ADVERTISEMENT

ಹಾವೇರಿ: ಹೆಚ್ಚುವರಿ ಬ್ಯಾರಕ್‌ ನಿರ್ಮಾಣಕ್ಕೆ ಸಿದ್ಧತೆ

ಜಿಲ್ಲಾ ಕಾರಾಗೃಹದ ಬಂದಿಗಳ ದಟ್ಟಣೆ ನಿಯಂತ್ರಿಸಲು ₹3 ಕೋಟಿ ವೆಚ್ಚದಲ್ಲಿ ಕಾಮಗಾರಿ

ಸಿದ್ದು ಆರ್.ಜಿ.ಹಳ್ಳಿ
Published 19 ಏಪ್ರಿಲ್ 2021, 19:30 IST
Last Updated 19 ಏಪ್ರಿಲ್ 2021, 19:30 IST
ಹಾವೇರಿ ತಾಲ್ಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದ ಹೊರನೋಟ  –ಪ್ರಜಾವಾಣಿ ಚಿತ್ರ 
ಹಾವೇರಿ ತಾಲ್ಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದ ಹೊರನೋಟ  –ಪ್ರಜಾವಾಣಿ ಚಿತ್ರ    

ಹಾವೇರಿ: ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳ ದಟ್ಟಣೆ ಕಡಿಮೆಗೊಳಿಸಲು ₹3 ಕೋಟಿ ವೆಚ್ಚದಲ್ಲಿ ಕಾರಾಗೃಹದ ಮೇಲಂತಸ್ತಿನಲ್ಲಿ ಹೆಚ್ಚುವರಿ ಬ್ಯಾರಕ್‌ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಸಲಾಗಿದೆ.

2021–22ನೇ ಸಾಲಿನ ‘ರಾಜ್ಯ ಬಜೆಟ್’‌ನಲ್ಲಿ ರಾಜ್ಯದ 8 ವಿವಿಧ ಕಾರಾಗೃಹಗಳಿಗೆ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲು₹40 ಕೋಟಿ ಮೀಸಲಿಡಲಾಗಿದೆ. ಪ್ರಸ್ತುತ ಬಂದಿಗಳ ದಟ್ಟಣೆಯಿಂದ ಕೂಡಿರುವಂತಹ ಕಲ್ಬುರ್ಗಿ, ಮೈಸೂರು, ಬಳ್ಳಾರಿ ಕೇಂದ್ರ ಕಾರಾಗೃಹಗಳು; ಕೊಪ್ಪಳ, ಹಾವೇರಿ ಹಾಗೂ ಉಡುಪಿಯ ಜಿಲ್ಲಾ ಕಾರಾಗೃಹಗಳು; ಹುಬ್ಬಳ್ಳಿ ಮತ್ತು ಗೋಕಾಕ್‌ ತಾಲ್ಲೂಕು ಕಾರಾಗೃಹಗಳಲ್ಲಿ ಹೆಚ್ಚುವರಿ ಬ್ಯಾರಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬಂದಿಗಳ ಸಂಖ್ಯೆ ಹೆಚ್ಚಳ:

ADVERTISEMENT

ಕೆರಿಮತ್ತಿಹಳ್ಳಿ ಗ್ರಾಮದ ಸರ್ವೆ ನಂ.139ರಲ್ಲಿ 15 ಎಕರೆ ಪ್ರದೇಶವನ್ನು ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ಮಂಜೂರು ಮಾಡಲಾಗಿತ್ತು. ಇಲ್ಲಿ 2 ಎಕರೆ 20 ಗುಂಟೆ ಸ್ಥಳದಲ್ಲಿ 110 ಬಂದಿಗಳಿಗೆ ಸ್ಥಳಾವಕಾಶ ಒದಗಿಸುವ ‘ಸಬ್‌ ಜೈಲ್‌’ ಕಟ್ಟಡವನ್ನು 2008ರಲ್ಲಿ ನಿರ್ಮಿಸಲಾಯಿತು. 2016ರಲ್ಲಿ ‘ಜಿಲ್ಲಾ ಕಾರಾಗೃಹ’ ಎಂದು ಮೇಲ್ದರ್ಜೆಗೇರಿತು. ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾನಗಲ್‌ನಲ್ಲಿದ್ದ ಉಪ ಕಾರಾಗೃಹಗಳನ್ನು ಕಳೆದೆರಡು ವರ್ಷಗಳಲ್ಲಿ ಮುಚ್ಚಿದ ಪರಿಣಾಮ ಜಿಲ್ಲಾ ಕಾರಾಗೃಹದಲ್ಲಿ ಬಂದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು.

ಪ್ರಸ್ತುತ 155 ಕೈದಿಗಳು:

ಜಿಲ್ಲಾ ಕಾರಾಗೃಹದಲ್ಲಿ ಪ್ರಸ್ತುತ 150 ವಿಚಾರಣಾಧೀನ ಕೈದಿಗಳು, 5 ಸಜಾ ಕೈದಿಗಳು ಸೇರಿದಂತೆ ಒಟ್ಟು 155 ಕೈದಿಗಳು ಇದ್ದಾರೆ. ಈ ಪೈಕಿ 12 ಮಹಿಳೆಯರೂ ಇದ್ದಾರೆ. ಕಾರಾಗೃಹದ ಸಾಮರ್ಥ್ಯಕ್ಕಿಂತ 45 ಹೆಚ್ಚುವರಿ ಕೈದಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಕೋವಿಡ್‌ಗೂ ಮುನ್ನ 240ಕ್ಕೂ ಅಧಿಕ ಬಂದಿಗಳು ದಾಖಲಾದ ಉದಾಹರಣೆಯೂ ಇದೆ.

