ADVERTISEMENT

ಹಾವೇರಿ| ಬರವಣಿಗೆಯಿಂದಲೇ ಯಶಸ್ಸಿನ ಮೆರವಣಿಗೆ

ಉಪವಿಭಾಗಾಧಿಕಾರಿ ಹುದ್ದೆಗೆ ಪಲ್ಲವಿ ಆಯ್ಕೆ: ಅಮ್ಮನ ಕನಸು ಈಡೇರಿಸಿದ ಮಗಳು

ಸಿದ್ದು ಆರ್.ಜಿ.ಹಳ್ಳಿ
Published 24 ಡಿಸೆಂಬರ್ 2019, 14:47 IST
Last Updated 24 ಡಿಸೆಂಬರ್ 2019, 14:47 IST
ತಂದೆ ಮತ್ತು ತಾಯಿಯವರ ಜತೆ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಓದುತ್ತಿರುವ ಪಲ್ಲವಿ ಸಾತೇನಹಳ್ಳಿ
ತಂದೆ ಮತ್ತು ತಾಯಿಯವರ ಜತೆ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಓದುತ್ತಿರುವ ಪಲ್ಲವಿ ಸಾತೇನಹಳ್ಳಿ   

ಹಾವೇರಿ: ‘ನಿತ್ಯ 50ರಿಂದ 80 ಪುಟಗಳನ್ನು ಬರೆಯುವುದನ್ನು ರೂಢಿಸಿಕೊಂಡೆ. ಈ ‘ಬರವಣಿಗೆಯ ಕೌಶಲ’ವೇ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತಂದುಕೊಟ್ಟು, ನನ್ನನ್ನು ಉಪವಿಭಾಗಾಧಿಕಾರಿಯನ್ನಾಗಿಸಿತು’ ಎಂದು ಪಲ್ಲವಿ ಸಾತೇನಹಳ್ಳಿ ಮುಗುಳ್ನಕ್ಕರು.

ನಗರದ ಹಾನಗಲ್‌ ರಸ್ತೆಯ ಗ್ರಾಮೀಣ ಪೊಲೀಸ್‌ ಸ್ಟೇಷನ್‌ ಸಮೀಪವಿರುವ ತಮ್ಮ ಮನೆಯಲ್ಲಿ ಮಂಗಳವಾರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡರು.

‘ನಾನು ದೊಡ್ಡ ಅಧಿಕಾರಿಯಾಗಬೇಕು ಎಂಬುದು ನನ್ನ ತಾಯಿಯ ಕನಸು. ಟೆಕ್ನಿಕಲ್ ಕೋರ್ಸ್‌ ಓದಿರುವ ನನಗೆ ಖಾಸಗಿ ಕಂಪನಿಗಳಿಂದ ಉದ್ಯೋಗವಕಾಶ ಸಿಕ್ಕಿತ್ತು. ಆದರೆ, ಅಮ್ಮನ ಕನಸು ನನಸು ಮಾಡುವ ಉದ್ದೇಶದಿಂದ, ಕೆಪಿಎಸ್‌ಸಿ ಪರೀಕ್ಷೆ ಬರೆದು, ಕಾರ್ಪೊರೇಟ್‌ ಜಗತ್ತಿನಿಂದ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ’ ಎಂದು ಮನದಾಳದ ಮಾತುಗಳನ್ನು ಪಲ್ಲವಿ ಹಂಚಿಕೊಂಡರು.

ADVERTISEMENT

ಪಲ್ಲವಿ ಅವರು ಹಾವೇರಿ ನಗರದ ಲಯನ್ಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿವರೆಗೂ ಓದಿ, ನಂತರ ಹುಬ್ಬಳ್ಳಿಯ ಪಿ.ಸಿ. ಜಾಬಿನ್‌ ವಿಜ್ಞಾನ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ. ಆನಂತರ ದಾವಣಗೆರೆಯ ಜಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಬಿ.ಇ. ಹಾಗೂ ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂ.ಟೆಕ್‌ ಮಾಡಿದ್ದಾರೆ. ಇವರ ತಂದೆ ಕರಿಯಪ್ಪ ಅವರು ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ನಿವೃತ್ತ ನೌಕರ. ತಾಯಿ ಅಕ್ಕಮಹಾದೇವಿ ಅವರು ಪ್ರೌಢಶಾಲಾ ಶಿಕ್ಷಕಿ.

