
ಹಾನಗಲ್: ‘ಒಂದೆಡೆ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿದ್ದರೆ, ಇತ್ತ ಸರ್ಕಾರ ಖಾಸಗಿ ಶಾಲೆಗಳನ್ನು ತೆರೆಯಲು ಎಗ್ಗಿಲ್ಲದೆ ಅನುಮತಿ ನೀಡುತ್ತಿದೆ’ ಎಂದು ಕರ್ನಾಟ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಅಧ್ಯಕ್ಷ ಪಿ. ಕೃಷ್ಣೇಗೌಡ ಹರಿಹಾಯ್ದರು.
ಸೋಮವಾರ ಇಲ್ಲಿನ ಬಾಬು ಜಗಜೀವನರಾಮ್ ಭವದಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ರಾಜ್ಯದ ಅಂಗನವಾಡಿಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಎಲ್ಲ ಸೌಲಭ್ಯವಿದ್ದರೂ, ವ್ಯವಸ್ಥೆ ಸರಿಯಿಲ್ಲ’ ಎಂದು ಆಪಾದಿಸಿದರು.
‘ನಮ್ಮ ಸಂಘಟನೆಗೆ ಕನ್ನಡ ಸೇವೆಗೆ ಮಾತ್ರ ಸೀಮಿತವಾಗಿಲ್ಲ. ಗಡಿ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತಿದ್ದೇವೆ. ಸಾಮಾಜಿಕ, ಶೈಕ್ಷಣಿಕ ಕೆಲಸಗಳಿಗೆ ಮುಂದಾಗಿದ್ದೇವೆ’ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ನಮ್ಮ ಭಾಷೆಯ ಅಭಿಮಾನ ಎತ್ತಿ ಹಿಡಿಯಬೇಕು. ಕನ್ನಡ ಭಾಷೆಯ ಸಂಪ್ರದಾಯ ಉಳಿವಿಗಾಗಿ ಕಾಲಕಾಲಕ್ಕೆ ಆಡಳಿತ ನಡೆಸಿದ ಸರ್ಕಾರಗಳು ಕಾಳಜಿ ವಹಿಸಿವೆ. ನಮ್ಮ ಸಂಸ್ಕೃತಿಯ ಶ್ರೀಮಂತಿಕೆಗಾಗಿ ಹಲವಾರು ಸಂಘಟನೆಗಳ ಶ್ರಮ ಸ್ತುತ್ಯರ್ಹ’ ಎಂದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ‘ಸತ್ಯ, ನ್ಯಾಯ, ಧರ್ಮದ ಆಸಕ್ತಿ ಮೂಡಿಸುವಲ್ಲಿ ಕನ್ನಡ ಸಂಘಟನೆಗಳು ಮುಂದಾಗಲಿ. ಟೀಕಾಕಾರರೇ ಈಗ ವಿಜೃಂಭಿಸುತ್ತಿದ್ದಾರೆ. ನಮ್ಮ ಸಂವಿಧಾನದ ಆಶಯವೇ ನಮ್ಮೆಲ್ಲರ ನಡವಳಿಕೆಯಾಗಬೇಕು. ಅಪರಾಧಗಳು ಇಳಿದು, ಉಪಕಾರಗಳು ಬೆಳಗಲಿ. ನಮ್ಮ ಮನೆಗಳು ಸಂತಸದ ಮನೆಗಳಾಗಿಲಿ’ ಎಂದರು.
ಸ್ವಾಭಿಮಾನಿ ಬಣದ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ನಾಗರಾಜ ಮಡಿವಾಳರ, ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಮುರಡಣ್ಣನವರ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಗೀತಾ ಅರಳೆಲಿಮಠ, ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ತಾಂದಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ತಾಲ್ಲೂಕು ಅಧ್ಯಕ್ಷ ಗುರುನಾಥ ಗವಾಣಿಕರ, ಗಣ್ಯರಾದ ವೀರೇಶ ಹಿತ್ತಲಮನಿ, ಎಚ್.ಎಚ್. ಹೆಬ್ಬಾಳ, ಲಕ್ಷ್ಮೀ ಜೋಶಿ, ರೂಪಾ ಬಂಗಿ, ಜಿ.ಎಸ್. ಪಾಟೀಲ, ಶೀಲಾ ಭದ್ರಾವತಿ, ಪ್ರಕಾಶ ಗೋಣೆಮ್ಮನವರ, ವಾಗೀಶ ಎಮ್ಮಿ, ಜ್ಯೋತಿ ಚಿಗಳ್ಳಿ, ನಾಗರಾಜ ಶಿಡ್ಲಣ್ಣನವರ, ಸಲೀಂ ಬೇಗ್, ರುಕ್ಮಿಣಿ ಹೂಲಿಕಟ್ಟಿ, ಜಿ.ಎಸ್. ಪಾಟೀಲ, ಪ್ರೇಮಾ ಮುದ್ದಿ, ಪ್ರಕಾಶ ಪರಪ್ಪಗೌಡ್ರ, ರಮೆಶ ಮಾಕನೂರ, ರೇಣುಕಾ ಮುದ್ದಿ, ಶಂಭು ಕೇರಿ ಇದ್ದರು.
ಇದಕ್ಕೂ ಮುನ್ನ ಗ್ರಾಮದೇವಿ ಪಾದಗಟ್ಟಿ ಬಳಿಯಿಂದ ಬಾಬು ಜಗಜೀವರಾಮ್ ಭವನ ತನಕ ಕನ್ನಡಾಂಬೆಯ ಚಿತ್ರದ ಮೆರವಣಿಗೆ ವಾದ್ಯ ವೈಭವಗಳ ಸಮೇತ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.