
ಹಾವೇರಿ: ಜಿಲ್ಲೆಯಾದ್ಯಂತ ಹಿಂಗಾರು ಮಳೆ ಶುರುವಾಗಿದ್ದು, ಮೋಡ ಕವಿದ ವಾತಾವರಣ ಹೆಚ್ಚಾಗಿದೆ. ಆಗಾಗ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದೆ. ರಸ್ತೆ, ಮೈದಾನ ಹಾಗೂ ಖಾಲಿ ಪ್ರದೇಶದಲ್ಲಿ ಒಣಗಲು ಹಾಕಿರುವ ಮೆಕ್ಕೆಜೋಳ, ತೇವಾಂಶ ಹೆಚ್ಚಾಗಿ ಕೊಳೆಯಲಾರಂಭಿಸಿದೆ. ಮೆಕ್ಕೆಜೋಳ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ಬಹುತೇಕ ರೈತರು, ಕಣ್ಣೆದುರೇ ಬೆಳೆ ಕೊಳೆಯುತ್ತಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ.
ಜಿಲ್ಲೆಯ ಹಲವು ಕಡೆಗಳಲ್ಲಿ ಒಣಗಲು ಹಾಕಿರುವ ಜಾಗದಲ್ಲಿಯೇ ಮೆಕ್ಕೆಜೋಳ ಫಸಲು ಮೊಳಕೆಯೊಡೆಯುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಎಕರೆಗೆ ₹ 20 ಸಾವಿರದಿಂದ ₹ 30 ಸಾವಿರವರೆಗೂ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದ ರೈತರು, ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
‘ಕಡಿಮೆ ಮಳೆ ಬಂದರೂ ಕಷ್ಟ, ಹೆಚ್ಚು ಮಳೆ ಬಂದರೂ ಕಷ್ಟ’ ಎನ್ನುತ್ತಲೇ ಕೃಷಿ ಮಾಡುತ್ತಿರುವ ರೈತರು, ಕಳೆದ ಮುಂಗಾರಿನಲ್ಲಿ ಮಳೆ ತಡವಾಗಿ ಬಂದಿದ್ದರಿಂದ ಬಿತ್ತನೆಯನ್ನೂ ತಡವಾಗಿ ಮಾಡಿದ್ದರು. ಜೋರು ಮಳೆಯಿಂದಾಗಿ ಜವಳು ಹಿಡಿದು ಹಾನಿಯಾಗಿದ್ದ ಮೆಕ್ಕೆಜೋಳವನ್ನು ಸಂಪೂರ್ಣವಾಗಿ ನಾಶಪಡಿಸಿ, ಪುನಃ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು.
ಬೀಜಗಳ ಬಿತ್ತನೆ ಅವಧಿಯಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ನಿಗದಿಗಿಂತಲೂ ತಡವಾಗಿ ಮುಂಗಾರು ಬೆಳೆ ರೈತರ ಕೈಗೆ ಸೇರಿದೆ. ಹಿಂಗಾರು ಆರಂಭವಾಗಿ ತಿಂಗಳು ಕಳೆಯುತ್ತಿದೆ. ಇಂಥ ಸಂದರ್ಭದಲ್ಲಿಯೇ ಹಲವು ಕಡೆಗಳಲ್ಲಿ ಮುಂಗಾರು ಬೆಳೆಯ ಕಟಾವು ಶುರುವಾಗಿದೆ. ಹೀಗೆ, ಕಟಾವು ಮಾಡಿದ ಮೆಕ್ಕೆಜೋಳ ಫಸಲನ್ನು ಒಣಗಿಸುವುದೇ ರೈತರಿಗೆ ಸವಾಲಾಗಿ ಮಾರ್ಪಟ್ಟಿದೆ.
