ADVERTISEMENT

ಪಲ್ಸ್ ಪೋಲಿಯೊ ಕಾರ್ಯಕ್ರಮ|ಹಾವೇರಿ ಜಿಲ್ಲೆಯಲ್ಲಿ 1.48 ಲಕ್ಷ ಮಕ್ಕಳಿಗೆ ಲಸಿಕೆ: DC

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:09 IST
Last Updated 10 ಡಿಸೆಂಬರ್ 2025, 3:09 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಪಲ್ಸ್ ಪೋಲಿಯೊ’ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಮಂಗಳವಾರ ನಡೆಯಿತು
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಪಲ್ಸ್ ಪೋಲಿಯೊ’ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಮಂಗಳವಾರ ನಡೆಯಿತು   

ಹಾವೇರಿ: ‘ಜಿಲ್ಲೆಯಲ್ಲಿ ಡಿ. 21ರಿಂದ ಡಿ. 24ರವರೆಗೆ ರಾಷ್ಟ್ರೀಯ ಪೋಲಿಯೊ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಲಸಿಕೆ ಹಾಕಿಸಿಕೊಳ್ಳಲು ಅರ್ಹವಾದ ಸೊನ್ನೆಯಿಂದ ಐದು ವರ್ಷದೊಳಗಿನ 1.48 ಲಕ್ಷ ಮಕ್ಕಳನ್ನು ಗುರುತಿಸಲಾಗಿದ್ದು, ಅವರಿಗೆ ಲಸಿಕೆ ಹಾಕಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ. ಎಂ. ಜಯಾನಂದ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪಲ್ಸ್ ಪೋಲಿಯೊ’ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

‘ಜಿಲ್ಲೆಯ ಬೂತ್ ಮಟ್ಟದಲ್ಲಿ ಡಿ. 21ರಂದು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುವುದು. ನಂತರ, ಡಿ. 24ರವರೆಗೆ ಮನೆ ಮನೆಗಳಿಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಿದ್ದಾರೆ’ ಎಂದರು.

‘ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,11,932 ಹಾಗೂ ನಗರ ಪ್ರದೇಶದಲ್ಲಿ 36,809 ಸೇರಿದಂತೆ ಒಟ್ಟು 1,48,741 ಮಕ್ಕಳಿದ್ದಾರೆ. ಅವರು ವಯಸ್ಸು ಸೊನ್ನೆಯಿಂದ ಐದು ವರ್ಷದೊಳಗಿವೆ. ಅಂಥ ಮಕ್ಕಳಿಗೆ ಲಸಿಕೆ ಹಾಕಲು ಗ್ರಾಮೀಣ ಪ್ರದೇಶಗಳಲ್ಲಿ 806 ಹಾಗೂ ನಗರ ಪ್ರದೇಶದಲ್ಲಿ 198 ಬೂತ್‌ಗಳನ್ನು ಗುರುತಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಬಸ್‌ಗಳಲ್ಲಿ ಸಂಚರಿಸುವ ಮಕ್ಕಳಿಗೆ ಹಾಗೂ ರೈಲು ನಿಲ್ದಾಣದಲ್ಲಿ ನಿಲುಗಡೆಯಾದ ರೈಲಿನಲ್ಲಿರುವ ಮಕ್ಕಳಿಗೂ ಪೋಲಿಯೊ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 1,81,464 ಪೋಲಿಯೊ ಲಸಿಕೆಗಳ ಅವಶ್ಯಕತೆಯಿದೆ. ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಸರಬರಾಜಾಗಿದೆ. ಲಸಿಕೆ ಹಾಕಲು 2,008 ಲಸಿಕೆದಾರರು ಹಾಗೂ 196 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಇದರ ಜೊತೆಯಲ್ಲಿ, 1,438 ಆಶಾ ಕಾರ್ಯಕರ್ತೆಯರು ಹಾಗೂ 1,895 ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಸಹಕಾರ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕು. ಸೊನ್ನೆಯಿಂದ ಐದು ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಎಲ್ಲ ಇಲಾಖೆಯವರು ಸಹ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಶಾಲಾ ಮಕ್ಕಳಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಜಾಥಾ ನಡೆಸಬೇಕು. ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಕಾರ್ಯಕ್ರಮ ರಾಯಭಾರಿಯಾಗಿ ನೇಮಿಸಬೇಕು. ಖಾಸಗಿ ಶಾಲೆಗಳ ಪ್ಲೇ ಸ್ಕೂಲ್ ಹಾಗೂ ಎಲ್‌ಕೆಜಿಯಿಂದ ಯುಕೆಜಿವರೆಗಿನ ಐದು ವರ್ಷದೊಳಗಿನ ಮಕ್ಕಳ ಪೋಷಕರಿಗೆ ಪೋಲಿಯೊ ಕಾರ್ಯಕ್ರಮದ ಬಗ್ಗೆ ತಿಳಿವಳಿಕೆ ನೀಡಬೇಕು. ಪೋಲಿಯೊ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸುತ್ತೋಲೆ ಹೊರಡಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಪೋಲಿಯೊ ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್‌ಗಳನ್ನು ತಯಾರಿಸಲು ನಿರಂತರ ವಿದ್ಯುತ್ ಅವಶ್ಯಕತೆ ಇದೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ ಪ್ರದೇಶಗಳಲ್ಲಿ ಪೋಲಿಯೊ ಕಾರ್ಯಕ್ರಮದ ಮೊದಲ ಒಂದು ವಾರ ಹಾಗೂ ನಂತರದ ಮೂರು ದಿನಗಳವರೆಗೆ ವಿದ್ಯುತ್ ವ್ಯತ್ಯಯವಾಗದಂತೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಸೂಚನೆ ನೀಡಿದರು.

ಜಿ.ಪಂ. ಸಿಇಒ ರುಚಿ ಬಿಂದಲ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಜಗದೀಶ ಪಾಟೀಲ, ಡಾ. ನಿಲೇಶ, ಡಾ. ಚನ್ನವೀರಯ್ಯ ವಿರಕ್ತಮಠ, ಡಾ. ಸರಿತಾ, ಡಾ. ಪ್ರಭಾಕರ ಕುಂದೂರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.