ADVERTISEMENT

ಗುತ್ತಲ | ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಗೆ ಪಟ್ಟು; ಠಾಣೆ ಮೆಟ್ಟಿಲೇರಿದ ಪ್ರಕರಣ

ಗುತ್ತಲದ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ | ಪ್ರಭಾರಿ ವಿರುದ್ಧ ಹೋರಾಟ ಎನ್ನುತ್ತಿರುವ ಸದಸ್ಯರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:32 IST
Last Updated 9 ಅಕ್ಟೋಬರ್ 2024, 23:32 IST
ಗುತ್ತಲದ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ 
ಗುತ್ತಲದ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ    

ಗುತ್ತಲ: ಇಲ್ಲಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹುದ್ದೆಗೆ ಶಿಕ್ಷಕರ ನಡುವೆಯೇ ಪೈಪೋಟಿ ಶುರುವಾಗಿದೆ. ಕೆಲ ದಿನಗಳ ಅವಧಿಯಲ್ಲಿ ಮೂವರು ಶಿಕ್ಷಕರು, ಪ್ರಭಾರಿ ಮುಖ್ಯಶಿಕ್ಷಕರಾಗಿ ಆದೇಶ ಪಡೆದುಕೊಂಡಿದ್ದಾರೆ. ಇದೇ ಹುದ್ದೆಯ ವಿಚಾರವಾಗಿ ಶಿಕ್ಷಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶಾಲೆಯೊಳಗಿನ ಶಿಕ್ಷಕರ ಪೈಪೋಟಿಯ ಜಗಳ ಬೀದಿಗೆ ಬಂದಿದ್ದರಿಂದ, ಮಕ್ಕಳ ಪೋಷಕರು ಆತಂಕಗೊಂಡಿದ್ದಾರೆ. ಶಿಕ್ಷಕರ ನಡುವೆಯೇ ಪರಸ್ಪರ ಸಹಕಾರ ಇಲ್ಲದಿದ್ದರಿಂದ, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿರುವುದಾಗಿ ಪೋಷಕರು ಆರೋಪಿಸುತ್ತಿದ್ದಾರೆ.

‘ಸಿದ್ದರಾಮಯ್ಯ ಹಿರೇಮಠ ಅವರು ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಅವರು 2023ರಲ್ಲಿ ವರ್ಗಾವಣೆಗೊಂಡರು. ಮುಖ್ಯಶಿಕ್ಷಕ ಸಿದ್ದರಾಮಯ್ಯ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ, ಪ್ರಭಾರಿಯಾಗಿ ನೇಮಕಗೊಳ್ಳಲು ಶಾಲೆಯ ಶಿಕ್ಷಕ ಶಂಕರ ಎನ್.ಎ. ಅವರು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ’ ಎಂದು ಪೋಷಕರೊಬ್ಬರು ಹೇಳಿದರು. 

ADVERTISEMENT

‘ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಅದೇ ಶಾಲೆಯ ಸಹ ಶಿಕ್ಷಕ ಓ.ಸಿ. ಪಾಟೀಲ ಅವರನ್ನು, ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ನೀಡಿದ್ದರು. ಪಾಟೀಲ ಅವರು ಕೆಲಸ ಮಾಡಿಕೊಂಡು ಹೊರಟಿದ್ದರು. ಶಿಕ್ಷಕ ಶಂಕರ, ತಾವು ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಗೆ ಅರ್ಹರಿರುವುದಾಗಿ ವಾದಿಸಲಾರಂಭಿಸಿದ್ದರು. ಅದೇ ವಿಚಾರವಾಗಿ ಶಾಲೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಇಬ್ಬರೂ ಶಿಕ್ಷಕರು, ಕೊಠಡಿಗಳಲ್ಲಿ ಮಕ್ಕಳ ಎದುರೇ ಏರು ಧ್ವನಿಯಲ್ಲಿ ಜಗಳ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಪದೇ ಪದೇ ಜಗಳ ಮಾಡಿದರೆ, ವಾದಿಸಿದರೆ ಜಾತಿ ನಿಂದನೆ ಪ್ರಕರಣ ಹಾಕುತ್ತೇನೆ‘ ಎಂಬುದಾಗಿ ಶಿಕ್ಷಕ ಶಂಕರ್ ಅವರು ಪಾಟೀಲ ಅವರಿಗೆ ಬೆದರಿಸುತ್ತಿದ್ದರು. ಇದರಿಂದ ಬೇಸತ್ತ ಪಾಟೀಲ, ಮುಖ್ಯಶಿಕ್ಷಕ ಹುದ್ದೆ ಬೇಡವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದರು. ಶಾಲೆಗೆ ಬೇಟಿ ನೀಡಿದ್ದ ಶಿಕ್ಷಣಾಧಿಕಾರಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಶಾಲೆಯ ಇನ್ನೊಬ್ಬ ಶಿಕ್ಷಕಿ ಆರ್.ಎಸ್.ಪಠಾಣ ಅವರನ್ನು ಪ್ರಭಾರಿ ಮುಖ್ಯ ಶಿಕ್ಷಕಿಯನ್ನಾಗಿ ಹೊಸದಾಗಿ ನೇಮಿಸಿದ್ದರು’ ಎಂದು ಪೋಷಕರೊಬ್ಬರು ತಿಳಿಸಿದರು.

