ADVERTISEMENT

ಹಾವೇರಿ: ಚುನಾವಣಾ ಪ್ರಚಾರಕ್ಕೆ ಅನುಮತಿ ಕಡ್ಡಾಯ

ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 14:44 IST
Last Updated 30 ಮಾರ್ಚ್ 2023, 14:44 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿ ರಘುನಂದನಮೂರ್ತಿ ನಡೆಸಿದರು  
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿ ರಘುನಂದನಮೂರ್ತಿ ನಡೆಸಿದರು     

ಹಾವೇರಿ: ಚುನಾವಣಾ ಸಭೆ- ಸಮಾರಂಭ, ಪ್ರಚಾರ ಸಾಮಗ್ರಿಗಳ ಅಳವಡಿಕೆಗೆ ಪೂರ್ವಾನುಮತಿ ಕಡ್ಡಾಯವಾಗಿದೆ. ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸ್ವಚ್ಛ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭಾಂಗಣದಲ್ಲಿ ಬುಧವಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಚುನಾವಣಾ ಆಯೋಗದ ಮಾರ್ಗಸೂಚಿಗಳ ಕುರಿತಂತೆ ರಾಜಕೀಯ ಪಾಲಿಸಬೇಕಾದ ನಿಯಮಗಳ ಮಾಹಿತಿ ನೀಡಿದರು.

ಏಕಗವಾಕ್ಷಿ ಪದ್ಧತಿ: ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಸುವಿಧಾ ಆ್ಯಪ್‌ ಅನ್ನು ರಚಿಸಲಾಗಿದೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಸುಲಲಿತವಾಗಿ ಸಂಪನ್ನಗೊಳಿಸುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ADVERTISEMENT

ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳು ಆಯೋಜಿಸುವ ಸಭೆ ಮತ್ತು ಮೆರವಣಿಗೆಗಳಿಗೆ ಇತರ ಪಕ್ಷಗಳು ಅಥವಾ ಕಾರ್ಯಕರ್ತರು ಅಡೆತಡೆ ಉಂಟುಮಾಡುವಂತಿಲ್ಲ. ಬೇರೊಂದು ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ಗೊಂದಲ ಸೃಷ್ಟಿಸುವಂತಿಲ್ಲ. ಏಕ ಕಾಲಕ್ಕೆ ಒಂದು ಪಕ್ಷವು ಮತ್ತೊಂದು ಪಕ್ಷವು ಸಭೆ-ಮೆರವಣಿಗೆ ನಡೆಸುವಂತಿಲ್ಲ. ಪೋಸ್ಟ್‍ಗಳನ್ನು ಇತರ ಪಕ್ಷದ ಕಾರ್ಯಕರ್ತರು ತೆಗೆಯುವಂತಿಲ್ಲ. ಯಾವುದೇ ರಾಜಕೀಯ ಸಮಾರಂಭ, ಸಭೆ ನಡೆಸಿದರೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

ಧ್ವನಿವರ್ಧಕ ಬಳಕಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಚುನಾವಣೆ ಸಿಬ್ಬಂದಿ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿರ್ಬಂಧಿಸಿದ ಪ್ರದೇಶಗಳಲ್ಲಿ ಪ್ರಚಾರ ನಡೆಸುವಂತಿಲ್ಲ. ಪ್ರಚಾರ ಸಾಮಗ್ರಿ ಪ್ರದರ್ಶನ ಮಾಡುವಂತಿಲ್ಲ. ಮತಗಟ್ಟೆ ಬಳಿ ಅನಗತ್ಯ ಜನ ಸಂದಣಿ ಇರುವಂತಿಲ್ಲ. ಮತದಾರರಿಗೆ ಆಹಾರ, ಪಾಹನೀಯ, ಮದ್ಯ ವಸ್ತುಗಳನ್ನು ಆಮಿಷ ರೀತಿಯಲ್ಲಿ ಹಂಚುವಂತಿಲ್ಲ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತಂತೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಅವರು ವಿವಿಧ ವಾಹನಗಳ ಮೇಲೆ ಅಂಟಿಸಿದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ಕಾಂಗ್ರೆಸ್ ಪಕ್ಷದ ಪಿ.ಎಸ್.ಬಿಷ್ಟನಗೌಡ್ರ, ಬಿಎಸ್‍ಪಿ ಪಕ್ಷದ ಅಶೋಕ ಆರ್.ಮರಣ್ಣನವರ, ಜೆ.ಡಿ.ಎಸ್. ಪಕ್ಷದ ಅಮೀರ್‍ಆಜಾನ್ ಬೇಪಾರಿ ಇದ್ದರು.

