ಹಾವೇರಿ: ಜಿಲ್ಲೆಯಲ್ಲಿ ಬೆಳೆ ವಿಮೆ ಪಾವತಿಸುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಪರಿಹಾರ ವಿತರಣೆ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದರಿಂದ ನೊಂದಿರುವ ಬಹುತೇಕ ರೈತರು, ವಿಮೆ ಕಂತು ಪಾವತಿಯಿಂದ ದೂರ ಉಳಿಯುತ್ತಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಕಂತು ಪಾವತಿಸಲು ಜಿಲ್ಲೆಯಲ್ಲಿ ಜುಲೈ 31ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ 2.10 ಲಕ್ಷ ರೈತರು ಮಾತ್ರ ವಿಮೆ ಕಂತು ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ.
2023ರ ಮುಂಗಾರಿನಲ್ಲಿ 3.25 ಲಕ್ಷ ರೈತರು ವಿಮೆಗಾಗಿ ನೋಂದಣಿ ಮಾಡಿಕೊಂಡಿದ್ದರು. 2024ರ ಜುಲೈ 31ರಲ್ಲಿ 2.51 ಲಕ್ಷ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಕಳೆದ ವರ್ಷವೇ 74 ಸಾವಿರ ರೈತರು ವಿಮೆಯಿಂದ ದೂರ ಸರಿದಿದ್ದರು.
ಪ್ರಸಕ್ತ 2025ರಲ್ಲಿ ನೋಂದಣಿ ಸಂಖ್ಯೆ 2.10 ಲಕ್ಷವಾಗಿದ್ದು, ಸುಮಾರು 40 ಸಾವಿರ ರೈತರು ವಿಮೆ ಸಹವಾಸ ಬೇಡವೆಂದು ತಟಸ್ಥರಾಗಿದ್ದಾರೆ. ಇದು ವಿಮೆ ಯೋಜನೆ ಜಾರಿ ಮೇಲೆ ಪರಿಣಾಮ ಬೀರಿದ್ದು, ಮುಂಬರುವ ವರ್ಷಗಳಲ್ಲಿ ರೈತರ ನೋಂದಣಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು, ರಟ್ಟೀಹಳ್ಳಿ, ಸವಣೂರು, ಶಿಗ್ಗಾವಿ ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಲಾಗಿದೆ.
ತಾಲ್ಲೂಕುಗಳ ಪೈಕಿ ಹಾನಗಲ್‌ನಲ್ಲಿ ಪ್ರಸಕ್ತ ವರ್ಷ ಅತೀ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, 12,173 ರೈತರು ಈ ವರ್ಷ ನೋಂದಣಿ ಮಾಡಿಸಿಲ್ಲ. ಪ್ರತಿ ತಾಲ್ಲೂಕಿನಲ್ಲೂ ಈ ವರ್ಷ ನೋಂದಣಿ ಮಾಡಿಸುವ ರೈತರ ಸಂಖ್ಯೆ ಇಳಿಮುಖವಾಗಿದೆ.
ವಿಮೆ ನಿರ್ಧಾರದಲ್ಲಿ ಅನ್ಯಾಯ: ಜಿಲ್ಲೆಯಲ್ಲಿ ಮೆಕ್ಕೆ ಜೋಳ (ಗೋವಿನಜೋಳ), ಶೇಂಗಾ, ಹತ್ತಿ, ಭತ್ತ, ಹೆಸರು, ಸೋಯಾ ಅವರೆ, ಸೂರ್ಯಕಾಂತಿ, ಅಲಸಂದಿ, ತೊಗರಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿದೆ. ಕೃಷಿ ಇಲಾಖೆ ನಿಗದಿಪಡಿಸಿರುವ ವ್ಯಾಪ್ತಿಗೆ ತಕ್ಕಂತೆ ಬೆಳೆ ವಿಮೆ ಪಾವತಿಗೆ ಅವಕಾಶ ನೀಡಲಾಗಿತ್ತು. ಆದರೆ, ಹಲವರು ವಿಮೆ ಪಾವತಿಗೆ ಆಸಕ್ತಿ ತೋರಿಸಿಲ್ಲ.