‘ಪಠಾಣ ಅವರ ವಿರುದ್ಧವೂ ಶಂಕರ ಅವರು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಇದರಿಂದ ಬೇಸತ್ತ ಪಠಾಣ ಸಹ ಮುಖ್ಯಶಿಕ್ಷಕಿ ಹುದ್ದೆ ಬೇಡವೆಂದು ಹಿಂದೆ ಸರಿದಿದ್ದರು. ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆಯೇ ದೊಡ್ಡ ಸವಾಲಾಗಿತ್ತು. ಪಠಾಣ ಅವರ ನಂತರ, ಪಟ್ಟಣದ ಚಿದಂಬರ ನಗರದ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೌನೇಶ ಕರಿಯಮ್ಮನವರ ಅವರನ್ನು ಹೆಚ್ಚುವರಿ ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಶಿಕ್ಷಣಾಧಿಕಾರಿಯವರು ಆದೇಶ ನೀಡಿದರು’ ಎಂದು ಹೇಳಿದರು.

‘ಬೇರೆ ಶಾಲೆಯ ಮುಖ್ಯಶಿಕ್ಷಕ ಮೌನೇಶ, ತಮ್ಮ ಶಾಲೆಯ ಮುಖ್ಯ ಶಿಕ್ಷಕ ಆಗುವುದು ಬೇಡವೆಂಬ ಅಪಸ್ವರಗಳು ಕೇಳಿಬಂದವು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿದರು. ಇದರ ನಡುವೆಯೇ ಶಿಕ್ಷಕ ಶಂಕರ ಅವರನ್ನು ಪ್ರಭಾರಿ ಮುಖ್ಯಶಿಕ್ಷರನ್ನಾಗಿ ಮಾಡಿ ಶಿಕ್ಷಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 21ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಜೀವ ಬೆದರಿಕೆಯೆಂದು ಠಾಣೆಗೆ ಮಾಹಿತಿ: ಶಂಕರ ಅವರು ಪ್ರಭಾರಿ ಮುಖ್ಯಶಿಕ್ಷಕ ಎಂಬುದು ಗೊತ್ತಾಗುತ್ತಿದ್ದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಕೆಲ ಪೋಷಕರು, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಗಾಂಧಿ ಜಯಂತಿ ದಿನದಂದು ಪರಸ್ಪರ ವಾಗ್ವಾದವೂ ನಡೆದಿದೆ. ಇದೇ ವಿಚಾರವಾಗಿ ಗುತ್ತಲ ಠಾಣೆ ಮೆಟ್ಟಿಲೇರಿದ್ದ ಶಂಕರ, ‘ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂಬುದಾಗಿ ಕೋರಿದ್ದರು. ಶಾಲೆಯಲ್ಲಿ ಸಮಸ್ಯೆಯಾದರೆ, 112ಕ್ಕೆ ಕರೆ ಮಾಡುವಂತೆ ಹೇಳಿ ಪೊಲೀಸರು ಶಿಕ್ಷಕ ಶಂಕರ್ ಅವರನ್ನು ಠಾಣೆಯಿಂದ ವಾಪಸು ಕಳುಹಿಸಿದ್ದಾರೆ ಎಂದು ಪೋಷಕರೊಬ್ಬರು ಮಾಹಿತಿ ನೀಡಿದರು.

ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಸದಸ್ಯ ಪರಶುರಾಮ ಯಲಗಚ್ಚ, ‘ಶಿಕ್ಷಕ ಶಂಕರ ಅವರು ಹುದ್ದೆಯಲ್ಲಿ ಮುಂದುವರಿಯುವುದು ಬೇಡ. ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದಿದ್ದಾರೆ.

‘ಸದಸ್ಯರಿಂದ ಕೆಲಸಕ್ಕೆ ಅಡ್ಡಿ‘ ‘ಕ್ಷೇತ್ರ ಶಿಕ್ಷಣಾಧಿಕಾರಿಯವರು ನನ್ನನ್ನು ಪ್ರಭಾರಿ ಮುಖ್ಯ ಶಿಕ್ಷಕರನ್ನಾಗಿ ಮಾಡಿ ಆದೇಶ ಕೊಟ್ಟಿದ್ದಾರೆ. ನಾನು ಪ್ರಭಾರಿ ಮುಖ್ಯಶಿಕ್ಷಕನಾಗಿ ಕೆಲಸ ಮಾಡುತ್ತೇನೆಂದು ತಿಳಿದ ಎಸ್‌ಡಿಎಂಸಿಯ ಕೆಲ ಸದಸ್ಯರು ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಶಿಕ್ಷಕ ಶಂಕರ ಎನ್.ಎ. ಹೇಳಿದರು. ಹುದ್ದೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಶಿಕ್ಷಣಾಧಿಕಾರಿಯವರು ನೀಡಿರುವ ಆದೇಶದಂತೆ ನಾನು ಕೆಲಸ ಮಾಡುತ್ತೇನೆ’ ಎಂದರು.

ಪ್ರಭಾರಿ ಮುಖ್ಯ ಶಿಕ್ಷಕ ಹುದ್ದೆ ಗೊಂದಲದ ಮಾಹಿತಿ ಇದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.
ಸುರೇಶ ಹುಗ್ಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾವೇರಿ
ಶಿಕ್ಷಕ ಶಂಕರ ಅವರನ್ನು ಪ್ರಭಾರಿ ಮುಖ್ಯ ಶಿಕ್ಷಕ ಎಂಬುದಾಗಿ ಆದೇಶ ನೀಡಲಾಗಿದೆ. ಅದೇ ಹುದ್ದೆಯಲ್ಲಿ ಅವರು ಮುಂದುವರಿಯುತ್ತಾರೆ.
ಮೌನೇಶ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.