ಶಿಗ್ಗಾವಿ: ಕಳೆದ ಒಂದು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಹಾನಿಯಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಶಿಗ್ಗಾವಿ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿನಿ ಚಂದ್ರಕಾಂತ್, ತಹಶೀಲ್ದಾರ್ ಸಂತೋಷ ಹಿರೇಮಠ ಅವರು ಬುಧವಾರ ಮಳೆ ಹಾನಿ ವೀಕ್ಷಿಸಿದರು.
ನ್ಯಾಯಾಧೀಶರಾದ ಅಶ್ವಿನಿ ಚಂದ್ರಕಾಂತ್ ಮಾತನಾಡಿ, ‘ಸತತ ಮಳೆಯಿಂದ ತಾಲ್ಲೂಕಿನಾದ್ಯಂತ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲಿ ಶಿಗ್ಗಾವಿ ಪಟ್ಟಣದ ವಡ್ಡರ ಓಣಿಯಲ್ಲಿಯ ಸಿದ್ದವ್ ಗುಳೇದ, ಶಾಂತವ್ವ ಗುಳೇದ, ತಿಪ್ಪವ್ವ ಶಿವಳ್ಳಿ ಅವರ ಮನೆ ಬಿದ್ದಿರುವುದನ್ನು ಪರಿಶೀಲಿಸಲಾಗಿದೆ. ರಾಜೀವ ನಗರದ ಮುಕ್ತಾಂಬಿ ತಾಳಿಕೋಟಿ ಅವರ ಮನೆ ಸಂಪೂರ್ಣ ಬಿದ್ದಿದ್ದು, ತಕ್ಷಣ ಅವರ ಕುಟುಂಬವನ್ನು ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರಗಳನ್ನು ತೆರಯಬೇಕು. ಹೆಚ್ಚಿನ ಹಾನಿ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದರು.
ತಹಶೀಲ್ದಾರ್ ಸಂತೋಷ ಹಿರೇಮಠ ಮಾತನಾಡಿ, ‘ತಾಲ್ಲೂಕಿನ್ಯಾದಂತ 480 ಮನೆಗಳು ಅತಿವೃಷ್ಟಿಗೆ ಹಾಳಾಗಿವೆ ಎಂದು ಅರ್ಜಿಗಳು ಬಂದಿವೆ. ಅದರಲ್ಲಿ ಅರ್ಹ 47 ಮನೆಗಳ ವರದಿಯನ್ನು ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮನೆ ಹಾನಿಯಾದ ಸಂತ್ರಸ್ತರಿಗೆ ಅಂಗನವಾಡಿ, ಸಮುದಾಯ ಭವನಗಳಲ್ಲಿ ವಾಸಕ್ಕಾಗಿ ವ್ಯವಸ್ಥೆ ಮಾಡಲಾಗಿದೆ’ ಎಂದರು.
ತಹಶೀಲ್ದಾರ್ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.