ADVERTISEMENT

ಸಭೆ, ಮದುವೆ ನಡೆಸಲು ಅನುಮತಿ ಕಡ್ಡಾಯ

₹25 ಸಾವಿರ ದಂಡ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 16:00 IST
Last Updated 30 ನವೆಂಬರ್ 2020, 16:00 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ‘ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಭೆ-ಸಮಾರಂಭ ಹಾಗೂ ಮದುವೆ ಕಾರ್ಯಕ್ರಮ ನಡೆಸುವ ಮುನ್ನ ಆಯಾ ತಹಶೀಲ್ದಾರ್‌ ಅಥವಾ ಜಿಲ್ಲಾಧಿಕಾರಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇಲ್ಲವಾದರೆ ₹25 ಸಾವಿರ ದಂಡವನ್ನು ಮದುವೆ ಮಂಟಪದ ಮಾಲೀಕರಿಗೆ ವಿಧಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಎಚ್ಚರಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೆ ತಾತ್ಸಾರ ಮಾಡುವವರಿಗೂ ದಂಡ ವಿಧಿಸಲು ಈಗಾಗಲೇ ತಹಶೀಲ್ದಾರ್‌, ಪೊಲೀಸ್ ಹಾಗೂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಮಾಸ್ಕ್ ಧರಿಸದೇ ಓಡಾಡುವವರಿಗೆ ಗ್ರಾಮೀಣ ಪ್ರದೇಶದಲ್ಲಿ ₹100 ಹಾಗೂ ನಗರ ಪ್ರದೇಶದಲ್ಲಿ ₹200 ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಮದುವೆ ಸಮಾರಂಭ ಸೇರಿದಂತೆ ಜಾತ್ರೆ, ಹೋರಿ ಹಬ್ಬ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೇ 200ಕ್ಕಿಂತ ಅಧಿಕ ಜನ ಸೇರುತ್ತಿರುವುದು ಕಂಡುಬರುತ್ತಿದೆ. ಅನುಮತಿ ಇಲ್ಲದೆ ಹಾಗೂ ಹೆಚ್ಚಾಗಿ ಜನರಿಗೆ ಸೇರಿದೆ ಮದುವೆ ಹಾಲ್ ಹಾಗೂ ವ್ಯವಸ್ಥಾಪಕರ ಮೇಲೆ ದಂಡ ವಿಧಿಸಲಾಗುವುದು. ಕೋವಿಡ್ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯಲ್ಲಿ 2ನೇ ಅಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿಕೊಂಡರು.

ADVERTISEMENT

ಕಾಲೇಜ್ ಬಂದ್ ಪರಿಶೀಲನೆ:

ಭಾನುವಾರ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 130 ಪ್ರಕರಣಗಳಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳು ವಿದ್ಯಾರ್ಥಿಗಳ ವಯೋಮಾನದವರಿಗೆ ಕಂಡುಬಂದಿದೆ. ಹಾವೇರಿ, ರಾಣೆಬೆನ್ನೂರು, ಅಕ್ಕಿಆಲೂರು ಹಾಗೂ ಹಾನಗಲ್‍ಗಳಲ್ಲಿ ಒಂದೇ ವಯೋಮಾನದವರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದರು.

ಈ ಕುರಿತು ಪುನರ್ ಪರಿಶೀಲನೆಗೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಳೆ ಫಲಿತಾಂಶ ಬಂದ ನಂತರ ಸಮಾಲೋಚನೆ ನಡೆಸಿ ಒಂದೊಮ್ಮೆ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ ಅಂಥ ಕಾಲೇಜುಗಳನ್ನು ಬಂದ್‍ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.