ಸೋಲೇ ಗೆಲುವಿನ ಮೆಟ್ಟಿಲು:

‘ನಾನು 2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. ಆಗ ಪ್ರಿಲಿಮ್ಸ್‌ ಪಾಸ್‌ ಆಗಿತ್ತು. ಮುಖ್ಯ ಪರೀಕ್ಷೆ ಆಗಲಿಲ್ಲ. ಇದರಿಂದ ನನ್ನ ತಪ್ಪುಗಳೇನು? ಯಾವ ವಿಷಯದಲ್ಲಿ ಜ್ಞಾನದ ಕೊರತೆ ಇದೆ? ಸಮಯಪಾಲನೆಯ ಮಹತ್ವ ಏನು? ಬರವಣಿಗೆ ಎಷ್ಟು ಮುಖ್ಯ? ಎಂಬುದನ್ನು ಅರ್ಥ ಮಾಡಿಕೊಂಡೆ. ಅದರಂತೆ, ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ನಿಗದಿತ ಸಮಯದಲ್ಲಿ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿದೆ. ಸಾಧಕರಿಂದ ಮಾರ್ಗದರ್ಶನ ಪಡೆದೆ. ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡೆಸುವ ಪರೀಕ್ಷೆ ಬರೆದು, ದೆಹಲಿಯಲ್ಲಿ ಉಚಿತವಾಗಿ 8 ತಿಂಗಳ ತರಬೇತಿ ಪಡೆದೆ. ಇದು ನನ್ನ ಯಶಸ್ಸಿಗೆ ಪ್ರಮುಖ ಕಾರಣ’ ಎಂದರು ಪಲ್ಲವಿ.

ಓದಿನ ಏಕಾಗ್ರತೆಗೆ ಭಂಗ ತರುವ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟಿ.ವಿ., ಸಿನಿಮಾಗಳಿಂದ ದೂರ ಉಳಿದೆ. ಮೊಬೈಲ್‌ ಮತ್ತು ಇಂಟರ್‌ನೆಟ್‌ ಅನ್ನು ಓದಿಗೆ ಪೂರಕವಾಗಿ ಮಾತ್ರ ಬಳಸಿಕೊಂಡೆ. ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ ಮತ್ತು ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡೆ ಎಂದರು. ಫೇಸ್‌ಬುಕ್‌ನಲ್ಲಿ 2014ಕ್ಕೆ ಅವರ ‘ಲಾಸ್ಟ್‌ ಪೋಸ್ಟ್‌’ ಇರುವುದು ಪಲ್ಲವಿಯವರ ಮಾತಿಗೆ ಸಾಕ್ಷಿಯಾಗಿದೆ.

‘ಸಂದರ್ಶನದಲ್ಲಿ ನನ್ನ ಜಿಲ್ಲೆ ಬಗ್ಗೆ, ನಾನು ಓದಿದ ಕೋರ್ಸ್‌ ಬಗ್ಗೆ ಮತ್ತು ನನ್ನ ವೈಯಕ್ತಿಕ ವಿವರಗಳ ಬಗ್ಗೆ ಪ್ರಶ್ನೆ ಕೇಳಿದರು. ಅಲ್ಲಿ ಸಮರ್ಥವಾಗಿ ಉತ್ತರ ನೀಡಿದೆ.ಹಾಗಾಗಿ ಸಂದರ್ಶನ ಎಂದರೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸದಿಂದ ನಮ್ಮ ತನವನ್ನು ಸಾಬೀತುಪಡಿಸಬೇಕು ಅಷ್ಟೆ. ಉಪವಿಭಾಗಾಧಿಕಾರಿಯಾದ ನಂತರ ನೊಂದ ಹೆಣ್ಣು ಮಕ್ಕಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇನೆ’ ಎಂದು ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.