ಜತೆ ಚರ್ಚೆ; ಕಾರ್ಮಿಕರೊಂದಿಗೆ ಸಂವಾದ; ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:34 IST
Last Updated 13 ಆಗಸ್ಟ್ 2024, 15:34 IST
ಹಿರೇಕೆರೂರು ತಾಲ್ಲೂಕಿನ ಯತ್ತಿನಹಳ್ಳಿ ಎಂ.ಕೆ.ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನೆಡುತೋಪು ಕಾಮಗಾರಿಯನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು
ಹಿರೇಕೆರೂರು ತಾಲ್ಲೂಕಿನ ಯತ್ತಿನಹಳ್ಳಿ ಎಂ.ಕೆ.ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನೆಡುತೋಪು ಕಾಮಗಾರಿಯನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು    

ಹಿರೇಕೆರೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೇಂದ್ರ ತಂಡದ ಅಧಿಕಾರಿಗಳಾದ ಸುದೀಪ್ ದುತ್ತಾ, ರಾಜೀವ್ ಭಾರ್ತಿ ಅವರು ತಾಲ್ಲೂಕಿನ ಬುರಡಿಕಟ್ಟಿ ಹಾಗೂ ಯತ್ತಿನಹಳ್ಳಿ ಎಂ.ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.

ತಾಲ್ಲೂಕಿನ ಬುರಡಿಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದ ನಂತರ ಬುರಡಿಕಟ್ಟಿ, ಹೊಲಬಿಕೊಂಡ ಗ್ರಾಮದಲ್ಲಿ ಯೋಜನೆಯಡಿ ಅನುಷ್ಠಾನಗೊಳಿಸಿದ ಸಮುದಾಯ ಕಾಮಗಾರಿಗಳಾದ ಎರಡು ಕೆರೆ ಅಭಿವೃದ್ಧಿ ಕಾಮಗಾರಿ,ಸಿಸಿ ರಸ್ತೆ ನಿರ್ಮಾಣ ಹಾಗೂ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ ಮತ್ತು ಪಿಎಂವೈ ಕಾಮಗಾರಿಗಳನ್ನು ವೀಕ್ಷಿಸಿದರು.  ಫಲಾನುಭವಿಗಳ ಜತೆ ಚರ್ಚಿಸಿದರು.

ಯತ್ತಿನಹಳ್ಳಿ ಎಂ.ಕೆ. ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ನರೇಗಾ ಕಡತಗಳನ್ನು ಪರಿಶೀಲಿಸಿದ ಅವರು,
ಪಂಚಾಯ್ತಿ ವ್ಯಾಪ್ತಿಯ ಯತ್ತಿನಹಳ್ಳಿ ಎಂ.ಕೆ, ಹಾದ್ರಿಹಳ್ಳಿ, ಆಲದಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಯೋಜನೆಯಡಿ ಅನುಷ್ಠಾನಗೊಳಿಸಿದ ಸಮುದಾಯ ಕಾಮಗಾರಿಗಳಾದ ಅಂಗನವಾಡಿ, ಶಾಲಾ ಕಾಂಪೌಂಡ್, ಪಕ್ಕಾ ಗಟಾರ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಪ್ರಧಾನಮಂತ್ರಿ ಅವಾಸ್ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದರು.

ADVERTISEMENT

ಡ್ರ‍್ಯಾಗನ್ ಫ್ರೋಟ್ ತೋಟಕ್ಕೆ ಭೇಟಿ: ನರೇಗಾ ಯೋಜನೆಯ ಪ್ರೋತ್ಸಾಹ ಧನದಿಂದ 2022-23ನೇ ಸಾಲಿನಲ್ಲಿ ಡ್ರ‍್ಯಾಗನ್ ಫ್ರೋಟ್ ಕಾಮಗಾರಿ ಮಾಡಿಕೊಂಡು, ಆದಾಯ ಹೆಚ್ಚಿಸಿಕೊಂಡ ಹಾದ್ರಿಹಳ್ಳಿ ಗ್ರಾಮದ ರೈತ ನಿಂಗಪ್ಪ ಹರಿಜನ ಅವರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡದುಕೊಂಡರು. ಈಗಾಗಲೇ ಮೊದಲ ಬೆಳೆಯಲ್ಲಿ ಲಕ್ಷಕ್ಕೂ ಅಧಿಕ ಲಾಭ ಪಡೆದುಕೊಂಡ ಬಗ್ಗೆ ರೈತ ಮಾಹಿತಿ ನೀಡಿದರು.

ಕಾರ್ಮಿಕರೊಂದಿಗೆ ಸಂವಾದ: ಬುರುಡಿಕಟ್ಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ನರೇಗಾ ಕೂಲಿ ಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ನೀಡಲಾಗುವ ಪ್ರಥಮ ಚಿಕಿತ್ಸೆ,ನೀರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿರುವ ಬಗ್ಗೆ ಮತ್ತು ಕೂಲಿ ಪಾವತಿ, ಹಾಜರಾತಿ ಕುರಿತು ಮಾಹಿತಿ ಪಡೆದುಕೊಂಡರು. ಉತ್ತಮವಾಗಿ ಕೆಲಸ ನಿರ್ವಹಿಸಲು ಸಲಹೆ ನೀಡಿದರು.

ಈ ವೇಳೆ ಉದ್ಯೋಗ ಚೀಟಿಯಲ್ಲಿ ಕೂಲಿ ಪಾವತಿ ವಿವರ ದಾಖಲಿಕರಣ ಮಾಡುವ ಕುರಿತು, ಇರುವ ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿಎಸ್.ರಂಗಸ್ವಾಮಿ,ಸಿಪಿಓ ಎಚ್.ವೈ. ಮೀಶಿ, ತಾಲ್ಲೂಕು ಪಂಚಾಯ್ತಿ ಇಒ ಕೆ.ಎಂ. ಮಲ್ಲಿಕಾರ್ಜುನ,ತೋಟಗಾರಿಕೆ ಇಲಾಖೆ ಲಕ್ಷ್ಮೀಕಾಂತ ಬೊಮ್ಮಣ್ಣನವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒ ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.