ADVERTISEMENT

ಶಿಗ್ಗಾವಿ | ಉದ್ಘಾಟನೆ ಆಗದ ಡಿಪೊ: ತಪ್ಪದ ಯಾತನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 4:02 IST
Last Updated 4 ಆಗಸ್ಟ್ 2025, 4:02 IST
ಶಿಗ್ಗಾವಿಯ ಗಂಗೆಬಾವಿ ರಸ್ತೆಯಲ್ಲಿ ನಿರ್ಮಿಸಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ
ಶಿಗ್ಗಾವಿಯ ಗಂಗೆಬಾವಿ ರಸ್ತೆಯಲ್ಲಿ ನಿರ್ಮಿಸಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ   

ಶಿಗ್ಗಾವಿ: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜ್ಯ–ಹೊರ ರಾಜ್ಯಗಳ ಬಸ್‌ಗಳು ಹಾದು ಹೋಗುವ ಶಿಗ್ಗಾವಿ ತಾಲ್ಲೂಕಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಘಟಕ ಆರಂಭವಾಗುತ್ತಿಲ್ಲವೆಂಬ ಕೊರಗು ಜನರನ್ನು ಕಾಡುತ್ತಿದೆ.

ಶಿಗ್ಗಾವಿ–ಸವಣೂರು ತಾಲ್ಲೂಕುಗಳನ್ನು ಒಳಗೊಂಡು ವಿಧಾನಸಭಾ ಕ್ಷೇತ್ರ ರಚಿಸಲಾಗಿದೆ. ಆದರೆ, ಸವಣೂರಿನಲ್ಲಿ ಮಾತ್ರ ಸ್ವತಂತ್ರ ಡಿಪೋ ಇದೆ. ಇದೇ ಡಿಪೋದಿಂದ ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನ ಹಳ್ಳಿಗಳಿಗೆ ಬಸ್‌ಗಳು ಸಂಚರಿಸುತ್ತವೆ.

ಶಿಗ್ಗಾವಿಯಲ್ಲಿ ಡಿಪೋ ಇಲ್ಲದಿದ್ದರಿಂದ, ಸವಣೂರಿನಿಂದ ಕಾರ್ಯಾಚರಿಸುತ್ತಿರುವ ಬಸ್‌ಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲವೆಂಬುದು ಜನರ ಆರೋಪ.

ADVERTISEMENT

ಸಂಚಾರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಶಿಗ್ಗಾವಿಯ ಗಂಗಿಭಾವಿ ರಸ್ತೆಯಲ್ಲಿ ಹೊಸದಾಗಿ ಸುಸಜ್ಜಿತ ಡಿಪೋ ನಿರ್ಮಿಸಲಾಗಿದೆ. ಆದರೆ, ಆಡಳಿತ ನಡೆಸುವವರ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಉದ್ಘಾಟನೆಯಾಗಿಲ್ಲ. ಡಿಪೋ ಆವರಣದಲ್ಲಿರುವ ಕಟ್ಟಡಗಳು, ಬಸ್‌ ಸ್ವಚ್ಛತಾ ಸ್ಥಳಗಳು ಪಾಳು ಬಿದ್ದಂತೆ ಕಾಣುತ್ತಿವೆ. ಡಿಪೋದ ಗೇಟ್‌ಗಳು ಸಹ ತುಕ್ಕು ಹಿಡಿಯುವತ್ತ ಸಾಗಿವೆ.

ಸದ್ಯ ಸಂಸದರಾಗಿರುವ ಬಸವರಾಜ ಬೊಮ್ಮಾಯಿ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿಪೋ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಅದೇ ಅನುದಾನದಲ್ಲಿ ಡಿಪೋ ಕಟ್ಟಡ ನಿರ್ಮಿಸಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನೂರಾರು ಕೋಟಿ ಖರ್ಚು ಮಾಡಿ ನಿರ್ಮಿಸಿದ ಡಿಪೋವನ್ನು ಉದ್ಘಾಟನೆ ಮಾಡಲು ಹಿಂದೇಟು ಹಾಕುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ, ಹೋತನಹಳ್ಳಿ, ತಡಸ, ಹುಲಗೂರು, ದುಂಡಶಿ, ಹೊಸೂರು ಹಾಗೂ ಸುತ್ತಲಿನ ಗ್ರಾಮಗಳಿಗೆ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಡಿಪೋ ಆರಂಭವಾಗದಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬಸ್‌ಗಳ ಕೊರತೆ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಶಿಗ್ಗಾವಿ ತಾಲ್ಲೂಕಿನಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಬಸ್‌ಗಳ ಕೊರತೆಯೂ ಉಂಟಾಗುತ್ತಿದೆ.