ಜಿಲ್ಲೆಯ ಸವಣೂರು ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿಯೇ ಕೆಲ ರೈತರು ಮೆಕ್ಕೆಜೋಳವನ್ನು ಒಣಗಲು ಹಾಕಿದ್ದಾರೆ. ಕೆಲದಿನಗಳಿಂದ ಪ್ರತಿ ದಿನವೂ ಸಂಜೆ ಜೋರಾಗಿ ಸುರಿದ ಮಳೆಯಿಂದಾಗಿ ಬಹುತೇಕ ಮೆಕ್ಕೆಜೋಳ ಹಾಳಾಗಿದೆ. ಮೆಕ್ಕೆಜೋಳದ ಕಾಳುಗಳು, ಕರಿ ಬಣಕ್ಕೆ ತಿರುಗಿವೆ. ಕಾಳುಗಳು ಸ್ಥಳದಲ್ಲಿಯೇ ಮೊಳಕೆಯೊಡೆದಿವೆ.
ಮೆಕ್ಕೆಜೋಳ ಒಣಗಿಸಲು ರೈತರು ಎಪಿಎಂಸಿ ಆವರಣದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ತಾಡಪತ್ರಿ ಹಾಗೂ ಇತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ, ಹೆಚ್ಚು ಮಳೆ ಬಂದರೆ ಮೆಕ್ಕೆಜೋಳವಿರುವ ಜಾಗದಲ್ಲಿಯೇ ನೀರು ಹರಿಯುತ್ತಿದೆ. ಇದೇ ನೀರಿನಿಂದಾಗಿ ಕಾಳುಗಳಲ್ಲಿ ತೇವಾಂಶ ಹೆಚ್ಚಾಗುತ್ತಿದೆ. ಜೊತೆಗೆ, ಬೆಳೆಯೂ ಹಾಳಾಗುತ್ತಿದೆ.
‘ಕಾಳುಗಳು ತೇವಾಂಶದಿಂದ ಹಾಳಾದರೂ ಮರುದಿನ ಬಿಸಿಲು ಬಂದರೆ ಒಣಗಿಸಬಹುದು’ ಎಂದು ರೈತರು ಕಾಯುತ್ತಿದ್ದಾರೆ. ಆದರೆ, ಕೆಲದಿನಗಳಿಂದ ಬಿಸಿಲಿನ ಪ್ರಮಾಣವೂ ಕಡಿಮೆಯಾಗಿದೆ. ಆಗಾಗ ಮಾತ್ರ ಬಿಸಿಲು ಕಾಣಿಸುತ್ತಿದೆ. ಇದು ಸಹ ಕಾಳುಗಳು ಕೊಳೆಯಲು ಕಾರಣವಾಗುತ್ತಿದೆ. ಮೆಕ್ಕೆಜೋಳವನ್ನು ಪಶುಗಳ ಆಹಾರ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಈಗ ಕಾಳು ಕೊಳೆಯುತ್ತಿರುವುದರಿಂದ, ಮೆಕ್ಕೆಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಯಂತ್ರದಿಂದ ಬಿಡಿಸಿದ ಕಾಳುಗಳು: ಕೃಷಿ ಚಟುವಟಿಕೆಯಲ್ಲಿ ಕಾರ್ಮಿಕರ ಕೊರತೆ ಸಾಕಷ್ಟಿದೆ. ಜಮೀನಿನಲ್ಲಿ ತೆನೆ ಬಿಡಿಸಲು ಕಾರ್ಮಿಕರು ಸಿಗುವುದಿಲ್ಲ. ಹೀಗಾಗಿ, ರೈತರು ಯಂತ್ರದಿಂದ ನೇರವಾಗಿ ಜಮೀನಿನಲ್ಲಿಯೇ ಕಟಾವು ಮಾಡಿಸುತ್ತಿದ್ದಾರೆ. ಇದರಿಂದಾಗಿ ಕಾಳು ಹಾಗೂ ಬೆಂಡ ಪ್ರತ್ಯೇಕವಾಗಿ ಬರುತ್ತಿದೆ. ಯಂತ್ರದಿಂದ ಬಂದ ಕಾಳನ್ನು ರೈತರು ನೇರವಾಗಿ ಎಪಿಎಂಸಿ ಪ್ರಾಂಗಣ ಹಾಗೂ ಖಾಲಿ ಜಾಗಕ್ಕೆ ಕೊಂಡೊಯ್ದು ಒಣಗಿಸುತ್ತಿದ್ದಾರೆ.
