ಹಾವೇರಿ: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಮೇಲಿಂದ ಮೇಲೆ ದಾಳಿ ಮಾಡಿದರೂ ಅಕ್ಕಿ ಮಾರಾಟ ಕಡಿಮೆಯಾಗುತ್ತಿಲ್ಲ.
ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯುವ ಪಡಿತರದಾರರಿಂದಲೇ ಅಕ್ಕಿ ಖರೀದಿಸುತ್ತಿರುವ ದಂಧೆಕೋರರು, ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಅಕ್ಕಿ ಖರೀದಿಸುವ ದಂಧೆಕೋರರು ಹುಟ್ಟಿಕೊಂಡಿದ್ದು, ತಮ್ಮ ಮನೆ, ಜಮೀನು ಹಾಗೂ ಇತರೆ ಸ್ಥಳಗಳಲ್ಲಿ ಅಕ್ಕಿ ಸಂಗ್ರಹಿಸಿ ಮಾರುತ್ತಿದ್ದಾರೆ.
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಹಾನಗಲ್ ರಸ್ತೆಯಲ್ಲಿರುವ ಹತ್ತಿ ಜಿನ್ನಿಂಗ್ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 206 ಚೀಲ ಅನ್ನಭಾಗ್ಯ ಅಕ್ಕಿಯನ್ನು ಇತ್ತೀಚೆಗೆ ಜಪ್ತಿ ಮಾಡಲಾಗಿದೆ. ಬಂಕಾಪುರ ಹಾಗೂ ಸುತ್ತಮುತ್ತಲಿನ ಪಡಿತರದಾರರಿಂದ ಅಕ್ರಮವಾಗಿ ಅಕ್ಕಿ ಖರೀದಿಸಿ ಸಂಗ್ರಹಿಸಿಟ್ಟಿದ್ದ ಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು–ಪೊಲೀಸರು ಗೋದಾಮು ಮೇಲೆ ದಾಳಿ ಮಾಡಿದ್ದರು.
‘ಅಬ್ದುಲ್‌ವಾಹೀದ್ ಅಬ್ದುಲ್‌ರೆಹೆಮಾನಸಾಬ್ ಖತೀಬ ಅವರ ಹತ್ತಿ ಜಿನ್ನಿಂಗ್ ಗೋದಾಮಿನಲ್ಲಿ ಸುಮಾರು ₹ 2.20 ಲಕ್ಷ ಮೌಲ್ಯದ 206 ಚೀಲ ಅಕ್ಕಿಯನ್ನು ಸಂಗ್ರಹಿಸಿಡಲಾಗಿತ್ತು. ದಾಳಿ ಮಾಡಿ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಬಂಕಾಪುರದ ಮೈನುದೀನ್ ಅಬ್ದುಲ್‌ವಾಹೀದ್ ಖತೀಬ್ ಹಾಗೂ ಸೈಯಸ್‌ಸಾಬೀರ್‌ಅಹ್ಮದ್ ಸೈಯದ್‌ಶಬ್ಬೀರ್‌ಅಹ್ಮದ್ ದೊಡ್ಡಮನಿ ಎಂಬುವವರು ಈ ಅಕ್ಕಿ ಸಂಗ್ರಹಿಸಿದ್ದರೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳು, ಪ್ರತಿ ಕೆ.ಜಿ.ಗೆ. ₹ 10ರಿಂದ ₹ 25 ಕೊಟ್ಟು ಪಡಿತರದಾರರಿಂದ ಅಕ್ಕಿ ಖರೀದಿಸಿದ್ದರು. ಅದೇ ಅಕ್ಕಿಯನ್ನು ಕಾಳಸಂತೆಯಲ್ಲಿ ₹ 30ರಿಂದ ₹ 50 ರವರೆಗೂ ಮಾರುತ್ತಿದ್ದರೆಂಬ ಮಾಹಿತಿ ಇದೆ. ಈ ಅಕ್ಕಿ ಎಲ್ಲಿಗೆ ಹೋಗುತ್ತಿತ್ತು? ಅಕ್ಕಿ ಮಾರಾಟ ಜಾಲದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದ್ದಾರೆ.
ಅಕ್ಕಿ ಮಾರಾಟಕ್ಕೆ ಏಜೆಂಟರು: ಸರ್ಕಾರದಿಂದ ಜನರಿಗೆ ಹೆಚ್ಚುವರಿ ಅಕ್ಕಿ ನೀಡಲಾಗುತ್ತಿದೆ. ಇದೇ ಅಕ್ಕಿಯನ್ನು ಜನರು ದಂಧೆಕೋರರಿಗೆ ಮಾರುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಕ್ಕಿ ಖರೀದಿಸುವ ಏಜೆಂಟರು ಹುಟ್ಟಿಕೊಂಡಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ.
ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತರುತ್ತಿದ್ದಂತೆ, ಪಡಿತರದಾರರ ಮನೆಗೆ ಹೋಗಿ ಏಜೆಂಟರು ಅಕ್ಕಿ ಪಡೆಯುತ್ತಿದ್ದಾರೆ. ವಾಹನಗಳಲ್ಲಿ ತಕ್ಕಡಿ ಇಟ್ಟುಕೊಂಡು ಓಡಾಡಿ, ಅಕ್ಕಿ ಖರೀದಿಸುತ್ತಿದ್ದಾರೆ. ಅದೇ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿ ಲಾಭ ಪಡೆಯುತ್ತಿದ್ದಾರೆ. ಪಡಿತರದಾರರು ಹಾಗೂ ಖರೀದಿದಾರರು ಇಬ್ಬರೂ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಇದರಿಂದಾಗಿ ಸರ್ಕಾರದ ಉದ್ದೇಶಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.
‘ಪಂಜಾಬ್ ಹಾಗೂ ಇತರೆ ರಾಜ್ಯಗಳಲ್ಲಿ ಬೆಳೆದ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಿ, ಬೇಡಿಕೆಗೆ ತಕ್ಕಂತೆ ಪಡಿತರದಾರರಿಗೆ ನೀಡಲಾಗುತ್ತಿದೆ. ಇದೇ ಅಕ್ಕಿ ಈಗ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ.
‘ಜಿಲ್ಲೆಯಾದ್ಯಂತ ಪಡಿತರ ಅಕ್ಕಿ ಮಾರಾಟ ಜಾಲ ಹೆಚ್ಚು ಸಕ್ರಿಯವಾಗಿದೆ. ಇದನ್ನು ಬುಡಸಮೇತ ಮಟ್ಟಹಾಕಲು ವಿಶೇಷ ಪಡೆ ರಚಿಸಬೇಕು. ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಎಚ್ಚರಿಕೆ ರವಾನಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘7 ಪ್ರಕರಣ ದಾಖಲು’
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟದ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾನಗಲ್ ರಾಣೆಬೆನ್ನೂರು ಬಂಕಾಪುರ ಸವಣೂರು ಹಾವೇರಿಯಲ್ಲಿ ಹಲವರ ವಿರುದ್ಧ ಈಗಾಗಲೇ 7 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೂ ಹೆದರದ ದಂಧೆಕೋರರು ತಮ್ಮ ಕೃತ್ಯ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.