ADVERTISEMENT

ಮತ್ತೆ ಮಳೆ ಬಂದರೆ, ಮೈಯೆಲ್ಲ ನಡುಕ

ಎತ್ತರದ ಪ್ರದೇಶದಲ್ಲಿ ನಿವೇಶನ ಹಾಗೂ ಮನೆಗೆ ಬೇಡಿಕೆ

ಹರ್ಷವರ್ಧನ ಪಿ.ಆರ್.
Published 25 ಅಕ್ಟೋಬರ್ 2019, 7:08 IST
Last Updated 25 ಅಕ್ಟೋಬರ್ 2019, 7:08 IST
ಅಂತರದಲ್ಲಿ ಹೊಳೆ ಮತ್ತು ತೋಟ ಒಂದಾಗಿರುವುದುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ.
ಅಂತರದಲ್ಲಿ ಹೊಳೆ ಮತ್ತು ತೋಟ ಒಂದಾಗಿರುವುದುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ.   

ಅಂತರ (ಚಾರ್ಮಾಡಿ): ‘ಮತ್ತೆ ಮಳೆ ಬಂದರೆ, ಕಣ್ಣುಗಳು ತೇವಗೊಳ್ಳುತ್ತವೆ. ಕೈಕಾಲುಗಳು ತಣ್ಣಗಾಗುತ್ತವೆ. ಮೈಯೆಲ್ಲ ನಡುಕ...

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿಯ ಮೃತ್ಯುಂಜಯ ಹೊಳೆ ತೀರದ ಅಂತರದ ನಿವಾಸಿ ಸರೋಜಾ, ತಮ್ಮ ನೋವನ್ನು ಹೇಳುವಾಗ ನೆರೆಯ ಭೀತಿ ಕಣ್ಣಾಲಿಗಳಲ್ಲಿ ತುಂಬಿತ್ತು. ಮಳೆ ಹನಿಯಂತೆ ಮಾತುಗಳೂ ಗದ್ಗದಿತವಾಗಿತ್ತು.

ಆ.9ರಂದು ಪಶ್ಚಿಮ ಘಟ್ಟದಲ್ಲಿ ಉಂಟಾದ ಗುಡ್ಡಕುಸಿತಕ್ಕೆ ಮೃತ್ಯುಂಜಯ ಹೊಳೆಯಲ್ಲಿ ನೆರೆಬಂದು ಅಂತರ, ಅರಣೆಪಾದೆಯ ತೀರದ ಜನರು ಸಂತ್ರಸ್ತರಾಗಿದ್ದರು.

ADVERTISEMENT

‘ಅಂದು ನಾವೆಲ್ಲ ಲಕ್ಷ್ಮೀ ಪೂಜೆಗಾಗಿ ದೇವಸ್ಥಾನಕ್ಕೆ ಹೋಗಿದ್ದೆವು. ಪತಿ ಮನೆಯಲ್ಲಿದ್ದರು. ನನ್ನ ಮಗ ಬಂದು, ‘ಅಪ್ಪಾ ಹೊಳೆಯಲ್ಲಿ ನೀರು ಬರುತ್ತಿದ್ದೆ ಏಳಪ್ಪಾ...’ ಎಂದು ಎಬ್ಬಿಸಲು ಯತ್ನಿಸಿದ್ದಾನೆ. ಆದರೆ, ‘ಹೊಳೆ ಬಳಿಗೆ ಮತ್ತೆ ಹೋಗೋಣ’ ಎಂದು ಅವರು ಮಗನಿಗೆ ಹೇಳಿದ್ದಾರೆ. ಆಗ, ‘ಅಪ್ಪಾ ಹೊಳೆ ತೋಟ ದಾಟಿ, ನಮ್ಮ ಮನೆಯಂಗಳಕ್ಕೆ ಬಂದಿದೆ. ಮೆಟ್ಟಿಲ ಬಳಿಯಿದ್ದು, ಏರುತ್ತಲೇ ಇದೆ’ ಎಂದು ಹೇಳಿದಾಗಲೇ, ಅವರಿಗೆ ಅಘಾತದ ಅರಿವಾಗಿದ್ದು. ಮಗನನ್ನು ಕರೆದುಕೊಂಡು ಎತ್ತರದ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಕೃಷಿ ತೋಟ, ಗದ್ದೆ ಮಾತ್ರವಲ್ಲ, ಮನೆ, ದನ–ಕರು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡೆವು’ ಎಂದು ಸರೋಜಾ ಅಂದಿನ ದಿನವನ್ನು ತಿಳಿಸಿದರು.

‘ಪ್ರವಾಹ ಇಳಿದ ಬಳಿಕ ಮನೆಗೆ ಬಂದಿದ್ದೆವು. ಮನೆ, ಅಂಗಳ ಸ್ವಚ್ಛಗೊಳಿಸಿದೆವು. ಹಲವರು ಸಹಾಯಹಸ್ತ ಚಾಚಿದದರು. ತೋಟವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲದ ಸ್ಥಿತಿಗೆ ಹೋಗಿತ್ತು. ಇನ್ನೊಂದು ವರ್ಷದಲ್ಲಿ ‘ಪಿಂಗಾರ’ ಬಿಡಲಿದ್ದ ಅಡಕೆ ಗಿಡವೇ ಮರಳಿನಲ್ಲಿ ಮಣ್ಣಾಗಿತ್ತು. ದೊಡ್ಡ ದೊಡ್ಡ ಮರದ ಬೊಡ್ಡೆಗಳು, ಹೂಳೆಲ್ಲ ತುಂಬಿತ್ತು. ನಾವು ಧೈರ್ಯ ಮಾಡಿಕೊಂಡಿದ್ದೆವು’ ಎಂದು ಅಂದಿನ ದಿನವನ್ನು ವಿವರಿಸಿದರು.

