ADVERTISEMENT

ಹಾವೇರಿ | ಬಿದ್ದ ಮನೆಗೆ ₹ 5 ಲಕ್ಷ ನೀಡಿ: ಫಲಾನುಭವಿಗಳ ಒತ್ತಾಯ

₹ 1.20 ಲಕ್ಷ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:36 IST
Last Updated 13 ಜುಲೈ 2025, 5:36 IST
ಗುತ್ತಲ ಸಮೀಪದ ಬಸಾಪುರ ಗ್ರಾಮದ ಮನೆಯೊಂದು ಈಚೆಗೆ ಸುರಿದ ಮಳೆಗೆ ಬಿದ್ದಿದೆ
ಗುತ್ತಲ ಸಮೀಪದ ಬಸಾಪುರ ಗ್ರಾಮದ ಮನೆಯೊಂದು ಈಚೆಗೆ ಸುರಿದ ಮಳೆಗೆ ಬಿದ್ದಿದೆ   

ಗುತ್ತಲ: ಪ್ರಸ್ತುತ ಸಾಲಿನಲ್ಲಿ ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯಿತಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ 4,620 ವಸತಿ ಮನೆಗಳು ಮಂಜೂರಾಗಿವೆ. ಒಂದು ಮನೆಗೆ ₹ 1.20 ಲಕ್ಷ ಹಣ ಮಂಜೂರಾದ ಹಿನ್ನಲೆಯಲ್ಲಿ ಅಲ್ಪ ಹಣದಲ್ಲಿ ಮನೆ ನಿರ್ಮಾಣ ಮಾಡುವದು ಕಷ್ಟಕರ ಎಂದು ಫಲಾನುಭವಿಗಳು ಮನೆ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ತಾಲ್ನೂಲ ಹೊಸರಿತ್ತಿ, ಹಾವನೂರ, ಕನವಳ್ಳಿ, ದೇವಗಿರಿ, ಬಸಾಪೂರ, ಕಂಚಾರಗಟ್ಟಿ, ಹಾಂವಶಿ, ನೆಗಳೂರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ವಸತಿ ಮನೆಗಳನ್ನು ಫಲಾನುಭವಿಗಳು ತಿರಸ್ಕರಿಸುತ್ತಿದ್ದಾರೆ.

‘₹ 1.20 ಲಕ್ಷ ಹಣದಲ್ಲಿ ಮರಳು ಸಹ ಬರಲ್ಲ. ಇಟ್ಟಿಗೆ, ಕಬ್ಬಿಣ, ಮರಳು, ಸಿಮೆಂಟ್ ಸೇರಿದಂತೆ ಮನೆ ನಿರ್ಮಾಣಕ್ಕೆ ಬೇಕಾಗುವ ವಸ್ತಗಳ ಬೆಲೆ ಗಗನಕ್ಕೇರಿವೆ. ಕೂಡಲೆ ಸರ್ಕಾರ ₹ 5 ಲಕ್ಷ ಮನೆಗಳನ್ನು ಮಂಜೂರು ಮಾಡಬೇಕು’ ಎಂದು ತಿಮ್ಮಾಪೂರ ಗ್ರಾಮದ ಫಲಾನುಭವಿ ಜ್ಯೋತಿ ಆಗ್ರಪಡಿಸಿದ್ದಾರೆ.

ADVERTISEMENT

ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತಿಗಳಿಗೆ 4,620 ಮನೆಗಳು 2024-25ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕೇವಲ 443 ಜನ ಫಲಾನುಭವಿಗಳು ಮನೆ ಕಟ್ಟಲಿಕ್ಕೆ ಅಡಿಪಾಯ ಹಾಕಿದ್ದಾರೆ. 4,177 ಜನ ಫಲಾನುಭವಿಗಳು ಕಡಿಮೆ ಹಣದ ಮನೆ ಬೇಡವೆಂದು ತಿರಸ್ಕರಿಸಿದ್ದಾರೆ. ಕೂಡಲೇ ಸರ್ಕಾರ ₹ 5 ಲಕ್ಷ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಗಡಿ, ನೆಗಳೂರ, ಕೊಣನತಂಬಗಿ, ಕೊಳೂರ ಗ್ರಾಮಗಲ್ಲಿ ತಲಾ ಒಂದು ಮನೆಗೆ ಅಡಿಪಾಯ ಹಾಕಿದರೆ ಹಾಲಗಿ ಗ್ರಾಮ ಪಂಚಾಯತಿಗೆ 152 ಮನೆ ಮಂಜೂರಾಗಿದ್ದು ಒಬ್ಬರು ಸಹ ಮನೆ ತೆಗೆದುಕೊಂಡಿಲ್ಲ ಎಲ್ಲ ಫಲಾನುಭವಿಗಳು ತಿರಸ್ಕರಿಸಿದ್ದಾರೆ.