ಸವಣೂರು ಬಸ್ ಡಿಪೊದಲ್ಲಿ ಸದ್ಯಕ್ಕೆ 59 ಬಸ್‌ಗಳಿವೆ. ಶಿಗ್ಗಾವಿ, ಸವಣೂರು ತಾಲ್ಲೂಕಿನ ಹಳ್ಳಿಗಳು ಹಾಗೂ ಹೊರ ಜಿಲ್ಲೆ, ಹೊರ ರಾಜ್ಯಗಳ 52 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಬೇರೆ ತಾಲ್ಲೂಕಿನಲ್ಲಿ ಪ್ರತ್ಯೇಕ ಡಿಪೋಗಳಿದ್ದು, ಅಲ್ಲಿಯ ಬಸ್‌ಗಳು ಆಯಾ ತಾಲ್ಲೂಕಿನಲ್ಲಿ ಮಾತ್ರ ಸಂಚರಿಸುತ್ತವೆ. ಆದರೆ, ಸವಣೂರು ಡಿಪೋದ ಬಸ್‌ಗಳು ಶಿಗ್ಗಾವಿ ತಾಲ್ಲೂಕಿನಲ್ಲಿ ಸಂಚರಿಸುತ್ತಿವೆ. ಎರಡೂ ತಾಲ್ಲೂಕಿಗೆ ಹೆಚ್ಚಿನ ಬಸ್‌ಗಳು ಬೇಕು. ಆದರೆ, ಒಂದೇ ಡಿಪೋ ಇರುವುದರಿಂದ ಎರಡೂ ತಾಲ್ಲೂಕಿಗೂ ಬೇಡಿಕೆಯಷ್ಟು ಬಸ್‌ ನೀಡಲು ಆಗುತ್ತಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ.

ಶಿಗ್ಗಾವಿಯಲ್ಲಿ ಪ್ರತ್ಯೇಕ ಡಿಪೋ ಆರಂಭವಾದರೆ, ಹೆಚ್ಚುವರಿಯಾಗಿ 50 ಬಸ್‌ಗಳು ಬರುತ್ತವೆ. ಆಗ, ಎರಡೂ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.

‘ಮಳೆಗಾಲದಲ್ಲಿ ರಸ್ತೆ ಹದಗೆಟ್ಟಿರುವುದರಿಂದ, ಆಗಾಗ ಬಸ್‌ಗಳು ದುರಸ್ತಿ ಸ್ಥಿತಿಗೆ ಬರುತ್ತವೆ. ನಿಗದಿತ ವೇಗದಲ್ಲಿ ಚಲಿಸುವುದಿಲ್ಲ. ಹೀಗಾಗಿ, ನಿತ್ಯ ಸಂಚರಿಸುವ ಮಾರ್ಗದಲ್ಲಿ ಸಮಯ ಪಾಲಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಇತರರಿಗೆ ತೊಂದರೆಯಾಗಿದೆ’ ಎಂದು ಶಿಗ್ಗಾವಿ ಪಟ್ಟಣದ ನಿವಾಸಿ ರೋಷನ್ ಅಳಲು ತೋಡಿಕೊಂಡರು.