‘ಜಿಲ್ಲೆಯಲ್ಲಿ ರೈತಾಪಿ ಕುಟುಂಬಗಳು ಹೆಚ್ಚಿವೆ. ಕೃಷಿ ನಂಬಿಯೇ ಎಲ್ಲರೂ ಜೀವನ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರೈತರಿಂದ ಉತ್ತಮ ಸ್ಪಂದನೆ ಇತ್ತು. ಎಲ್ಲರೂ ವಿಮೆ ಪಾವತಿ ಮಾಡುತ್ತಿದ್ದರು. ಈಗ ವಿಮೆ ಪಡೆಯಲು ಹೋರಾಡಬೇಕಾದ ಸ್ಥಿತಿಯಿದೆ. ಇದೇ ಕಾರಣಕ್ಕೆ ರೈತರು ವಿಮೆ ಪಾವತಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ಹಾನಗಲ್ ರೈತ ಭರಮಪ್ಪ ಕೆಂಪಣ್ಣನವರ ಹೇಳಿದರು.
‘ಬೆಳೆ ಆಯ್ಕೆ ನಿರ್ಧಾರದಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ. ಬೆಳೆ ಹಾನಿ ಸಂದರ್ಭದಲ್ಲಿ ವಿಮೆ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತದೆ. ವಿಮೆ ಬಂದರೂ ಅದನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವ ಸ್ಥಿತಿ ಬರುತ್ತದೆ’ ಎಂದು ತಿಳಿಸಿದರು.
‘ಕಳೆದ ವರ್ಷ ತಕ್ಕಮಟ್ಟಿಗೆ ಕೆಲವರಿಗೆ ಮಾತ್ರ ವಿಮೆ ಬಂದಿದೆ. ಅವರ ಪೈಕಿ ಹಲವರು ಈ ವರ್ಷವೂ ವಿಮೆ ಕಟ್ಟಿದ್ದಾರೆ. ಮುಂದಿನ ವರ್ಷ ಅವರು ಸಹ ವಿಮೆಯಿಂದ ದೂರವುಳಿದರೂ ಆಶ್ಚರ್ಯವಿಲ್ಲ’ ಎಂದು ಹೇಳಿದರು.
5,295 ಅರ್ಜಿ ತಿರಸ್ಕೃತ: ‘ರೈತರು ಸಲ್ಲಿಸಿದ್ದ ಅರ್ಜಿಗಳ ಪೈಕಿ 5,295 ಅರ್ಜಿಗಳನ್ನು ಮಾಹಿತಿ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. ಬ್ಯಾಂಕ್‌ನಲ್ಲಿಯೂ 2,842 ಅರ್ಜಿಗಳು ತಿರಸ್ಕೃತಗೊಂಡಿವೆ’ ಎಂದು ಅಧಿಕಾರಿ ಹೇಳಿದರು.
ಸಾಲ ಮಾಡಿ ಕೃಷಿ ಮಾಡುತ್ತಿದ್ದೇವೆ. ವಿಮೆ ತುಂಬಲೂ ಸಾಲ ಮಾಡಬೇಕು. ಕಳೆದ ಎರಡು ವರ್ಷ ಒಂದು ರೂಪಾಯಿಯೂ ಬಂದಿಲ್ಲ. ಹೀಗಾಗಿ ಈ ವರ್ಷ ವಿಮೆ ತುಂಬಿಲ್ಲನಾಗಣ್ಣ ಎಂ. ಶಿಗ್ಗಾವಿ
‘ವಾರದ ಬಳಿಕ ನಿಖರ ಮಾಹಿತಿ’
‘ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆಯಡಿ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ನಾಲ್ಕು ಪ್ರಮುಖ ಬೆಳೆಗಳನ್ನು ಆಯ್ಕೆ ಮಾಡಲಾಗಿತ್ತು. ಜುಲೈ 31ಕ್ಕೆ ನೋಂದಣಿ ಅವಧಿ ಮುಗಿದಿದೆ. ಸದ್ಯ 2.10 ಲಕ್ಷ ಅರ್ಜಿ ಲೆಕ್ಕ ಮಾತ್ರ ಸಿಕ್ಕಿದೆ. ವಾರದ ನಂತರ ನಿಖರ ಮಾಹಿತಿ ಸಿಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಮಳೆ ಹಾಗೂ ಬೆಳೆ ಪರಿಸ್ಥಿತಿ ನೋಡಿಕೊಂಡು ರೈತರು ವಿಮೆ ಕಟ್ಟುತ್ತಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಿದೆ. ಹೀಗಾಗಿ ಸಂಖ್ಯೆ ಕಡಿಮೆಯಾಗಿರಬಹುದು’ ಎಂದರು. ‘2024–25ನೇ ಸಾಲಿನಲ್ಲಿ ₹ 95.65 ಕೋಟಿ ಬೆಳೆ ವಿಮೆ ಪರಿಹಾರ ಬಂದಿದೆ. 2023–24ರಲ್ಲಿ ₹ 187 ಕೋಟಿ ಪರಿಹಾರ ಬಮದಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.