ನನಗೆ ಮನೆ ಇಲ್ಲ ಜಾಗ ಇದೆ ಜಾಗದ ಕೂಗಳತೆ ದೂರದಲ್ಲಿ ಸ್ಮಶಾನ ಇದೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇನೆ ರಾತ್ರಿಯಾದರೆ ವಿಷಜಂತುಗಳ ಕಾಟ ಕೂಡಲೆ ಸರ್ಕಾರ ನನಗೆ ಮನೆ ಮಂಜೂರ ಮಾಡಬೇಕೆಂದು ಹಾವನೂರ ಗ್ರಾಮದ ನಿವಾಸಿ ಮೌನೇಶ ಬಡ್ಡೆಪ್ಪನವರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನೆರೆಸಂತ್ರಸ್ಥರ ಯೋಜನೆಡಿಯಲ್ಲಿ ಬಿಡುಗಡೆಯಾದ ಮನೆಗಳಿಗೆ 1 ಇಲ್ಲವೆ 2 ಬಿಲ್ ಮಾತ್ರ ಬಿಡುಗಡೆಯಾಗಿವೆ ಇನ್ನುಳಿದ ಬಿಲ್ ಮಂಜೂರಾಗುತ್ತಿಲ್ಲ ಜಿಪಿಎಸ್ ಮಾಡಿದರು ಹಣ ಮಂಜೂರಾಗಿಲ್ಲ ಕೂಡಲೆ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ಫಲಾನುಭವಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಂಜೂರಾದ ಮನೆಗಳನ್ನು ತಿರಸ್ಕರಿಸಿದ ಫಲಾನುಭವಿಗಳಿಗೆ ಪಿಡಿಓಗಳು ನೋಟಿಸ್ ನೀಡುತ್ತಿದ್ದಾರೆ.ಮನೆ ಬೇಕಾದವರು ಒಂದು ವಾರದ ಒಳಗೆ ಆಧಾರಕಾರ್ಡ, ಬ್ಯಾಂಕ ಪಾಸ್‌ಬುಕ್, ರೇಷನ್‌ಕಾರ್ಡ, ಪೋಟೋ, ಜಾಗದ ಪಹಣಿ ನೀಡುವಂತೆ ಸೂಚನೆ ನೀಡಿದ್ದಾರೆ ಮನೆ ಬೇಡ ಎಂದು ತಿರಸ್ಕರಿಸುವವರ ಸಂಖ್ಯೆನೆ ಜಾಸ್ತಿ ಇದ್ದಾರೆಂದು ಪಿಡಿಓಗಳು ಹೇಳುತ್ತಾರೆ.

ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಸರ್ಕಾರ ಕೊಡುವ ₹ 1.20 ಲಕ್ಷ ಸಾಕಾಗುವುದಿಲ್ಲ.
– ಸಿದ್ದಪ್ಪ ದ್ಯಾಮಣ್ಣನವರ, ಬಿಜೆಪಿ ಮುಖಂಡ

ಸಿಎಂ ಜೊತೆ ಚರ್ಚೆ: ಭರವಸೆ

‘₹ 1.20 ಲಕ್ಷದ ಹಣದಲ್ಲಿ ಮಂಜೂರಾದ ಮನೆಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಆ ಹಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ₹ 5 ಲಕ್ಷ ಮಂಜೂರು ಮಾಡಲು ಮತ್ತು ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತಿನ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರ ಜೊತೆ ಚೆರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದ ಮನೆಗಳಿಗೆ ₹ 5 ಲಕ್ಷ ಹಣ ಮಂಜೂರು ಮಾಡಿತ್ತು. ಜಿಲ್ಲೆಯಲ್ಲಿ ಅತಿಹೆಚ್ಚು ಮನೆ ಮಂಜೂರ ಮಾಡಿ ಬಡವರಿಗೆ ಸಹಾಯವಾಗಿತ್ತು. ಕೂಡಲೇ ಸರ್ಕಾರ ಬಿದ್ದ ಮನೆಗಳಿಗೆ ₹ 3 ಇಲ್ಲವೇ ₹ 5 ಲಕ್ಷ ಹಣ ಮಂಜೂರ ಮಾಡಬೇಕು’ ಎಂದು ಮುಖಂಡ ಸಿದ್ದರಾಜ ಕಲಕೊಟಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.