‘ಡಿಪೋ ಉದ್ಘಾಟನೆಯಾಗಿ, ಜನರಿಗೆ ಬಸ್ ಸೇವೆ ಸಿಗಬೇಕು. ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಬಸ್‌ಗಳು ಸಂಚರಿಬೇಕು. ಸಂಬಂಧಪಟ್ಟ ಅಧಿಕಾರಿಗಳು, ಇತ್ತ ಗಮನ ಹರಿಸಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಚಾಲನಾ ತರಬೇತಿ ಆರಂಭ

ಶಿಗ್ಗಾವಿಯ ಗಂಗಿಭಾವಿ ರಸ್ತೆಯಲ್ಲಿ ನಿರ್ಮಿಸಿರುವ ಡಿಪೋ ಬಳಿಯೇ ವಾಹನ ಚಾಲನಾ ಉಚಿತ ತರಬೇತಿ ನೀಡುವ ಕಟ್ಟಡವಿದೆ. ಮುಖ್ಯಮಂತ್ರಿ ಕುಶಲ ಕರ್ನಾಟಕ ಯೋಜನೆ ಎಸ್.ಸಿ–ಎಸ್.ಟಿ–ಟಿ.ಎಸ್.ಪಿ. ಯೋಜನೆ ಸರ್ಕಾರದ ಇತರೆ ಇಲಾಖೆ ನಿಗಮ ಮಂಡಳಿಯ ಯೋಜನೆಯಡಿ ವಾಹನಗಳ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಒಂದು ತಂಡದಲ್ಲಿ 20 ಜನರಂತೆ 4 ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತುದಾರರಿಗೆ ಊಚಿತವಾಗಿ ಊಟ ವಸತಿ ಹಾಗೂ ಎಲ್ಲ ಸೌಕರ್ಯ ನೀಡಲಾಗುತ್ತಿದೆ. ಆದರೆ ಪಕ್ಕದಲ್ಲಿರುವ ಡಿಪೋ ಮಾತ್ರ ಪಾಳು ಬಿದ್ದಿದೆ. 

ನನಸಾಗದ ಕನಸು

‘ಶಿಗ್ಗಾವಿಯಲ್ಲಿ ಪ್ರತ್ಯೇಕ ಡಿಪೋ ಆಗಬೇಕು. ಅದಕ್ಕೆ ತಕ್ಕಂತೆ ಹೊಸ ಬಸ್‌ಗಳು ಬರಬೇಕು ಎಂಬುದು ಈ ಭಾಗದ ಜನರ ಕನಸು. ಆದರೆ ಡಿಪೋ ನಿರ್ಮಾಣವಾದರೂ ಈ ಕನಸು ನನಸಾಗುತ್ತಿಲ್ಲ’ ಎಂದು ಸ್ಥಳೀಯರಾದ ದೇವೇಂದ್ರಪ್ಪ ಹಳವಳ್ಳಿ ಹಾಗೂ ಬಸಲಿಂಗಪ್ಪ ನರಗುಂದ ಅಸಮಾಧಾನ ಹೊರಹಾಕಿದರು. ‘ಹಲವಾರು ವರ್ಷಗಳಿಂದ ಸವಣೂರು ಡಿಪೋದಿಂದ ಶಿಗ್ಗಾವಿ ತಾಲ್ಲೂಕಿನ ಗ್ರಾಮಗಳಿಗೆ ಬಸ್‌ಗಳು ಸಂಚರಿಸುತ್ತಿವೆ. ಆದರೆ ಸರಿಯಾದ ಸಮಯಕ್ಕೆ ಸಂಚರಿಸುತ್ತಿಲ್ಲ. ಬಸ್‌ಗಳ ಕೊರತೆಯಿಂದಲೂ ಗ್ರಾಮೀಣ ಭಾಗದ ಜನರು  ಪರದಾಡುವಂತಾಗಿದೆ’ ಎಂದರು.

ಡಿಪೋವನ್ನು ತ್ವರಿತವಾಗಿ ಉದ್ಘಾಟಿಸಬೇಕು. ಶಿಗ್ಗಾವಿಯ ಪ್ರತಿ ಹಳ್ಳಿಗೂ ಸರಿಯಾದ ಸಮಯಕ್ಕೆ ಬಸ್‌ ಬರುವಂತಾಗಬೇಕು.
ಶಂಕರಗೌಡ ಪಾಟೀಲ, ಸ್ಥಳೀಯ ನಿವಾಸಿ
ಶಿಗ್ಗಾವಿಯ ಗಂಗೆಬಾವಿ ರಸ್ತೆಯಲ್ಲಿ ನಿರ್ಮಿಸಿರುವ ಡಿಪೊದ ಪ್ರವೇಶದ್ವಾರ ಬಂದ್ ಮಾಡಿ ಬೀಗ ಹಾಕಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.