ADVERTISEMENT

ಸಿದ್ದರಾಮಯ್ಯನವರ ಸ್ಪರ್ಧೆಗೆ ಪಾಕಿಸ್ತಾನವೇ ಸೇಫ್‌: ಶಾಸಕ ಸಿ.ಟಿ. ರವಿ

ರಾಣೆಬೆನ್ನೂರಿನಲ್ಲಿ ಶಾಸಕ ಸಿ.ಟಿ. ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:57 IST
Last Updated 23 ಜನವರಿ 2023, 13:57 IST
ಶಾಸಕ ಸಿ.ಟಿ. ರವಿ
ಶಾಸಕ ಸಿ.ಟಿ. ರವಿ   

ಹಾವೇರಿ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸ್ಪರ್ಧೆಗೆ ಪಾಕಿಸ್ತಾನವೇ ಸುರಕ್ಷಿತವಾದದ್ದು. ಅಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರಿಲ್ಲ. ಅಲ್ಲಿಗೆ ಹೋದರೆ ಕಾಟ ಕೊಡೋದಕ್ಕೆ ಡಿ.ಕೆ. ಶಿವಕುಮಾರ್‌ ಮತ್ತು ಖರ್ಗೆ ಇಬ್ಬರೂ ಇರಲ್ಲ’ ಎಂದು ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದರು.

ರಾಣೆಬೆನ್ನೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ಸಿದ್ಧವಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್‌ನವರು ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಆಯ್ಕೆ ಮಾಡಿ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್‌ ಎಂಬ ಮುಳುಗುತ್ತಿರುವ ಹಡಗಿನಲ್ಲಿ ಯಾರು ಇರುತ್ತಾರೆ ಎಂದು ತಿರುಗೇಟು ನೀಡಿದರು.

ವಿಧಾನ ಪರಿಷತ್‌ ಸದಸ್ಯ ಆರ್. ಶಂಕರ್ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಂಕರ್ ಅನರ್ಹ ಆದಾಗ ಎಂಎಲ್‌ಸಿ ಮಾಡಿದ್ದೇವೆ. ಅವರಿಗೆ ಮಂತ್ರಿ ಆಗಬೇಕು ಅಂತ ಆಸೆ ಇತ್ತು. ತಾಳ್ಮೆಯಿಂದ ಇದ್ದು ಬಿಜೆಪಿಯಲ್ಲಿ ಉಳಿದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಬಡ್ಡಿ ಸಮೇತ ಬರುತ್ತೆ, ಬಿಟ್ಟು ಹೋದರೆ ಡೆಪಾಸಿಟ್ ಕೂಡಾ ಹೋಗುತ್ತೆ ಎಂದು ನುಡಿದರು.

ADVERTISEMENT

ಪ್ರಜಾಧ್ವನಿ ಎಂದರೆ ಜನ ಮಾತನಾಡೋದು. ಆರೇಳು ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ. ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ. ಪ್ರಜೆಗಳು ನಮ್ಮ ಜೊತೆ ಇರುವುದಕ್ಕೆ ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್‌ನವರದ್ದು ಸೌಂಡು, ನಮ್ಮದ ಗ್ರೌಂಡು. ಸಿದ್ದರಾಮಯ್ಯನವರು ಅಪ್ಪನಾಣೆ ಮಾಡಿದ ಎಲ್ಲ ಹೇಳಿಕೆಗಳು ಸುಳ್ಳಾಗಿವೆ ಎಂದು ತಿರುಗೇಟು ನೀಡಿದರು.

‘ನಮ್ಮದು ತತ್ವದ ರಾಜಕಾರಣ, ಹಿಂದುತ್ವದ ರಾಜಕಾರಣ. ನಾವು ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ಹಿಂದೂಗಳು ನಾವಲ್ಲ. ಇದಕ್ಕಾಗಿ ತರಹೇವಾರಿ ವೇಷ ನಾವು ಹಾಕಲ್ಲ. ಅಭಿವೃದ್ಧಿ ಕೆಲಸಕ್ಕೆ ಬಂದಾಗ, ಕಷ್ಟ ಅಂತ ಬಂದಾಗ ಯಾವ ಜಾತಿನೂ ನಾವು ನೋಡಿಲ್ಲ. ಅದಕ್ಕಾಗಿ 4 ಬಾರಿ ಜನ ನನ್ನನ್ನು ಗೆಲ್ಲಿಸಿದ್ದಾರೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.