‘ಆದರೆ, ಅದೊಂದೇ ದಿನ ಮಾತ್ರವಲ್ಲ, ನಂತರ ಮಳೆ ಬಂದಾಗಲೆಲ್ಲ ಭಾರಿ ಹೊಳೆ ಬರಲು ಶುರುವಾಗಿದೆ. ಹೀಗೆ ಸುಮಾರು 10ಕ್ಕೂ ಹೆಚ್ಚು ಬಾರಿ ಬಂದಿದೆ. ಎರಡು ದಿನಗಳ ಹಿಂದೆಯೂ ಬಂದು–ಹೋಗಿದೆ. ಹೀಗಾಗಿ, ನಮಗೆ ಭಯವಾಗಲು ಶುರುವಾಗಿದೆ. ಮಳೆ ಬಂದರೆ ಸಾಕು, ಎದ್ದು ಕುಳಿತು ಬಿಡುತ್ತೇವೆ. ಯಾವಾಗಾ ನೆರೆ ಬರುವುದೋ ಎಂದು ಬೆಟ್ಟದ ಮುಖಮಾಡಿ ನೋಡುತ್ತೇವೆ. ರಾತ್ರಿ ಏನು ಮಾಡಲು ಸಾಧ್ಯ’ ಎನ್ನುವಾಗ ಅವರ ಮುಖದಲ್ಲಿ ನೋವಿನ ಭೀಕರತೆ ತುಂಬಿತ್ತು.

‘ಉಳಿದ ದನ–ಕರುಗಳನ್ನು ಸಾಕಲಾರದೇ ಮಾರಾಟ ಮಾಡಿದೆವು’ ಎಂದರು.

‘ಶತಮಾನಗಳಿಂದ ನಮ್ಮವರು ಇಲ್ಲೇ ವಾಸಿಸುತ್ತಿದ್ದಾರೆ. ನಮ್ಮದು ವರ್ಗ ಭೂಮಿ. ಆದರೆ, ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ‘ಮೃತ್ಯುಂಜಯ’ದಲ್ಲಿ ಈ ರೀತಿಯ ನೆರೆ ಬಂದ ಬಗ್ಗೆ ಹೇಳಿದ ನೆನಪಿಲ್ಲ. ಇದೇ ಮೊದಲ ಬಾರಿಗೆ ಹೀಗಾಗಿದೆ. ಬೆಟ್ಟದತ್ತ ನೋಡಿದರೆ, 13 ಕಡೆಗಳಲ್ಲಿ ಭೂ ಕುಸಿತ ಕಾಣುತ್ತದೆ. ಮಳೆ ಬಂದಾಗ ಭಯವಾಗುತ್ತದೆ’ ಎಂದು ಧರ್ಮಣ್ಣಗೌಡ ತಿಳಿಸಿದರು.

‘ನನ್ನ ಗದ್ದೆಗೆ ಬಿದ್ದ ಹೂಳನ್ನು ಮೊನ್ನೆ ತೆಗೆಸಿದ್ದೆನು. ಈಗ ಮತ್ತೆ ಬಂದು ತುಂಬಿದೆ’ ಎಂದು ಉದಯ ತಿಳಿಸಿದರು.

ಮೃತ್ಯುಂಜಯ ಹೊಳೆ ತೀರದ ಅಂತರ–ಅರಣೆಪಾದೆ ನಡುವೆ ಇಂತಹ ಸುಮಾರು 16ಕ್ಕೂ ಹೆಚ್ಚು ಕುಟುಂಬಗಳಿವೆ. ಹೊಸ್ಮಠ, ಪೊಂಗರದಡಿ, ಅಂತರ, ಕೊಳಂಬೆ, ಅರಣೆಪಾದೆಯಲ್ಲೂ ಪರಿಸ್ಥಿತಿ ಹೀಗಿದೆ. ಪ್ರತಿ ಮಳೆಯೂ ಅವರನ್ನು ಕಾಡುತ್ತಿದೆ.

‘ನಿವೇಶನ ನೀಡಿ’
‘ನಮ್ಮ ಕೃಷಿ ಭೂಮಿಗೆ ಪರಿಹಾರ ನೀಡಿ. ಮತ್ತೆ ಕೃಷಿ ಮಾಡುತ್ತೇವೆ. ನಾವು ಕೃಷಿಕರು, ಬದುಕಿನಲ್ಲಿ ವಿಶ್ವಾಸವಿದೆ. ಆದರೆ... ಇಲ್ಲಿ ಮನೆ ಮಾಡಿ ನಿಲ್ಲಲು ಮಾತ್ರ ಧೈರ್ಯವಿಲ್ಲ. ಮಳೆ ಬಂದಾಗಲೆಲ್ಲ ಭಯ ಕಾಡುತ್ತದೆ. ಎಷ್ಟು ಬಾರಿ ದೇವಸ್ಥಾನಕ್ಕೆ ಹೋಗಿ ಮಲಗಬಹುದು? ಎತ್ತರದ ಪ್ರದೇಶದಲ್ಲಿ ನಮಗೆ ಐದು ಸೆನ್ಸ್ ನಿವೇಶನ ಹಾಗೂ ಮನೆ ಕೊಡಿ. ನಮ್ಮ ಬದುಕು ನಾವು ಕಟ್ಟಿಕೊಳ್ಳುತ್ತೇವೆ’ ಎಂದು ಸರೋಜಾ, ಧರ್ಮಣ್ಣ, ಕಲಾವತಿ, ಉದಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.