ADVERTISEMENT

ಪ್ರಗತಿ ಪರಿಶೀಲನಾ ಸಭೆ ಬಹಿಷ್ಕರಿಸಿದ ಅಧಿಕಾರಿಗಳು

ಸದಸ್ಯನ ವರ್ತನೆಗೆ ಖಂಡನೆ:

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:42 IST
Last Updated 19 ಜನವರಿ 2021, 1:42 IST
ಹಾನಗಲ್‌ನಲ್ಲಿ ಸೋಮವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರ ವರ್ತನೆ ಖಂಡಿಸಿ ಸಭೆ ಬಹಿಷ್ಕರಿಸಿದ ಅಧಿಕಾರಿಗಳು ಹೊರಗೆ ನಡೆದರು
ಹಾನಗಲ್‌ನಲ್ಲಿ ಸೋಮವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರ ವರ್ತನೆ ಖಂಡಿಸಿ ಸಭೆ ಬಹಿಷ್ಕರಿಸಿದ ಅಧಿಕಾರಿಗಳು ಹೊರಗೆ ನಡೆದರು   

ಹಾನಗಲ್: ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರ ವರ್ತನೆಗೆ ಅಧಿಕಾರಿಗಳು ಗರಂ ಆದರು. ಒಂದು ಹಂತದಲ್ಲಿ ಸಭೆಯನ್ನು ಬಹಿಷ್ಕರಿಸಿ ಹೊರಗೆ ನಡೆದರು.

ಬಹುತೇಕ ಇಲಾಖೆಗಳ ಮುಖ್ಯ ಅಧಿಕಾರಿಗಳು ತಮ್ಮ ಸಹಾಯಕರನ್ನು ಸಭೆಗೆ ಕಳಿಸುತ್ತಾರೆ. ಮಾಹಿತಿ ಕೊರತೆಯಿಂದ ಚರ್ಚೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಕಾಟಾಚಾರದ ಸಭೆ ನಡೆಸುವಂತಾಗಿದೆ ಎಂದು ಆರಂಭದಲ್ಲಿ ಅಕ್ಕಿಆಲೂರ ಕ್ಷೇತ್ರದ ತಾಲ್ಲೂಕು ಪಂಚಾಯ್ತಿ ಸದಸ್ಯ ಬಶೀರ್‌ಅಹ್ಮದ್‌ ಪಠಾಣ ಅವರು ಅಧಿಕಾರಿಗಳ ಮೇಲೆ ಮುಗಿಬಿದ್ದರು.

ಮಾಹಿತಿ ನೀಡಲು ವೇದಿಕೆಗೆ ಬಂದ ಎಪಿಎಂಸಿ ಅಧಿಕಾರಿ ಜಾವೇದ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪಠಾಣ, ನೋಂದಾಯಿತ ಹಮಾಲರಿಗೆ ನಿವೇಶನ, ಮನೆ ಕಟ್ಟಿಸಿಕೊಡಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಾವೇದ್‌ ಉತ್ತರಿಸಿದರು. ಬಳಿಕ ಇದಕ್ಕೆ ಸಂಬಂಧಿಸಿದ ಕಡತ ಕಚೇರಿಯಿಂದ ತರಿಸಿಕೊಂಡು ಸದಸ್ಯ ಪಠಾಣ ಅವರ ಟೇಬಲ್‌ ಬಳಿ ಬಂದು ಸಮಜಾಯಿಶಿ ನೀಡಿದರು. ದಾಖಲೆಗಳನ್ನು ನೋಡಿ ಕೆರಳಿದ ಪಠಾಣ, ಈ ಅಂಕಿ– ಸಂಖ್ಯೆಗಳನ್ನು 5 ವರ್ಷದಿಂದ ನೋಡುತ್ತಿದ್ದೇನೆ. ಪ್ರಗತಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಿಡಿಮಿಡಿಗೊಂಡರು.

ADVERTISEMENT

ಕಡತ ಬಿಸಾಡಿ ಅಸಭ್ಯವಾಗಿ ಅಧಿಕಾರಿ ಜೊತೆ ಮಾತನಾಡಿದ್ದನ್ನು ಗಮನಿಸಿದ ಇನ್ನುಳಿದ ಇಲಾಖೆ ಅಧಿಕಾರಿಗಳು, ಸಭೆ ಬಹಿಷ್ಕರಿಸುವುದಾಗಿ ಹೇಳಿ ಹೊರಗೆ ನಡೆದರು. ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಮತ್ತೆ ಸಭೆ ನಡೆಸಿದರು.

ನೆರೆ ಸಂತ್ರಸ್ತ ರೈತರಿಗೆ ಮೊದಲು ಪರಿಹಾರ ನೀಡಬೇಕು ಎಂದು ಸದಸ್ಯ ಶಿವಬಸಪ್ಪ ಪೂಜಾರ ಅವರು ಆಗ್ರಹಿಸಿದರು. ಉಪಾಧ್ಯಕ್ಷೆ ಸುಮಂಗಲಾ ಕನ್ನಕ್ಕನವರ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ಪ್ಯಾಟಿ, ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್‌ಕುಮಾರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.