250 ಬಂದಿಗಳಿಗೆ ಸ್ಥಳಾವಕಾಶ:

‘ಪರಸ್ಪರ ಅಂತರದೊಂದಿಗೆ ಬಂದಿಗಳನ್ನು ಜಾಗರೂಕತೆ ಮತ್ತು ಭದ್ರತೆಯಿಂದ ಇರಿಸಿಕೊಳ್ಳಲು ಭವಿಷ್ಯದ ದೃಷ್ಟಿಯಿಂದ ಹಾವೇರಿ ಜಿಲ್ಲೆಗೆ ಕನಿಷ್ಠ 250 ಬಂದಿಗಳ ದಾಖಲಿಸಲು ಅನುಕೂಲವಾಗುವಂತೆ ಹೆಚ್ಚುವರಿ ಬ್ಯಾರಕ್‌ ನಿರ್ಮಾಣ ನಿರ್ಮಿಸಿಕೊಡಲು ಇಲಾಖೆಯ ಡಿಜಿಪಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಮ್ಮತಿ ಸಿಕ್ಕಿದ್ದು, ಬಜೆಟ್‌ನಲ್ಲೂ ₹3 ಕೋಟಿ ಅನುದಾನ ದೊರೆತಿದೆ. ಲೋಕೋಪಯೋಗಿ ಇಲಾಖೆ ಅಥವಾ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಮೇ ಮೊದಲ ವಾರದಿಂದ ಕಾಮಗಾರಿ ಆರಂಭಗೊಂಡು 6 ತಿಂಗಳ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್‌ ಹೇಳಿದರು.

ಸಿಬ್ಬಂದಿಗೆ ವಸತಿ ಸೌಲಭ್ಯ:

ಜಿಲ್ಲಾ ಕಾರಾಗೃಹದ ಸಿಬ್ಬಂದಿಗೆ ಪ್ರತ್ಯೇಕವಾದ ವಸತಿ ಗೃಹಗಳಿಲ್ಲ. ಹೀಗಾಗಿ ಜಿಲ್ಲಾ ಸಶಸ್ತ್ರ ಮೀಡಲು ಪಡೆಯ ವಸತಿ ಸಮುಚ್ಚಯದಲ್ಲಿ ತಾತ್ಕಾಲಿಕ ವಸತಿ ನೀಡಲಾಗಿದೆ. ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕಾರಾಗೃಹದ ಮುಂಭಾಗ ಖಾಲಿ ಇರುವ ಪ್ರದೇಶದಲ್ಲಿ 24 ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿದೆ. ಮೇ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಲೋಕೇಶ್‌ ಮಾಹಿತಿ ನೀಡಿದರು.

‘ಕೈದಿಗಳಿಗೆ ಮನಃಪರಿವರ್ತಾನಾ ಘಟಕ’

‘ಹಾವೇರಿ ಜಿಲ್ಲಾ ಕಾರಾಗೃಹದ ಮೇಲಂತಸ್ತಿನಲ್ಲಿ 8 ಬ್ಯಾರಕ್‌, 6 ಸೆಲ್‌ ಹಾಗೂ 4 ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. 8 ಬ್ಯಾರಕ್‌ಗಳ ಪೈಕಿ 6ರಲ್ಲಿ ಕೈದಿಗಳಿಗೆ ಸ್ಥಳಾವಕಾಶ, ಉಳಿದ 2 ಬ್ಯಾರಕ್‌ಗಳಲ್ಲಿ ಮನಃಪರಿವರ್ತನಾ ಘಟಕ ಮತ್ತು ಗ್ರಂಥಾಲಯ ತೆರೆಯಲಾಗುವುದು. ಇಲ್ಲಿ ಕೈದಿಗಳಿಗೆ ಧ್ಯಾನ, ಯೋಗ, ವೃತ್ತಿಪರ ತರಬೇತಿ ನೀಡಲಾಗುವುದು’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್‌ ತಿಳಿಸಿದರು.

ಕೈದಿಗಳಿಂದ ಅಗರಬತ್ತಿ ತಯಾರಿಕೆ ಪ್ಯಾಕ್‌ ಮಾಡಿಸಲು ‘ಮೈಸೂರಿನ ಸೈಕಲ್‌ ಪ್ಯೂರ್‌ ಅಗರಬತ್ತಿ ಸಂಸ್ಥೆ’ಯೊಂದಿಗೆ ಮಾತುಕತೆ ನಡೆಸಿದ್ದೇವೆ. ಇದರಿಂದ ದಿನಕ್ಕೆ ₹150ರಿಂದ ₹200ರವರೆಗೆ ಕೈದಿಗಳು ದುಡಿಮೆ ಮಾಡಬಹುದು. ಅಷ್ಟೇ ಅಲ್ಲದೆ, ಮೋಟಾರ್‌ ರಿವೈಂಡಿಂಗ್‌, ಪಂಪ್‌ಸೆಟ್‌, ಮಿಕ್ಸಿ, ಟಿ.ವಿ., ಫ್ರಿಡ್ಜ್‌ ಮುಂತಾದ ವಿದ್ಯುತ್‌ ಉಪಕರಣಗಳ ರಿಪೇರಿ ತರಬೇತಿಯನ್ನು ನೀಡಲು ‘ರುಡ್‌ಸೆಟ್‌' ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಹೆಚ್ಚುವರಿ ಬ್ಯಾರಕ್‌ಗಳ ಕಾಮಗಾರಿ ಪೂರ್ಣಗೊಂಡ ನಂತರ ಈ ಎಲ್ಲ ಚಟುವಟಿಕೆಗಳು ಆರಂಭವಾಗಲಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.