ADVERTISEMENT

ರಂಗಭೂಮಿ| ಶ್ರೀಶೈಲ ಹುದ್ದಾರರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 15:32 IST
Last Updated 30 ಅಕ್ಟೋಬರ್ 2022, 15:32 IST
ಶ್ರೀಶೈಲ ಹುದ್ದಾರ
ಶ್ರೀಶೈಲ ಹುದ್ದಾರ   

ಶಿಗ್ಗಾವಿ: ರಂಗಭೂಮಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಪಟ್ಟಣದ ರಂಭಾಪುರಿ ಕಾಲೇಜಿನ ಪ್ರಾಧ್ಯಾಪಕ ಶ್ರೀಶೈಲ ಹುದ್ದಾರ ಅವರಿಗೆ 2022ನೇ ಸಾಲಿಗೆ ಸರ್ಕಾರ ರಂಗಭೂಮಿ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇಡೀ ತಾಲ್ಲೂಕಿನ ಸಾಹಿತಿ, ಕಲಾಬಳಗದಲ್ಲಿ ಹರ್ಷ ಮೂಡಿಸಿದೆ.

ಶ್ರೀಶೈಲ ಹುದ್ದಾರ ಅವರು ನವಲಗುಂದ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಜನಿಸಿದರು. ಶಿಗ್ಗಾವಿ ಪಟ್ಟಣ ರಂಭಾಪುರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಲ್ಲಿ ಗ್ರಾಮದಲ್ಲಿ ನಡೆಯುವ ನಾಟಕಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದರು. ಕಾಲೇಜು ದಿನಗಳಲ್ಲಿ ನಾಟಕ, ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಧಾರವಾಡ ಜಿಲ್ಲೆಯಲ್ಲಿ 90ರ ದಶಕದಲ್ಲಿ ನಡೆದ ಸಾಕ್ಷರತಾ ಆಂದೋಲನ ಪ್ರಾರಂಭವಾದಾಗ ಅದರಲ್ಲಿ ಆರು ವರ್ಷ ಜಿಲ್ಲಾ ಸಂಯೋಜನಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಕ್ಷರತಾ ತರಬೇತಿ ನೀಡುವ ಜತೆಗೆ ನೂರಾರು ಬೀದಿ ನಾಟಕಗಳನ್ನು ಪ್ರದರ್ಶನ ನೀಡಿದ್ದಾರೆ. ಅನೇಕ ನಾಟಗಳನ್ನು ನಿರ್ದೇಶಿಸಿದ್ದಾರೆ. ಕಲ್ಕಿ ಕಾಲ, ಧಿಕ್ಕಾರ, ಓ ಬೆಳಕೆ, ಅಕ್ಷರ ಲೋಕ... ಹೀಗೆ ಅನೇಕ ನಾಟಕಗಳನ್ನು ರಚಿಸಿದ್ದಾರೆ.

ADVERTISEMENT

ಇವರು ಬರೆದ ‘ಕರಕೊಂಡು ನಡೆಯೂ ನಿನ್ನ ಸಂಗಡ’ ಎನ್ನುವ ಹಾಡು ಸಾಕ್ಷರತಾ ಕಾರ್ಯಕರ್ತರಿಗೆ ಹೊಸ ಸ್ಪೂರ್ತಿ ನೀಡಿತ್ತು. ಖ್ಯಾತ ನಿರ್ದೇಶಕ ಬಿ.ವಿ. ಕಾರಂತರ ನಿದೇರ್ಶನದಲ್ಲಿ ಷೇಕ್ಸ್‌ಪಿಯರ್‌ನ ಕಿಂಗ್ ಲಿಯರ್ ನಾಟಕದಲ್ಲಿ ಖಳನಾಯಕನ ಪಾತ್ರ ಮಾಡಿ ಜನಮನದ ಮೆಚ್ಚುಗೆ ಪಡೆದಿದ್ದಾರೆ.

ನಂತರ ಬಸವ ವಿಜಯ, ಕನಕ ವಿಜಯ, ಬುದ್ಧ ಪ್ರಬುದ್ಧ, ನಿಜಗುಣ ಶಿವಯೋಗಿ, ಸರಹದ್ದು, ಅಲ್ಲಮನಾಟಕ ಹೀಗೆ ಹಲವು ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ಅವುಗಳ ಪ್ರದರ್ಶನ ನೀಡಿದ್ದಾರೆ. ಮಕ್ಕಳ ರಂಗಭೂಮಿಗಾಗಿ 25 ವರ್ಷಗಳಿಂದ ಶಿಬಿರ ಸಂಘಟನೆ ಮಾಡಿದ್ದಾರೆ. ಹೇಗೆ ಸಣ್ಣಾಟ, ದೊಡ್ಡಾಟ ಪ್ರದರ್ಶಸುವ ಮೂಲಕ ಹೊಸ, ಹೊಸ ಪ್ರಯೋಗಳನ್ನು ಮಾಡುವ ಮೂಲಕ ಜನರಿಂದ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಬಯಲಾಟ ಅಕಾಡೆಮಿಯಿಂದ ಪ್ರಶಸ್ತಿ ಪಡೆದಿದ್ದಾರೆ.

‘ಗ್ರಾಮೀಣ ರಂಗಭೂಮಿ ನಾಟಕ ಕಲೆ ಉಳಿಸಿ ಬೆಳೆಸುವಲ್ಲಿ ಈ ವರೆಗೆ ಶ್ರಮಿಸಿದ್ದರು. ಸರ್ಕಾರ ನಮ್ಮನ್ನು ಗುರುತಿಸಿ ಪ್ರೋತ್ಸಾಹಿರುವುದುಹರ್ಷ ತಂದಿದೆ’ ಎಂದು ಶ್ರೀಶೈಲ ಹುದ್ದಾರ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.