ಮಳೆ ಇರುವುದರಿಂದ ಕಾಳುಗಳನ್ನು ರಕ್ಷಣೆ ಮಾಡುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಮಳೆ ಬಂದಾಗ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಕಾಳುಗಳ ರಕ್ಷಣೆ ಮಾಡಲು ಆಗುತ್ತಿಲ್ಲ. ಖಾಲಿ ಪ್ರದೇಶದಲ್ಲಿರುವ ಕಾಳುಗಳ ಬಳಿಯೇ ನೀರು ಹರಿದು, ಜವಳು ಹಿಡಿಯುತ್ತಿದೆ.
‘ಕೆಲ ರೈತರು, ಕಾರ್ಮಿಕರನ್ನು ಬಳಸಿಕೊಂಡು ಜಮೀನಿನಲ್ಲಿ ತೆನೆಗಳನ್ನು ಕೊಯ್ದು ಕೆಲದಿನ ಬಿಟ್ಟು ಕಾಳು ಮಾಡಿಸಿ ಮಾರುತ್ತಾರೆ. ಕಾರ್ಮಿಕರ ಕೊರತೆ ಇರುವ ಕಡೆಗಳಲ್ಲಿ ನೇರವಾಗಿ ಯಂತ್ರದಿಂದ ಕಾಳುಗಳನ್ನು ಮಾಡಿಸಲಾಗುತ್ತದೆ. ಹೀಗೆ, ಮಾಡಿಸಿದ ಕಾಳುಗಳ ರಕ್ಷಣೆ ಸವಾಲಾಗಿದೆ. ಸವಣೂರು ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳ ಕಾಳುಗಳು ಹಾಳಾಗಿ, ಮೊಳಕೆಯೊಡೆಯುವ ಸ್ಥಿತಿಗೆ ಬಂದಿವೆ’ ಎಂದು ಸವಣೂರು ತಾಲ್ಲೂಕಿನ ಜೇಕಿನಕಟ್ಟಿ ರೈತ ಯಲ್ಲಪ್ಪ ದೇಸೂರು ಹೇಳಿದರು.
ಶಿಗ್ಗಾವಿ ರೈತ ಮಹಾವೀರ, ‘ಮುಂಗಾರು ಮಳೆಯಿಂದ ಮೆಕ್ಕೆಜೋಳ ಭಾಗಶಃ ಹಾಳಾಗಿದೆ. ಈಗ ಅಲ್ಪಸ್ವಲ್ಪ ಫಸಲು ಬಂದಿತ್ತು. ಮಳೆಯಿಂದಾಗಿ ಫಸಲು ಸಹ ಕೈಗೆ ಸಿಗದಂತಾಗಿದೆ. ನಮ್ಮ ರೈತರ ಸ್ಥಿತಿ ಯಾರಿಗೂ ಬೇಡ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಈಗ ಸಾಲ ತೀರಿಸಲು ಹಣ ಸಾಲುವುದಿಲ್ಲ’ ಎಂದು ಅಳಲು ತೋಡಿಕೊಂಡರು.
‘ಮಳೆಯಿಂದ ಕೊಳೆಯುತ್ತಿರುವ ಬೆಳೆಯ ಬಗ್ಗೆ ಸರ್ಕಾರ ಸಮೀಕ್ಷೆ ಮಾಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಒಣಗಲು ಹಾಕಿದ್ದ 50 ಕ್ವಿಂಟಲ್ ಮೆಕ್ಕೆಜೋಳ ಮಳೆಯಿಂದ ಹಾಳಾಗಿದೆ. ಸಾಕಷ್ಟು ರೈತರು ಈ ಗೋಳು ಅನುಭವಿಸುತ್ತಿದ್ದಾರೆ. ಮಳೆಯಿಂದಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕುಶಿವಪ್ಪ ದೇಸೂರು ಜೇಕಿನಕಟ್ಟಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.