ಶಿಗ್ಗಾವಿ: ಪಟ್ಟಣದಲ್ಲಿ ಭಾನುವಾರ ಮೊಹರಂ ಹಬ್ಬದ ಅಂಗವಾಗಿ ಅಲೈ ದೇವರ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಮ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಸವಣೂರ ರಸ್ತೆ, ಪುರಸಭೆ ವೃತ್ತ, ಪೇಟೆ ರಸ್ತೆ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿರುವ ಅಲೈ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು. ಸಂಜೆ ನಡೆದ ಅಲೈದೇವರ ಮೆರವಣಿಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಮೆರವಣಿಗೆ ಪುರಸಭೆ ವೃತ್ತ, ಸಂತೆ ಮೈದಾನ, ಹಳೇ ಬಸ್ ನಿಲ್ದಾಣ, ಪಿಎಲ್‌ಡಿ ಬ್ಯಾಂಕ್ ವೃತ್ತ, ಹಳೇಪೇಟೆ, ಜೋಳದ ಪೇಟೆ, ಮುಖ್ಯ ಪೇಟೆ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಕರ್ಬಲ, ಅಲಾವಿ ಹಾಡುಗಳನ್ನು ಯುವಕರು ಹಾಡಿದರು. ಹುಲಿ, ಕರಡಿ ವೇಷದಾರಿಗಳ ಹಲಗೆ ನಾದಕ್ಕೆ ತಕ್ಕಂತೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ಸಾಗುತ್ತಿದ್ದರು. ಕೆಲವು ಯುವಕರ ತಂಡ ಮೆರವಣಿಗೆಯಲ್ಲಿ ಬರುವ ಭಕ್ತರಿಗೆ ತಂಪು ಪಾನೀಯ ಹಾಗೂ ಉಪಹಾರ ವಿತರಿಸಿದರು. ಡೋಲಿಗಳು ಕೆರೆಗಳ ಕಡೆಗೆ ಸಂಚರಿಸಿದವು. ಭಕ್ತರು ಡೋಲಿಗೆ ಉತ್ತತ್ತಿ, ಬಾಳೆ ಹಣ್ಣು ಎಸೆದರು. ಕೊನೆಗೆ ಕೆರೆಗೆ ತೆರಳಿ ಅಲ್ಲಾ ದೇವರ ಡೋಲಿಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಮೊಹರಂ ಹಬ್ಬಕ್ಕೆ ತೆರೆ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.