‘ದ್ವೇಷಪೂರಿತ ಭಾಷಣ ಸಲ್ಲ’
ರಾಜಕೀಯ ಸಭೆ-ಸಮಾರಂಭ- ಕಾರ್ಯಕ್ರಮಗಳ ಸಂದರ್ಭದಲ್ಲಿ, ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯು ಪರಸ್ಪರ ದ್ವೇಷವನ್ನು ಉಂಟು ಮಾಡುವ ಹೇಳಿಕೆಗಳು, ವಿವಿಧ ಜಾತಿ, ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕರ ಉದ್ವಿಗ್ನತೆಯನ್ನು ಉಂಟು ಮಾಡುವ ಯಾವುದೇ ಚಟುವಟಿಕೆ, ಹೇಳಿಕೆಯನ್ನು ನೀಡಬಾರದು. ಇತರ ರಾಜಕೀಯ ಪಕ್ಷಗಳ ಟೀಕೆ ಮಾಡುವಾಗ ಅವರ ನೀತಿಗಳ ಹಾಗೂ ಕಾರ್ಯಕ್ರಮಗಳ ಕೆಲಸಗಳ ಬಗ್ಗೆ ಮಾತ್ರ ಟೀಕೆಗೆ ಸೀಮಿತಗೊಳಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಭ್ಯರ್ಥಿಯ ಅಥವಾ ರಾಜಕೀಯ ಪಕ್ಷಗಳ ಮುಖಂಡರ ಖಾಸಗಿ ಜೀವನದ ಬಗ್ಗೆ ಟೀಕೆಗಳನ್ನು ಮಾಡುವಂತಿಲ್ಲ. ಮತಗಳನ್ನು ಪಡೆಯುವಾಗ ಜಾತಿ ಅಥವಾ ಕೋಮುಭಾವನೆಗಳ ಆಧಾರದ ಮೇಲೆ ಮನವಿ ಮಾಡಬಾರದು. ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ವೇದಿಕೆಯಾಗಿ ಬಳಸದಂತೆ ಸೂಚನೆ ನೀಡಿದರು.

ಭ್ರಷ್ಟ ಆಚರಣೆಗಳು ನಿಷೇಧ
ಪಕ್ಷಗಳು ಹಾಗೂ ಅಭ್ಯರ್ಥಿಗಳು ಭ್ರಷ್ಟ ಆಚರಣೆಗಳು ಹಾಗೂ ಚುನಾವಣಾ ಕಾನೂನಿನಡಿ ಅಪರಾಧಗಳಾದ ಮತದಾರರಿಗೆ ಲಂಚ ನೀಡುವುದು, ಬೆದರಿಕೆ ಹಾಕುವುದು, ಮತದಾನಕ್ಕೆ ಬದಲಿ ಮತದಾರರನ್ನು ಕರೆತರುವುದು, ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವುದು, ಮತದಾನಕ್ಕೆ ಮತದಾರರಿಗೆ ವಾಹನ ವ್ಯವಸ್ಥೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಯಾವುದೇ ವ್ಯಕ್ತಿಯ ಜಮೀನು, ಕಟ್ಟಡ, ಕಾಂಪೌಂಡ್ ಗೋಡೆಗಳ ಮೇಲೆ ಅವರ ಅನುಮತಿ ಇಲ್ಲದೆ ಧ್ವಜ ಕಂಬಗಳನ್ನು ಕಟ್ಟಲು, ಬ್ಯಾನರ್‌ಗಳನ್ನು ಅಳವಡಿಸಲು, ಪ್ರಚಾರ ಸಾಮಗ್ರಿಗಳನ್ನು ಅಂಟಿಸಲು ಹಾಗೂ ಘೋಷಣೆಗಳು ಸೇರಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ಅಳವಡಿಕೆಗೆ ಅನುಮತಿ ಇರುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.