ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಕಾಶಿಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಬಂಕಾಪುರ ಪಟ್ಟಣದ ಕೊಟ್ಟಿಗೇರಿ ಗಚ್ಚಿನಮಠದ ಭೂತ ಭುಜಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಉಭಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ವಿವಿಧೆಡೆ ಸಂಚರಿಸಿ ಬಿಸನಳ್ಳಿ ಕಾಶಿ ಪೀಠದ ಸಂಗೀತ ಪಾಠ ಶಾಲೆ ಆವರಣದ ವರೆಗೆ ನಡೆಯಿತು.
ಪಟ್ಟಣದ ಪ್ರತಿ ಓಣಿಗಳನ್ನು ಸ್ವಚ್ಛ ಮಾಡಿ ಮನೆ ಅಂಗಳದಲ್ಲಿ ಬಣ್ಣದ ರಂಗೋಲಿಗಳನ್ನು ಹಾಕಲಾಗಿತ್ತು. ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕುಂಭ ಮೇಳ, ಭಜನಾ ಮೇಳ, ಡೊಳ್ಳು ಕುಣಿತ, ಝಾಂಜ ಮೇಳ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಸಾಗಿತು.
ಮಹಿಳೆಯರು, ಮಕ್ಕಳು ಹಾಗೂ ವಿವಿಧ ಗಣ್ಯರು ಶ್ರೀಗಳಿಗೆ ಹೂಹಾರ ಹಾಗೂ ಹಣ್ಣು ಕಾಯಿಗಳನ್ನು ನೀಡುವ ಮೂಲಕ ಭಕ್ತಿ ಮೆರೆದರು. ಕಾಶಿಪೀಠದ ಸಂಕೇತದ ಹಳದಿ ಧ್ವಜಗಳು, ಶ್ರೀಶೈಲ ಪೀಠದ ಸಂಕೇತವಾದ ಬಿಳಿ ಧ್ವಜಗಳು ಮತ್ತು ಚಾಮರ ಛತ್ರಗಳು ರಾರಾಜಿಸುತ್ತಿದ್ದವು. ಧ್ವಜಗಳನ್ನು ಹಿಡಿದುಕೊಂಡು ಬರುವ ಕಾಶಿಪೀಠದ ವಟುಗಳು, ರುದ್ರಾಣಿ ಬಳಗದ ಮಹಿಳೆಯರು ಹಾಗೂ ಭಕ್ತ ಸಮೂಹದ ಜಯ ಘೋಷಗಳು ಜನ ಜಾಗೃತಿ ಮೂಡಿಸಿದವು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಉಭಯ ಶ್ರೀಗಳಿಗೆ ಹೂಹಾರ ಹಾಕಿ ಆಶೀರ್ವಾದ ಪಡೆದರು. ಸ್ಥಳೀಯ ವಿವಿಧ ಸಂಘಟನೆಗಳ, ಪಕ್ಷಗಳ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.
ಬಂಕಾಪುರ ಅರಳಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ನೀಲಕಂಠ ಸ್ವಾಮೀಜಿ, ಹುಬ್ಬಳ್ಳಿ ರಾಜಶೇಖರ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಬಿಸನಳ್ಳಿ ಗ್ರಾಮದ ಪಂಚಾಚಾರ್ಯ ವೇದ, ಆಗಮನ, ಸಂಗೀತ ಪಾಠ ಶಾಲೆ ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.