ADVERTISEMENT

ಕೊರೊನಾ ಸೋಂಕು ನಿವಾರಣೆಗೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:59 IST
Last Updated 31 ಜುಲೈ 2020, 15:59 IST
ಹಾವೇರಿಯ ವಿದ್ಯಾನಗರದ ಮನೆಯೊಂದರಲ್ಲಿ ಮಹಿಳೆಯರು ಶುಕ್ರವಾರ ಲಕ್ಷ್ಮಿ ದೇವಿಗೆ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು 
ಹಾವೇರಿಯ ವಿದ್ಯಾನಗರದ ಮನೆಯೊಂದರಲ್ಲಿ ಮಹಿಳೆಯರು ಶುಕ್ರವಾರ ಲಕ್ಷ್ಮಿ ದೇವಿಗೆ ಆರತಿ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು    

ಹಾವೇರಿ: ‘ಕೊರೊನಾ ಸೋಂಕು ನಿವಾರಣೆಯಾಗಲಿ, ನಾಡಿನ ಜನರು ಸುರಕ್ಷಿತವಾಗಿರಲಿ’ ಎಂದು ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಜನರು ವರಮಹಾಲಕ್ಷ್ಮಿ ಹಬ್ಬವನ್ನು ಸರಳವಾಗಿ ಆಚರಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ನಗರ ಪ್ರದೇಶದ ಮನೆಗಳಲ್ಲಿ ಅಷ್ಟಾಗಿ ಸಂಭ್ರಮ ಕಾಣಲಿಲ್ಲ. ಈ ಬಾರಿ ಸರಳವಾಗಿ ಹಬ್ಬ ಆಚರಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಮೊರೆ ಇಟ್ಟರು. ಹಳ್ಳಿ ಮನೆಗಳಲ್ಲಿ ಮಾವಿನ ತೋರಣ, ಜೋಳದ ದಂಟು, ಗುರೆಳ್ಳು ಹೂವಿನ ಸಿಂಗಾರವನ್ನು ಮಾಡಿದ್ದರು.

ಪ್ರತಿ ವರ್ಷ ಸಂಬಂಧಿಕರು ಮತ್ತು ನೆರೆಹೊರೆಯವರು ಇತರರ ಮನೆಗಳಿಗೆ ಹೋಗುತ್ತಿದ್ದರು. ಈ ಬಾರಿ ತಮ್ಮ–ತಮ್ಮ ಮನೆಗಳಲ್ಲಿಯೇ ಕುಟುಂಬಸ್ಥರೊಡನೆ ಒಗ್ಗೂಡಿ ಹಬ್ಬ ಮಾಡಿದರು. ಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದೇವಿಗೆ ಸೀರೆ ಉಡಿಸಿ, ಬಂಗಾರದ ವಡವೆಗಳಿಂದ ಅಲಂಕರಿಸಿದ್ದರು. ಹೂ–ಹಣ್ಣು, ಕರಿಗಡುಬು, ತರಹೇವಾರಿ ಉಂಡಿ, ಸಿಹಿ ಖಾದ್ಯಗಳನ್ನು ಇಟ್ಟು ಪೂಜಿಸಿದರು.

ADVERTISEMENT

ವಿಶೇಷವಾಗಿ ಯುವತಿಯರು ಒಳ್ಳೆಯ ಪತಿ ಸಿಗಲಿ ಎಂದು ಲಕ್ಷ್ಮೀದೇವಿಗೆ 3 ವರ್ಷ ಅಥವಾ 5 ವರ್ಷಗಳ ಹರಕೆ ಕಟ್ಟಿಕೊಳ್ಳುತ್ತಾರೆ. ಕೊನೆಯ ವರ್ಷ ಅದ್ಧೂರಿಯಾಗಿ ಲಕ್ಷ್ಮೀಪೂಜೆ ಮಾಡಿ, ಇಷ್ಟಾರ್ಥ ಸಿದ್ಧಿಗೆ ಬೇಡಿಕೊಳ್ಳುತ್ತಾರೆ. ನೆರೆಹೊರೆಯವರಿಗೆ ಕುಂಕುಮ ಕೊಟ್ಟು, ಆಶೀರ್ವಾದ ಪಡೆಯುತ್ತಾರೆ. ಈ ಸಂಪ್ರದಾಯ ಮೊದಲಿನಿಂದಲೂ ಬಂದಿದೆ ಎಂದು ದೇವಗಿರಿ, ಕರ್ಜಗಿ ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.